Wednesday, April 30, 2008

ನಕಲಿ ಮುದ್ರಾಂಕದ ಬ್ರಹ್ಮ ತೆಲಗಿಗೆ ಕೋಪವೇಕೆ?

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಕರ್ನಾಟಕಕ್ಕೆ ಅಪಕೀರ್ತಿ ತಂದ ಮಹನೀಯರಲ್ಲಿ ಅಬ್ದುಲ್ ಕರೀಂ ತೆಲಗಿ ಒಬ್ಬನು. ಐದುನೂರು , ಸಾವಿರ ರೂಪಾಯಿಯ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಡುವ ಜಾಲದಲ್ಲಿ ವ್ಯಾಪಾರ ಅಷ್ಟೇನೂ ಲಾಭದಾಯಕವಾಗಿಲ್ಲ ಎಂದು ಪರಿಗಣಿಸಿ ಭಾರತದಲ್ಲಿ ನಕಲಿ ಸ್ಟಾಂಪ್ ಪೇಪರುಗಳ ಬೃಹತ್ ಉದ್ಯಮವನ್ನು ಸ್ಥಾಪಿಸಿದ ಹೆಗ್ಗಳಿಕೆ ಪಾತ್ರನಾದವನು! ಆತ ಸೃಷ್ಟಿಸಿದ ನಕಲಿ ಮುದ್ರಾಂಕದ ನೆರವಿನಿಂದ ಸ್ಥಿರಾಸ್ತಿ ಮಾರಾಟ ಮತ್ತು ದಾಖಲೆ ಪತ್ರ ಸೃಷ್ಟಿಗೆ ಈ ದೇಶದಲ್ಲಿ ಒಂದು ಹೊಸ ಆಯಾಮ ಬಂದದ್ದು ನಿಮಗೆ ಗೊತ್ತುಂಟು.ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ ಎಂಬ ಮಾತು ತೆಲಗಿ ವಿಚಾರದಲ್ಲಂತೂ ನಿಜವಾಯಿತು. ಆತ ಮತ್ತು ಆತನ ಸಹಚರರು ಸೃಷ್ಟಿಸಿದ್ದ ನಕಲಿ ಛಾಪಾಕಾಗದ ಮಹಾಜಾಲವನ್ನು ಬೇಧಿಸಿದ ಈ ದೇಶದ ಪೊಲೀಸರು ಅವನನ್ನು ದಸ್ತಗಿರಿ ಮಾಡಿ ಕೇಸುಗಳ ಮೇಲೆ ಕೇಸು ಕೇಸುಗಳ ಮೇಲೆ ಕೇಸು ಜಡಿದು ಅವನನ್ನು ಸೆರೆಮನೆಗೆ ತಳ್ಳಿದ ಸುದ್ದಿಗಳನ್ನು ನೀವೆಲ್ಲ ಓದಿಯೇ ಇರುತ್ತೀರಿ. ತೆಲಗಿಯ ವಂಚನೆ ಪ್ರಕರಣವನ್ನು ವಿಚಾರಣೆಗೆ ಒಡ್ಡಿರುವ ನ್ಯಾಯಾಲಯ ಆತನಿಗೆ ಯಾವ ಯಾವ ತಪ್ಪಿಗೆ ಎಷ್ಟೆಷ್ಟು ವರ್ಷ ಸಾಧಾರಣ, ಅಸಾಧಾರಣ, ಕಠಿಣ ಶಿಕ್ಷೆ ವಿಧಿಸಿದೆ ಎಂಬ ಲೆಕ್ಕ ನ್ಯಾಯಲಯಕ್ಕೆ ಮಾತ್ರ ಗೊತ್ತಿದೆ. ನ್ಯಾಯಾಲಯ ಅಪ್ಪಣೆ ಮಾಡಿರುವ ಒಟ್ಟು ಶಿಕ್ಷೆಯನ್ನು ತೆಲಗಿ ಪೂರೈಸಬೇಕಾದರೆ ಕನಿಷ್ಠಪಕ್ಷ ಅವ ಹತ್ತು ಜನ್ಮವನ್ನಾದರೂ ಎತ್ತಿಬರಬೇಕು.ತೆಲಗಿಯ ಜತೆ ಶಾಮೀಲಾಗಿದ್ದರೆಂದು ಆಪಾದಿಸಲಾಗಿದ್ದ ಕರ್ನಾಟಕದ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಾನೂನಿನ ಕಣ್ಣಿನಿಂದ ಪಾರಾದರೇನೋ ನಿಜ. ಆದರೆ, ನಕಲಿ ಮುದ್ರಾಂಕದ ಬ್ರಹ್ಮ ತೆಲಗಿಗೆ ಮಾತ್ರ ಜೈಲಿನಲ್ಲಿ ಚಕ್ಕಿ ಪೀಸುವ ಯೋಗ ತಪ್ಪಲಿಲ್ಲ. ತೆಲಗಿ ಈಗ ಪುಣೆಯ ಯರವಾಡ ಸೆರೆಮನೆಯಲ್ಲಿ ಬಂಧಿಯಾಗಿದ್ದು ಅಲ್ಲಿಂದಲೇ ತನ್ನ ವಕೀಲರ ಮುಖಾಂತರ ತನ್ನ ವಿರುದ್ಧದ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಅವನನ್ನು ಬಾಧಿಸುತ್ತಿರುವ ರೋಗಗಳ ಪಟ್ಟಿಯಲ್ಲಿ ಎಚ್ ಐ ವಿ ಕೂಡ ಒಂದು ಎನ್ನುವುದು ಖೇದಕರ.ಪುರಂದರದಾಸರು, ಕನಕದಾಸರು, ಮಂತ್ರಾಲಯದ ಗುರುಗಳು, ಜೇ ಸಂತೋಷಿಮಾ, ಭಕ್ತ ಕಬೀರ ಮುಂತಾದ ಸಂತರು ಮತ್ತು ಮಹಾಮಹಿಮರ ಬಗ್ಗೆ ನಮ್ಮ ದೇಶದಲ್ಲಿ ಚಿತ್ರಗಳನ್ನು ನಿರ್ಮಿಸುವ ಪರಿಪಾಠವಿದೆ. ಹಾಗೆಯೇ, ಚಾರ್ಲಸ್ ಶೋಭರಾಜ್, ವೀರಪ್ಪನ್, ಚಂಬಲ್ ರಾಣಿಯಂತಹ ಖದೀಮರ ಬಗೆಗೂ ಚಿತ್ರಗಳನ್ನು ತೆಗೆಯಲಾಗುತ್ತದೆ. ಅಂತೆಯೇ, ಆಧುನಿಕ ಭಾರತದಲ್ಲಿ ಹೊಸ ಬಗೆಯ ವಂಚನೆ ಜಾಲವನ್ನು ಸೃಷ್ಟಿಸಿದ ಖ್ಯಾತಿಗೆ ಪಾತ್ರವಾದ ಕರೀಂ ತೆಲಗಿಯ ಜೀವನ ಚರಿತ್ರೆಯನ್ನು ಆಧರಿಸಿ ಬಾಲಿವುಡ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.ಆ ಹಿಂದಿ ಚಲನಚಿತ್ರದ ಹೆಸರು ಮುದ್ರಾಂಕ್. ಚಿತ್ರದಲ್ಲಿ ಒಂದು ಭಾರೀ ಐಟಂ ಸಾಂಗ್ ಇದೆ ( ಐಟಂ ಸಾಂಗ್ ಅಂತ ಯಾಕೆ ಕರೀತಾರೆ ?). ಈ ನೃತ್ಯಕ್ಕೆ ಕುಣಿಯವ ಬೆಡಗಿ ರಾಖಿ ಸಾವಂತ್. ಅದೆಲ್ಲ ಸರೀನೆ. ಆದರೆ ಚಿತ್ರ ತೆಲಗಿಯ ಜೀವನವನ್ನು ಸರಿಯಾಗಿ ಬಿಂಬಿಸಬೇಕು, ಅಪಾರ್ಥ ಕೊಡುವಂತೆ ಚಿತ್ರೀಕರಿಸಿದರೆ ತೆಲಗಿಯ ವಿರುದ್ಧ ಇನ್ನೂ ನಡೆಯುತ್ತಿರುವ ವಿಚಾರಣೆಯ ಮೇಲೆ ಕರಿನೆರಳು ಬೀಳುತ್ತದೆ ಎಂದು ತೆಲಗಿಯ ವಕೀಲರ ಆಕ್ಷೇಪ ಮಾಡಿದ್ದರು. ಅದರಂತೆ, ನ್ಯಾಯಾಲಯ ಚಿತ್ರದ ತುಣುಕುಗಳನ್ನು ಒಮ್ಮೆ ತೆಲಗಿಗೆ ತೋರಿಸಿಬೇಕು ಎಂದು ಆಜ್ಞೆ ಮಾಡಿತು.ಕೋರ್ಟ್ ಆರ್ಡರ್ ಪ್ರಕಾರ ಏಪ್ರಿಲ್ 22ರಂದು ಯರವಾಡ ಸೆರೆಮನೆಯಲ್ಲಿ ಮುದ್ರಾಂಕ್ ಚಿತ್ರವನ್ನು ತೆಲಗಿ ಮತ್ತು ಆತನ ವಕೀಲರಿಗೆ ತೋರಿಸಲಾಯಿತು. ಚಿತ್ರ ನೋಡಿದ ತೆಲಗಿ ಅಸಮಾಧಾನ ವ್ಯಕ್ತಪಡಿಸಿದ. ರಾಖಿಸಾವಂತ್ ನೃತ್ಯ ಅವನಿಗೆ ಸ್ವಲ್ಪವೂ ಹಿಡಿಸಲಿಲ್ಲ ಎಂದು ಆನಂತರ ವಕೀಲಕರು ಜೈಲಿನ ಹೊರಗಡೆ ನೆರೆದಿದ್ದ ಮಾಧ್ಯಮ ಮಿತ್ರರಿಗೆ ಹೇಳಿದರು. ಆದರೆ ಇದೇ ಚಿತ್ರದಲ್ಲಿ ಸಂಭಾವನಾ ಸೇಠ್ ಅವರ ಮೇಲೆ ಚಿತ್ರೀಕರಿಸಲಾಗಿರುವ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ ಎಂದು ತೆಲಗಿ ಸಂತೋಷ ಸೂಚಿಸಿದನು ಎಂದೂ ಅವನ ವಕೀಲರು ತಿಳಿಸಿದರು.ತನ್ನ ಕಥೆಯನ್ನು ಆಧರಿಸಿ ತಾನೇ ಒಂದು ಭಾರೀ ಬಜೆಟ್ಟಿನ ಚಿತ್ರ ನಿರ್ಮಾಣಮಾಡುವ ಆಸೆ ತೆಲಗಿಗೆ ಇತ್ತು. ಆದರೆ ಕನಸು ಮಣ್ಣುಪಾಲಾಯಿತು. ಹಾಗೆ ನೋಡಿದರೆ ಮುದ್ರಾಂಕ್ ಸಣ್ಣ ಬಜೆಟ್ಟಿನ ಚಿತ್ರ.ಒಂದು ವೇಳೆ ತೆಲಗಿಯೇ ಚಿತ್ರ ನಿರ್ಮಿಸಿಸದ್ದಿದ್ದರೆ ಅದು ನಿಜಕ್ಕೂ ಭಾರೀ ಬಜೆಟ್ಟಿನ ಚಿತ್ರವೇ ಆಗುತ್ತಿದ್ದುದರಲ್ಲಿ ಸಂಶಯವಿಲ್ಲ. ತೆಲಗಿಯ ಬಜೆಟ್ಟಿನ ಮುಂದೆ ಯಶರಾಜ್ ಬ್ಯಾನರಿನ ಬಜೆಟ್ಟುಗಳೆಲ್ಲಾ ಯಾವಮಹಾ !
(ಕರ್ಟೆಸಿ: ದಟ್ಸ್ ಕನ್ನಡ)

Monday, April 28, 2008

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು!!


e- ಪ್ರೀತಿ' ಚಿತ್ರದ ನಾಯಕಿಯಾಗಿ ಮತ್ತೊಬ್ಬ ಅನಿವಾಸಿ ಭಾರತೀಯ ಚೆಲುವೆ ಕನ್ನಡ ಚಿತ್ರರಂಗಕ್ಕ್ಕೆ ಅಡಿ ಇಟ್ಟ್ಟಿದ್ದಾರೆ. ಆಕೆಯ ಹೆಸರು ನೀನಾ ಮಹೇಶ್. 'In Waiting' ಮತ್ತು 'Secret Leave' ಎಂಬ ಎರಡು ಕಿರು ನಾಟಕಗಳಲ್ಲಿ ಈಗಾಗಲೇ ನೀನಾ ತಾನ್ಯಾರೆಂದು ನಿರೂಪಿಸಿಕೊಂಡಿದ್ದಾರೆ.ಹೋಗಲಿ ಈಕೆಗೆ ಕನ್ನಡ ಬರುತ್ತಾ ಅಂದ್ರೆ, ಈಗಾಗಲೇ ಈಕೆ ಕನ್ನಡ ತರಗತಿಗಳಿಗೆ ಹಾಜರಾಗಿ ಕನ್ನಡ ಅಆಇಈ ತಿದ್ದುತ್ತಿದ್ದಾರೆ. ಕನಿಷ್ಟ ಪಕ್ಷ ದಿನಕ್ಕೊಂದು ಕನ್ನಡ ಪದ ಕಲಿಯಲು ಪಣ ತೊಟ್ಟಿದ್ದಾರೆ. ನೀನಾ ಬರೀ ಸುಂದರಿಯಷ್ಟೇ ಅಲ್ಲ ಮನಃಶಾಸ್ತ್ರದಲ್ಲಿ ಮಿಚಿಗನ್ ವಿಶ್ವವಿದ್ಯಾಲಯದ ಸ್ನಾತಕ ಪದವಿ ಪಡೆದ ಜಾಣೆ ಸಹ. ಈಗ 'ಈ ಪ್ರೀತಿ' ಚಿತ್ರೀಕರಣಕ್ಕಾಗಿ ಯುಎಸ್‌ಎ ನಲ್ಲಿದ್ದಾರೆ ನೀನಾ ಮಹೇಶ್.ಕನ್ನಡ ಅಂದ್ರೆ ನಂಗೆ ಪಂಚಪ್ರಾಣ ಎಂದು ಹೇಳಿ ತಮ್ಮ ಭಾಷಾಭಿಮಾನವನ್ನ್ನು 'ಈ ಪ್ರೀತಿ' ಚಿತ್ರದ ಮುಹೂರ್ತದ ಸನ್ನಿವೇಶದಲ್ಲಿ ತೋಡಿಕೊಂಡರು. ಬೆಂಗಳೂರು ಮಲ್ಲೇಶ್ವರಂನ ದಕ್ಷಿಣಮುಖ ನಂದಿ ತೀರ್ಥ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಚಿತ್ರದಲ್ಲಿ ಆಕೆಯದು ನೀಲು ಪಾತ್ರವಂತೆ. ಬೆಳ್ಳಿತೆರೆಯ ಈ ಪಾತ್ರ ನೀನಾ ಮಹೇಶ್ ಹೃದಯಕ್ಕೆ ತೀರಾ ಆಪ್ತವಾಗಿದೆಯಂತೆ. 'ಈ ಪ್ರೀತಿ' ಒಂಥರಾ ತಮಾಷೆಯ ಪ್ರೇಮಕಥೆ. ಡಾ.ನಾರಾಯಣ ಹೊಸಮನೆ ಹಾಗೂ ಪ್ರದೀಪ್ ಬೇಕಲ್, ಮಹಿ ಮಹೇಶ್ ಮತ್ತು ಎಸ್.ವಿ.ನಾರಾಯಣ ಸ್ವಾಮಿ ಒಟ್ಟುಗೂಡಿ 'ಈ ಪ್ರೀತಿ'ಯನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನಿವಾಸಿ ಭಾರತೀಯರಾದ ಪ್ರಿಯಾ ಭಾರತಿ ನಿರ್ದೇಶಕಿಯಾಗಿ ತಮ್ಮ ಚಿತ್ರಪಥವನ್ನು ಆರಂಭಿಸಿದ್ದಾರೆ. ಜಯಂತ ಕಾಯ್ಕಿಣಿ ಸಾಹಿತ್ಯ ಮತ್ತು ಸಂಭಾಷಣೆಗಾಗಿ ಪ್ರಯತ್ನಗಳು ಮುಂದುವರೆದಿವೆ. ದಿಗಂತ್, ತೇಜಸ್ವಿನಿ, ನೀನಾ ಮಹೇಶ್ ಮತ್ತು ಭರತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
(ಕರ್ಟೆಸಿ: ದಟ್ಸ್‌ಕನ್ನಡ)

Tuesday, April 22, 2008

'ಪರಮೇಶ ಪಾನ್‌ವಾಲ' ಗೆಟಪ್ಪಿನಲ್ಲಿ ಶಿವರಾಜ್ ಕುಮಾರ್!


ಏ.21 ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹೊಸ ಚಿತ್ರ ಸೆಟ್ಟೇರಿತು. ಚಿತ್ರದ ಹೆಸರು 'ಪರಮೇಶ ಪಾನ್‌ವಾಲ'. ಪರಮೇಶ ಎನ್ನುವುದು ಚಿತ್ರದ ಟೈಟಲ್ಲು. ಪಾನ್‌ವಾಲ ಎಂಬುದು ಚಿತ್ರದ ಅಡಿ ಬರಹ. ಥೇಟು 'ಡಾನ್' ಚಿತ್ರದಲ್ಲಿನ ಶಾರುಖ್‌ ಖಾನ್ ಗೆಟಪ್ಪಿನಲ್ಲಿ ಶಿವರಾಜ್‌ ಕುಮಾರ್ ದರ್ಶನ ಕೊಡಲಿದ್ದಾರೆ. ಇದಕ್ಕಾಗಿ ಶಾರುಖ್ ದೇಹದ, ಶಿವರಾಜ್ ಮುಖದ ವಿನ್ಯಾಸವನ್ನು ಆಮಂತ್ರಣ ಪತ್ರದಲ್ಲಿ ವಿನ್ಯಾಸಗೊಳಿಸಿದ್ದರು ಮಣಿ. ಶಾರುಖ್‌ರ 'ಡಾನ್' ಚಿತ್ರದ ಅದೇ ಡ್ರೆಸ್ಸು, ಅದೇ ಕಡಗ, ಅದೇ ಭಂಗಿ, ಅದೇ ಅಂಗಿ... ಆದರೆ ಮುಖ ಮಾತ್ರ ಶಿವರಾಜ್‌ರದ್ದು. ಇದೆಲ್ಲಾ ಪ್ರಚಾರಕ್ಕಾಗಿ ಮಣಿ ಮಾಡಿದ ಟ್ರಿಕ್ಕು ಅಷ್ಟೇ.ಡಾನ್ ಚಿತ್ರದಲ್ಲಿ ಪಾನ್ ಜಗಿಯುತ್ತಾ ಗಲ್ಲಿ ಗಲ್ಲಿ ಸುತ್ತುತ್ತಿರುತ್ತಾನೆ ಶಾರುಖ್. ಶಿವರಾಜ್ ಕುಮಾರ್ ಅವರದೂ ಇದೇ ರೀತಿಯ ಪಾನ್‌‍ವಾಲಾ ಪಾತ್ರನಾ ಎಂಬುದನ್ನು ಕಾದು ನೋಡಬೇಕಾಗಿದೆ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ 'ಡಾನ್' ಹೆಸರಿನ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು.'ಅಂತು ಇಂತು ಪ್ರೀತಿ ಬಂತು' ಚಿತ್ರದ ನಿರ್ಮಾಣದ ನಂತರ ಆಂಧ್ರದ ಆದಿತ್ಯ ಬಾಬು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅರಸು ಮತ್ತು ಆಕಾಶ್ ಚಿತ್ರಗಳ ಹಿಟ್ ನಿರ್ದೇಶಕ ಮಹೇಶ್ ಬಾಬು 'ಪರಮೇಶ ಪಾನ್‌ವಾಲ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರದ ಮೊದಲ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.
(ಕರ್ಟೆಸಿ: ದಟ್ಸ್‌ಕನ್ನಡ ಸಿನಿವಾರ್ತೆ)

