ಕಳೆದ ಹದಿನೈದು ದಿನಗಳ ಬಾಕ್ಸಾಫೀಸ್ ಲೆಕ್ಕಾಚಾರದ ಪ್ರಕಾರ, ಗಣೇಶ್ ಅಭಿನಯದ 'ಕೃಷ್ಣ' ಮುನ್ನಡೆ ಸಾಧಿಸಿದೆ. ಜೊತೆಗೆ ಅವರ 'ಚೆಲುವಿನ ಚಿತ್ತಾರ' ಮತ್ತು 'ಮುಂಗಾರು ಮಳೆ'ಆರ್ಭಟ ಮುಂದುವರೆದಿದೆ. ಟಾಪ್5 ಪಟ್ಟಿ ಇಲ್ಲಿದೆ :
1. ಕೃಷ್ಣ : ಕಳೆದ 10ತಿಂಗಳಿಂದ ಗಣೇಶ್ ಚಿತ್ರಗಳೇ ಟಾಪ್ 1ರಲ್ಲಿ ಉಳಿದಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಕೃಷ್ಣ' ಚಿತ್ರಕ್ಕೆ, ರಾಜ್ಯದೆಲ್ಲೆಡೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು,ಕೋಲಾರ ಮತ್ತು ತುಮಕೂರಿನಲ್ಲಿಯೇ ಚಿತ್ರ ಬಿಡುಗಡೆಯಾದ ಮೊದಲ ವಾರ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಪೂಜಾ ಗಾಂಧಿ ಮತ್ತು ಶರ್ಮಿಳಾ ಚಿತ್ರದ ನಾಯಕಿಯರು.
2. ಮಿಲನ : ಪಾರ್ವತಿ ಮತ್ತು ಪೂಜಾ ಗಾಂಧಿ ಜೊತೆ ಪುನೀತ್ ಅಭಿನಯಿಸಿರುವ ಈ ಚಿತ್ರ ನಿಧಾನವಾಗಿ, ಚಿತ್ರಮಂದಿರಗಳಿಗೆ ಕಚ್ಚಿಕೊಳ್ಳುತ್ತಿದೆ. ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ 'ಮಿಲನ'ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳೂ ಇವೆ. ನಿರ್ದೇಶಕ ಪ್ರಕಾಶ್ ಗೆ ಚಿತ್ರದ ಯಶಸ್ಸು ಖುಷಿ ತಂದಿದೆ.
3. ಚೆಲುವಿನ ಚಿತ್ತಾರ : ರಜತ ಮಹೋತ್ಸವದತ್ತ ಚಿತ್ರ ಸಾಗುತ್ತಿದೆ. ಹುಬ್ಬಳ್ಳಿ ಏರಿಯಾ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರದ ಗಳಿಕೆ ಚೆನ್ನಾಗಿದೆ. ನಿರ್ಮಾಪಕ ಮತ್ತು ನಿರ್ದೇಶಕ ಎಸ್.ನಾರಾಯಣ್ ಅವರಂತೂ ದುಡ್ಡು ಎಣಿಸಿ, ಸುಸ್ತಾಗಿದ್ದಾರೆ!
4. ಮುಂಗಾರು ಮಳೆ : ಈಗಾಗಲೇ 300ದಿನ ಪೂರ್ಣಗೊಳಿಸಿರುವ ಚಿತ್ರ, ಮುಖ್ಯ ಚಿತ್ರಮಂದಿರಗಳಿಂದ ಸಣ್ಣಪುಟ್ಟ ಚಿತ್ರಮಂದಿರಗಳಿಗೆ ಎತ್ತಂಗಡಿಯಾಗಿದೆ. ಬೆಂಗಳೂರು ಹೊರವಲಯದಲ್ಲಿ, ತಾಲೂಕು ಕೇಂದ್ರಗಳಲ್ಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
5. ಅನಾಥರು : ಆರಂಭದ ಅಬ್ಬರ ಕಡಿಮೆಯಾಗಿದೆ. ಉಪೇಂದ್ರ, ದರ್ಶನ್ ಅವರಂಥ ಸ್ಟಾರ್ ಗಳಿದ್ದರೂ ಗಳಿಕೆ ಇತ್ತೀಚೆಗೆ ಇಳಿಮುಖವಾಗುತ್ತಿದೆ. ಪಿತಾಮಗನ್ ಎಂಬ ರೀಮೇಕ್ ಚಿತ್ರವನ್ನು ಸಾಧು ಕೋಕಿಲಾ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ಅಪಾರ ಮೊತ್ತಕ್ಕೆ ರಾಧಿಕಾ ಚಿತ್ರದ ಹಂಚಿಕೆ ಹಕ್ಕುಗಳ ಪಡೆದಿದ್ದು,ನಿರ್ಮಾಪಕರು ಬಚಾವ್ ಆಗಿದ್ದಾರೆ. ಲಾಭವೋ, ನಷ್ಟವೋ ಸದ್ಯಕ್ಕಂತೂ ರಾಧಿಕಾ ಈ ಬಗ್ಗೆ ಏನನ್ನೂ ಹೇಳಿಲ್ಲ.
Subscribe to:
Post Comments (Atom)
No comments:
Post a Comment