Thursday, November 15, 2007

'ಬುದ್ಧಿವಂತ'ನಾದ ಉಪೇಂದ್ರ !

ಬಾಲಿವುಡ್ ಬಾದ್‌ಶಾ ಶಾರೂಕ್ ಖಾನ್‌ ಆದಿಯಾಗಿ ಬಾಲಿವುಡ್‌ನ ಹೀರೋಗಳಾದ ಸಲ್ಮಾನ್ ಖಾನ್, ಹೃತಿಕ್ ರೋಷನ್, ಅಕ್ಷಯ್ ಕುಮಾರ್- ಇವರುಗಳೆಲ್ಲ ತೆರೆಮೇಲೆ ತಮ್ಮ ಕಟ್ಟುಮಸ್ತಾದ ದೇಹ ತೋರಿಸಿ ಸಿನಿಪ್ರಿಯರನ್ನು ಆಕರ್ಷಿಸುತ್ತಿರೋದು ಗೊತ್ತೇ ಇದೆಯಲ್ಲ. ಬಾಲಿವುಡ್ ಗಾಳಿ ಸ್ಯಾಂಡಲ್‌ವುಡ್ಡಿಗೂ ವ್ಯಾಪಿಸಿದೆ.ಇದೀಗ ನಮ್ಮ ಕನ್ನಡ ನಾಯಕ ನಟ ಉಪೇಂದ್ರ ತಮ್ಮ ಷರ್ಟ್ ಬಿಚ್ಚುವ ಅಭಿಯಾನ ಮುಂದುವರಿಸಿದ್ದಾರೆ.ಕ‌ನ್ನಡ ಚಿತ್ರರಂಗದಲ್ಲಿ ನಾಯಕ ನಟರು ಮೈ ತೋರಿಸುವ ಸಂಪ್ರದಾಯಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿಲ್ಲದಿರೋದು ಮಾತ್ರ ನಿಜಕ್ಕೂ ದುರ್ದೈವ ಅನ್ನೋದು ಗಾಂಧಿನಗರದ ಸಿನಿಮಾ ಪಂಡಿತರ ಗೊಣಗು.ಇತ್ತೀಚಿಗೆ ನಟ ಉಪೇಂದ್ರ ತಮ್ಮದೇ ನಿರ್ದೇಶನದ 'ಉಪೇಂದ್ರ' ಚಿತ್ರದಲ್ಲಿ ಷರ್ಟ್ ರಹಿತವಾಗಿ ಅಭಿನಯಿಸಿದ್ದರು. ಆದರೆ ಅದೇನು ಹೆಚ್ಚು ಸುದ್ದಿಯಾಗಲಿಲ್ಲ. ಇದೀಗ ಅದೇ ಉಪೇಂದ್ರ ತಮ್ಮ ಬಿಚ್ಚಾಟ ಮುಂದುವರಿಸಿದ್ದಾರೆ. 'ಬುದ್ದಿವಂತ' ಅನ್ನೋ ಚಿತ್ರದಲ್ಲಿ ತಮ್ಮ ಮೈ ಹುರಿ ಮಾಡಿಕೊಂಡು ತೆರೆದೆದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಉಪ್ಪಿ.ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ನಿರ್ಮಿಸುತ್ತಿರುವ ಬುದ್ಧಿವಂತ ಚಿತ್ರದ ಉಪ ಶೀರ್ಷಿಕೆ ಏನು ಗೊತ್ತೇ? 'ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಮಾತ್ರ'.ಈ ಹಿಂದೆ ತಮ್ಮ 'ಎ' ಚಿತ್ರದಲ್ಲಿ 'ಬುದ್ಧಿವಂತರಿಗೆ ಮಾತ್ರ' ಎಂಬ ಉಪಶೀರ್ಷಿಕೆಯಿಂದ ಗಿಮಿಕ್ ಮಾಡಿದ್ದ ಉಪ್ಪಿ, ಇದೀಗ 'ಬುದ್ದಿವಂತ' ಚಿತ್ರದಲ್ಲಿ 'ಕಡ್ಡಾಯವಾಗಿ ಹೆಣ್ಣು ಮಕ್ಕಳಿಗೆ ಮಾತ್ರ' ಅನ್ನೋ ಉಪ ಶೀರ್ಷಿಕೆ ಸೇರಿಸಿದ್ದಾರೆ! ಕನ್ನಡ ಪ್ರೇಕ್ಷಕ ಅಲ್ಲಲ್ಲ, ಪ್ರೇಕ್ಷಕಿಯರು ಹೇಗೆ ಸ್ವೀಕರಿಸುತ್ತಾರೋ ಅನ್ನೋದು ಕಾದು ನೋಡಬೇಕಿರುವ ವಿಚಾರ.

No comments: