
ಗಿರೀಶ್ ಕಾಸರವಳ್ಳಿ ಸಿನಿಮಾ ಅಂದರೆ ಅಲ್ಲಿ ಏನೋ ವಿಶೇಷ ಇರುತ್ತದೆ. ಅದು ಕಾದಂಬರಿ ಯೊಂದನ್ನು ಆಧರಿಸಿದ ಚಿತ್ರವಾದರೂ ಅಲ್ಲಿ ಕಾಸರವಳ್ಳಿ ಘಮಲು, ಕಲಾತ್ಮಕತೆಯ ಸೊಗಡು, ಮಣ್ಣಿನ ವಾಸನೆಯಿರುತ್ತದೆ. ಕೊನೆಗೊಂದು ಸಂದೇಶದ ಜತೆಗೆ ಬಿಡಿಸಲಾಗದ ಬದುಕಿನ ಸತ್ಯ ದರ್ಶನ. ಆ ಮೂಲಕ `ಇದಕ್ಕೆ ನೀವೇ ಉತ್ತರ ಕಂಡುಕೊಳ್ಳಿ' ಎಂದು ಪರೋಕ್ಷವಾಗಿ ಸಮಾಜಕ್ಕೆ ಸವಾಲು ಹಾಕುತ್ತಾರೆ ಕಾಸರವಳ್ಳಿ. ಅವರದೇ ಆದ ನಿರೂಪಣಾ ಶೈಲಿ, ನವಿರಾದ ಚಿತ್ರಕತೆ, ಸಹಜ ಸಂಭಾಷಣೆ ಕತೆಗೊಂದು ಸುವರ್ಣ ಚೌಕಟ್ಟು ಹಾಕುತ್ತದೆ.
ಹೊಸ ಪ್ರಯೋಗ ಗುಲಾಬಿ ಟಾಕೀಸು. ಇದು ಕತೆಗಾರ್ತಿ ವೈದೇಹಿಯವರ ಸಣ್ಣಕತೆಯ ಸಿನಿಮಾ ರೂಪಾಂತರ. ಆದರೆ ಆ ಕತೆಗೂ ಈ ಚಿತ್ರಕತೆಗೂ ಅಜಗಜಾಂತರ. ಮೂಲಕತೆಯ ಎಳೆ ಇಟ್ಟುಕೊಂಡು ಕಾಸರವಳ್ಳಿ ಅದಕ್ಕೆ ಪ್ರಸ್ತುತ ಜಗತ್ತಿನ ಆಗು ಹೋಗು ಮತ್ತು ಜಾಗತೀಕರಣದ ಲೇಪ ಹಚ್ಚುತ್ತಾರೆ. ಅದು ತನ್ನ ಸುಳಿಯಲ್ಲಿ ಮಾನವ ಸಂಕುಲವನ್ನು
ಹೇಗೆ ಸೆಳೆಯುತ್ತಿದೆ, ನಗರೀಕರಣದ ಶಬ್ದ ಮಾಲಿನ್ಯ.

ರೂಪ ಪಡೆದು ನರನಾಡಿಗಳನ್ನು ಹೇಗೆ ನಾಟುತ್ತಿದೆ, ಒಂದೇ ಒಂದು ಟಿವಿ ಹೆಣ್ಣೊಬ್ಬಳ ಠೀವಿಯನ್ನೇ ಹೇಗೆ ಬದಲಿಸುತ್ತದೆ, ಬದುಕಿನ ದಿಕ್ಕನ್ನು ಹೇಗೆ ತಿರುಗಿಸುತ್ತದೆ, ಹಣದಾಹಿ ಗಂಡ ಮಾಡಿದ ತಪ್ಪಿಗೆ ಏನೂ ಅರಿಯದ, ತಪ್ಪು ಮಾಡದ ಹೆಂಡತಿ ಏಕೆ ಬಲಿಯಾದಳು, ಧರ್ಮ ಕರ್ಮಗಳು ಹೇಗೆ ರಕ್ತಸಂಬಂಧಕ್ಕೆ `ದಿಗ್ಬಂದನ' ಹಾಕುತ್ತವೆ ಎನ್ನುವ ಹಲವಾರು ಪ್ರಶ್ನಾರ್ಥಕ, ಉತ್ತರಾತೀತ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಗುಲಾಬಿ ಟಾಕೀಸು.
