Wednesday, November 28, 2007

ಮಿಲನ-ದಿ ಕಲರ್ ಆಫ್ ಲವ್

(ಕರ್ಟೆಸೀ:ವೆಬ್ ದುನಿಯಾ)
ಈ ಹಿಂದೆ ಪ್ರಕಾಶ್‌ ನಿರ್ದೇಶನದ, ವಿಜಯ ರಾಘವೇಂದ್ರ ಅಭಿನಯದ "ಶ್ರೀ" ಚಿತ್ರವನ್ನು ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿದ್ದ ಕೆ.ಎಸ್.ದುಶ್ಯಂತ್, ಮತ್ತದೇ ನಿರ್ದೇಶಕರ ಮೇಲೆ ಭರವಸೆಯಿಟ್ಟು ಪುನೀತ್ ರಾಜ್ ಕುಮಾರ್ ಅಭಿನಯದ "ಮಿಲನ" ಚಿತ್ರ ನಿರ್ಮಿಸಿದ್ದು, ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.ಈ ಚಿತ್ರದ ವಿಶೇಷವೆಂದರೆ, ಮುಂಗಾರು ಮಳೆ ಖ್ಯಾತಿಯ ನಿರ್ದೇಶಕ ಮನೋಮೂರ್ತಿ ಹಾಗೂ 'ಅನಿಸುತಿದೆ ಯಾಕೋ ಇಂದು' ಎಂಬ ವರ್ಷದ ಗೀತೆಯನ್ನು ನೀಡಿದ ಸಾಹಿತಿ ಜಯಂತ ಕಾಯ್ಕಿಣಿಯವರು ಮತ್ತೊಮ್ಮೆ ಜತೆಯಾಗಿರುವುದು. ಈ ಚಿತ್ರದ ಹಾಡುಗಳು ಕೂಡ ಸುಮಧುರವಾಗಿವೆ ಎಂದು ಹೇಳಲಾಗಿದ್ದು, "ಮುಂಗಾರು ಮಳೆ"ಯ ಸಂಗೀತ ಸಾಹಿತ್ಯದ ರಂಗನ್ನು "ಮಿಲನ"ದಲ್ಲೂ ಸುರಿಸಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಉತ್ತಮವಾದ ಕತೆ, ಚಿತ್ರಕತೆ ಹಾಗೂ ಅಭಿನಯಕ್ಕೆ ಪೂರಕವಾಗಿ ಸುಮಧುರ ಸಂಗೀತ, ಅರ್ಥಪೂರ್ಣ ಸಾಹಿತ್ಯ ಹಾಗೂ ಮನೋಹರವಾದ ಹೊರಾಂಗಣ ದೃಶ್ಯಗಳು ಒಡಮೂಡಿವೆ ಎಂದು ಹೇಳಲಾಗಿದೆ. ಇದುವರೆಗೂ 'ಅಜೇಯ'ರಾಗಿ ಮುಂದುವರಿದಿರುವ ಪುನೀತ್ ಇಲ್ಲು ಕೂಡ ಅದೇ ಜಾಡನ್ನು ಮುಂದುವರಿಸಲಿದ್ದಾರೆಯೇ ಎನ್ನುವುದಕ್ಕಿಂತಲೂ, ಖುಷಿ, ರಿಷಿಯ ನಂತರ ಹ್ಯಾಟ್ರಿಕ್ ತಪ್ಪಿಸಿಕೊಂಡ ಪ್ರಕಾಶ್‌ಗೆ ಇದು ಬಹುಮುಖ್ಯವಾದ ಚಿತ್ರವಾಗಿದೆ.ಈಗಾಗಲೆ ಪುನೀತ್ ಅಭಿನಯದ ಹಿಂದಿನ ಚಿತ್ರ 'ಅರಸು' ಸೂಪರ್ ಹಿಟ್ ಆಗಿರುವುದರಿಂದ ಸಹಜವಾಗಿಯೇ ಅವರ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ. ಪುನೀತ್‍‌ಗೆ ನಾಯಕಿಯಾಗಿ ಪಾರ್ವತಿ ಮೆನನ್ ಅಭಿನಯಿಸಿದ್ದಾರೆ. "ಮಿಲನ", ಪ್ರೀತಿಯ ರಂಗನ್ನು ಚೆಲ್ಲಲಿದೆಯೇ ಇಲ್ಲವೇ ಎನ್ನುವುದನ್ನು ನೋಡುವುದಕ್ಕಾದರೂ ಮರೆಯದೆ ಚಿತ್ರ ನೋಡಿರಿ ಗೆಳೆಯರೆ!

No comments: