Monday, September 29, 2008

ಗಾನಕೋಗಿಲೆ ಲತಾ ಮಂಗೇಶ್ಕರ್ ಜನ್ಮದಿನೋಸ್ತವ

ತಮ್ಮ ಅಪ್ರತಿಮ ಕಂಠದ ಮೂಲಕ ಆರು ದಶಕಗಳಿಂದ ಸಂಗೀತ ಪ್ರೇಮಿಗಳ ಮನಗೆಲ್ಲುತ್ತಿರುವ ಗಾನಕೋಗಿಲೆ ಲತಾ ಮಂಗೇಶ್ಕರ್ 80ನೇ ವರ್ಷಕ್ಕೆ ಅಡಿಯಿಟ್ಟರು। ಭಾನುವಾರ ಪುಣೆಯ ತಮ್ಮ ಮನೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಪುಣೆಯ ಬಾಲಗಂಗಾಧರ್ ರಂಗ ಮಂದಿರದಲ್ಲಿ ಲತಾ ಅವರ ಸಹೋದರ ಹೃದನಾಥ್ ಮಂಗೇಶ್ಕರ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ವಿಕ್ರಂ ಭಟ್ ರ ''1920'' ಎಂಬ ಬಾಲಿವುಡ್ ಚಿತ್ರದಲ್ಲಿ ಲತಾ ಅವರು ಪಂಡಿತ್ ಜಸ್ ರಾಜ್ ಹಾಗೂ ಆಶಾ ಬೋಂಸ್ಲೆ ಯೊಂದಿಗೆ ತೀರಾ ಇತ್ತೀಚೆಗಷ್ಟೆ ಹಾಡಿದ್ದರು। ತಮ್ಮ 75 ನೇ ಹುಟ್ಟುಹಬ್ಬವನ್ನು ಲತಾ ಮಂಗೇಶ್ಕರ್ ಮುಂಬೈನ ತಮ್ಮ ನಿವಾಸದಲ್ಲಿ ಆಚರಿಸಿಕೊಂಡಿದ್ದರು. ಆಗ ಅವರ ಹುಟ್ಟು ಹಬ್ಬದ ಸಮಾರಂಭಕ್ಕೆ ಶರದ್ ಪವಾರ್, ಎಲ್.ಕೆ.ಅಡ್ವಾಣಿ ಹಾಜರಾಗಿದ್ದರು. ಅವರು ತಮ್ಮ ಹುಟ್ಟುಹಬ್ಬವನ್ನು ಮುಂಬೈಯಲ್ಲಿ ಆಚರಿಸಿಕೊಂಡಿದ್ದೆ ವಿರಳ. ಅವರು ಯಾವತ್ತು ಪುಣೆ ಅಥವಾ ಕೊಲ್ಲಾಪುರದ ತಮ್ಮ ನಿವಾಸಗಳಲ್ಲಿ ಸರಳವಾಗಿ, ಖಾಸಗಿಯಾಗಿ ಹುಟ್ಟುಹಬ್ಬವನ್ನು ಆಚರಿಕೊಳ್ಳುತ್ತಿದ್ದರು.

ಖ್ಯಾತ ರಂಗಭೂಮಿ ಕಲಾವಿದ ದೀನಾನಾಥ್ ಮಂಗೇಶ್ಕರ್ ಪುತ್ರಿಯಾಗಿ ಲತಾ ಮಂಗೇಶ್ಕರ್ ಜನಿಸಿದ್ದು 1929ರಲ್ಲಿ। ತಂದೆ ಅಕಾಲಿಕ ಮರಣಕ್ಕೀಡಾದಾಗ 13ರ ಹರಯದಲ್ಲಿದ್ದ ಲತಾ ಅವರಿಗೆ ಸಂಸಾರದ ಹೊಣೆ ಹೆಗಲೇರಿತು. ಸಂಸಾರ ನೌಕೆಯನ್ನು ಸಾಗಿಸಲು ಮೊದಲು ಲತಾ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಹಾಗಾಗಿ ಅವರು ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ಹಾಡಲು ಅವಕಾಶಗಳು ದೊರೆತ ಬಳಿಕ ಗಾಯಕಿಯಾಗಿ ಬದಲಾದರು.

ಆರಂಭದಲ್ಲಿ ಲತಾ ಅವರಿಗೆ ನಟಿಯಾಗಿಯೇ ಮುಂದುವರಿಯುವ ಆಲೋಚನೆ ಇತ್ತು। 1947ರಲ್ಲಿ ಬಿಡುಗಡೆಯಾದ 'ಆಪ್ ಕಿ ಸೇವಾ ಮೆ' ಚಿತ್ರದಲ್ಲಿ ಹಾಡಲು ಮೊದಲ ಅವಕಾಶ ದೊರೆಯಿತು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. ಹಲವಾರು ಭಾಷೆಗಳಲ್ಲಿ ಹಾಡಿರುವ ಲತಾ ಮಂಗೇಶ್ಕರ್ ಕನ್ನಡ ಚಿತ್ರ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಎಂದು ಹಾಡಿದ್ದರು. ನಂತರ ಈ ಗಾನಕೋಗಿಲೆ ಕನ್ನಡಲ್ಲಿ ಹಾಡಲಿಲ್ಲ.

No comments: