ಗಣೇಶನಿಗೆ ಗಣೇಶನೇ ಸವಾಲು ಹಾಕಿದ್ದಾನೆ! ಇನ್ನೇನು 'ಮುಂಗಾರು ಮಳೆ' ಚಿತ್ರ, 'ಬಂಗಾರದ ಮನುಷ್ಯ'ದಾಖಲೆಯನ್ನು ಮುರಿಯುತ್ತದೆ ಎನ್ನುವ ಹೊತ್ತಿಗೆ 'ಕೃಷ್ಣ' ಅಡ್ಡ ಬಂದು ನಿಂತಿದ್ದಾನೆ. ವಿಷಯ ಏನೆಂದರೆ ಈವಾರ 'ಕೃಷ್ಣ'ತೆರೆಗೆ ಬಂದಿದ್ದಾನೆ. ಆದರೆ ಈ ಚಿತ್ರ ಈಗ ನಡೆಯುತ್ತಿರುವ 'ಮುಂಗಾರು ಮಳೆ' ಚಿತ್ರವನ್ನೇ ಎತ್ತಂಗಡಿ ಮಾಡಿದೆ. ಮಳೆ ಬೀಳುತ್ತಿರುವ 12ಚಿತ್ರಮಂದಿರಗಳಲ್ಲಿ 'ಕೃಷ್ಣ'ತೆರೆಕಂಡಿದೆ.ಶುಕ್ರವಾರ(ಅ.05) ಬೆಂಗಳೂರಿನ ಸಾಗರ್, ಪ್ರಮೋದ್, ಉಮಾ, ನಂದಿನಿ, ಗೋವರ್ಧನ್, ಸಿದ್ದಲಿಂಗೇಶ್ವರ, ಬಾಲಾಜಿ, ಕಾಮಾಕ್ಯ, ಸೇರಿದಂತೆ ರಾಜ್ಯದ ವಿವಿಧೆಡೆ 'ಕೃಷ್ಣ'ಬಿಡುಗಡೆಯಾಗಿದೆ. ಅಲ್ಲಿಗೆ ಗಣೇಶನ ಚಿತ್ರಕ್ಕೆ ಗಣೇಶನ ಚಿತ್ರವೇ ಅಡ್ಡಗಾಲು ಹಾಕಿದಂತಾಗಿದೆ. ಮಳೆಯ ಮೋಡಿಯನ್ನು ಕೃಷ್ಣ ಮಾಡುತ್ತಾನಾ? ಸದ್ಯಕ್ಕೆ ಅಬ್ಬರವಂತೂ ಜೋರಾಗಿದೆ. ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ,ಚೆಲುವಿನ ಚಿತ್ತಾರ ನಂತರ ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ ಐದನೇ ಚಿತ್ರ; ಕೃಷ್ಣ. ಚೆಲ್ಲಾಟ ಸಾಮಾನ್ಯ ಗೆಲುವನ್ನು ಪಡೆದರೆ, ಮಳೆ ಮತ್ತು ಚಿತ್ತಾರ ಚಿತ್ರಗಳು ದಾಖಲೆಯ ಗೆಲುವನ್ನು ಮಡಿಲಿಗೆ ಹಾಕಿಕೊಂಡಿವೆ. ಹುಡುಗಾಟ ಚಿತ್ರವನ್ನು ಬಲವಂತದಿಂದ ಓಡಿಸಲಾಗಿದೆ ಎಂಬ ಮಾತುಗಳೂ ಇಲ್ಲದಿಲ್ಲ.ಕೃಷ್ಣ ಚಿತ್ರದ ನಿರ್ಮಾಪಕ ರಮೇಶ್ ಯಾದವ್. 'ಚೆಲ್ಲಾಟ'ದ ನಂತರ ನಿರ್ದೇಶಕ ಎಂ.ಡಿ.ಶ್ರೀಧರ್ ಮತ್ತು ನಾಯಕ ಗಣೇಶ್ ಮತ್ತೆ ಜೊತೆಯಾಗಿದ್ದಾರೆ. 'ಸಜನಿ'ಯ ಶರ್ಮಿಳಾ ಮಾಂಡ್ರೆ, 'ಮುಂಗಾರುಮಳೆ'ಯ ಸಂಜನಾ ಚಿತ್ರದಲ್ಲಿದ್ದಾರೆ. ಶರಣ್, ಅವಿನಾಶ್, ವಿನಯಪ್ರಕಾಶ್, ಸುಧಾ ಬೆಳವಾಡಿ, ಭರತ್ ಭಾಗವತರ್, ವಿಜಯಸಾರಥಿ ಚಿತ್ರದ ಇನ್ನುಳಿದ ತಾರಾಬಳಗ. ಶೇಖರ್ ಚಂದ್ರು ಛಾಯಾಗ್ರಹಣ, ಮಧು ಸಂಭಾಷಣೆ, ಕೌರವ ವೆಂಕಟೇಶ್ ಮತ್ತು ರವಿವರ್ಮರ ಸಾಹಸ ಚಿತ್ರಕ್ಕಿದೆ. ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.
ಶ್ರೇವೆಂಕಟ್
No comments:
Post a Comment