ಮೀನುಗಾರರ ಬದುಕು-ಬವಣೆ, ನಗರೀಕರಣ ದಿಂದಾಗುವ ದಿಢೀರ್ ಬದಲಾವಣೆ ಮುಂತಾದ ವಿಷಯಗಳು ಕೆಲವೇ ಗಂಟೆಯಲ್ಲಿ ಚರ್ಚೆಯಾಗುತ್ತವೆ. ಉಮಾಶ್ರೀ ಎನ್ನುವ ದೇಸಿ ಪ್ರತಿಭೆ ಬಗ್ಗೆ ಏನು ಹೇಳುವುದು? ಅವರು ಬರೀ ಅಭಿನಯಿಸಿಲ್ಲ, ಆ ಪಾತ್ರವೇ ತಾವಾಗಿದ್ದಾರೆ. ಗುಲಾಬಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಇಲ್ಲಿವರೆಗಿನ ಅವರದೇ ಪಾತ್ರಗಳನ್ನು ಮೀರಿಸಿದ್ದಾರೆ.
ಕುಂದಗನ್ನಡದ (ಕುಂದಾಪುರ ಸುತ್ತಮುತ್ತಲಿನ ಹಳ್ಳಿಗರ ಆಡುಭಾಷೆ)ಕಂಪು ಉದ್ದಕ್ಕೂ ಪಸ
ರಿಸುತ್ತದೆ. ಇಲ್ಲಿಯ ವರೆಗೆ ಕಾಸರವಳ್ಳಿ ಸಿನಿಮಾ ಎಂದರೆ ಇಂದು ಒಂದು ವರ್ಗದ ಜನರಿಗೆ ಏನೋ ಒಂಥರಾಥರಾ. ಆದರೆ ಇಲ್ಲಿ ಅವೆಲ್ಲಕಿಂತ ವಿಭಿನ್ನ, ವಿಶೇಷವಾದ ಅಂಶ ಇದೆ ಎಂದೆನಿಸಿದರೆ ಅದಕ್ಕೆ ಉಮಾಶ್ರೀ ಯವರ ಲವಲವಿಕೆಯ ಅಭಿನಯ ಏಕೈಕ ಕಾರಣ. ಕೆ.ಜಿ. ಕೃಷ್ಣಮೂರ್ತಿ, ಎಂ.ಡಿ. ಪಲ್ಲವಿ ಮುಂತಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಮಚಂದ್ರ ಎಂದಿನಂತೆ ನಿಯತ್ತಾಗಿ, ಸಕತ್ತಾಗಿ ಕ್ಯಾಮರಾ ಹಿಡಿದಿದ್ದಾರೆ. ಅವರ ನೆರಳು ಬೆಳಕಿನ ಆಟವನ್ನು ನೋಡಿಯೇ ಸವಿಯಬೇಕು. ಛಾಯಾಗ್ರಹಣವೇ ಪಾತ್ರವಾಗುವುದೆಂದರೆ ಇದೇ ಇರಬೇಕು.

ಹಾಗಂತ ಇಲ್ಲಿ ಎಲ್ಲವೂ ಸರಿ ಇದೆ ಎಂದಲ್ಲ. ದ್ವಿತೀಯಾರ್ಧದ ಗಡಸು, ಮೊದಲಾರ್ಧಕ್ಕಿಲ್ಲ. ಹಾಗೇ ಯುದ್ಧದ ಪ್ರಸ್ತಾಪ ಗೊಂದಲ ಮೂಡಿಸುತ್ತದೆ. ಅದೇನೇ ಇದ್ದರೂ ಇದು ಕಾಸರವಳ್ಳಿ ಬತ್ತಳಿಕೆಯಲ್ಲಿದ್ದ ಒಂದು ಅಸ್ತ್ರ, ಮುಲಾಜಿಲ್ಲದೆ ಪ್ರಯೋಗ ಮಾಡಿದ್ದಾರೆ. ಅದು ನಾಟಲೇ ಬೇಕಾದ ಕೆಲವು ವರ್ಗದ ಜನರನ್ನಂತೂ ತಲುಪಿದೆ, ತಲುಪುತ್ತದೆ ಕೂಡ. ಅದನ್ನು ಕಾಸರವಳ್ಳಿ ಕರಾಮತ್ತು ಎಂದರೂ ತಪ್ಪಿಲ್ಲ. ಈ ಕರಾಮತ್ತನ್ನು ನೀವು ನೋಡಲೇಬೇಕು...
ಕರ್ಟೆಸಿ: ದಟ್ಸ್ ಕನ್ನಡ
No comments:
Post a Comment