Monday, April 21, 2008

ಡಾ.ರಾಜ್ ವ್ಯಕ್ತಿತ್ವವನ್ನು ದಾಖಲಿಸುವ ಪವರ್ ಸ್ಟಾರ್ ಪುನೀತ್ ಪುಸ್ತಕ


ಡಾ.ರಾಜ್‌ಕುಮಾರ್ ಅವರ ಸಂಪೂರ್ಣ ವ್ಯಕ್ತಿತ್ವದ ಪುಸ್ತಕ ಶೀಘ್ರದಲ್ಲೇ ಹೊರಬರಲಿದೆ. ಅವರ ವ್ಯಕ್ತಿತ್ವದ ಹಲವು ಮಜಲುಗಳನ್ನು ಪರಿಚಯಿಸುವ ಪುಸ್ತಕವನ್ನು ಪವರ್ ಸ್ಟಾರ್ ಪುನೀತ್ ಹೊರತರುತ್ತಿದ್ದಾರೆ. ಪುಸ್ತಕದ ಹೆಸರು 'ಡಾ.ರಾಜ್‌ಕುಮಾರ್, ವ್ಯಕ್ತಿ ಹಿಂದಿನ ವ್ಯಕ್ತಿತ್ವ'. ತಮ್ಮ ಆಪ್ತ ಗೆಳೆಯರು, ಸಹಚರರು, ಒಡನಾಡಿಗಳು ಮತ್ತು ಬಂಧುಗಳೊಂದಿಗೆ ಡಾ.ರಾಜ್ ಹಂಚಿಕೊಂಡ ಅಪರೂಪದ ಕ್ಷಣಗಳು ಪುಸ್ತಕದಲ್ಲಿ ಅನಾವರಣಗೊಳ್ಳಲಿವೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರಬರಲಿರುವ ಪುಸ್ತಕ ಕೆಲವು ಅಪರೂಪದ ಘಟನೆಗಳನ್ನು ದಾಖಲಿಸಲಿದೆ.ಡಾ.ರಾಜ್ ಬದುಕಿದ್ದಾಗಲೇ ಈ ಪುಸ್ತಕವನ್ನು ಹೊರತರುವ ಉದ್ದೇಶ ಪುನೀತ್ ಅವರಿಗಿತ್ತು. ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡ ಮಧುರ ಕ್ಷಣಗಳನ್ನು ತಮ್ಮ ಪುಸ್ತಕದಲ್ಲಿ ಓದಿ ಸಂತೋಷ ಪಡುತ್ತಾರೆ ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಅದು ಕನಸಾಗಿಯೇ ಉಳಿಯಿತು. ಅಪ್ಪಾಜಿ ಅವರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ. ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿರುವ ಡಾ.ರಾಜ್‌ ಅವರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವುದೇ ನನ್ನ ಪುಸ್ತಕ ಗುರಿ. ಮುಂದಿನ ಅಪ್ಪಾಜಿ ಹುಟ್ಟುಹಬ್ಬದಂದು ಈ ಪುಸ್ತಕವನ್ನು ಅಭಿಮಾನಿಗಳಿಗೆ ಸಮರ್ಪಿಸಲಿದ್ದೇನೆ ಎನ್ನುತ್ತಾರೆ ಪುನೀತ್.ಡಾ.ರಾಜ್‌ಕುಮಾರ್ ಬಂಧುಗಳೊಂದಿಗೆ, ಒಡನಾಡಿಗಳೊಂದಿಗೆ ಕಳೆದ ಅಪರೂಪದ ಭಾವಚಿತ್ರಗಳು ಪುಸ್ತಕದಲ್ಲಿ ಇರುತ್ತವೆ. ಅತ್ಯಂತ ಅಪರೂಪದ 4 ಸಾವಿರ ಭಾವಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಡಾ.ರಾಜ್‌ರ ಮೇರು ಪ್ರತಿಭೆ, ವ್ಯಕ್ತಿತ್ವ, ಹಳೆ ನೆನಪು, ಅವರ ಸ್ವಭಾವ, ಆಪ್ತರು, ಜೀವನದಲ್ಲಿ ಎದುರಿಸಿದ ಕಷ್ಟ ನಷ್ಟಗಳು, ಸಂಗೀತ, ಯೋಗ...ಹೀಗೆ ಹತ್ತು ಹಲವು ಮುಖಗಳು ಅನಾವರಣಗೊಳ್ಳಲಿವೆ.ಪುನೀತ್‌ರ ಪುಸ್ತಕ ಅಪರೂಪದಲ್ಲೇ ಅಪರೂಪ ಎನ್ನುವ ರಾಜಣ್ಣನ ಭಾವಚಿತ್ರಗಳನ್ನು ಪ್ರಕಟಿಸಲಿದೆ. ಇದಕ್ಕಾಗಿ ರಾಜ್ ಅಭಿಮಾನಿಗಳು, ಆಪ್ತರು ತಮ್ಮ ಸಂಗ್ರಹದಲ್ಲಿರುವ ಭಾವಚಿತ್ರಗಳನ್ನು ತಮಗೆ ಕಳುಹಿಸಿದರೆ ಅವರಿಗೆ ಆಭಾರಿಯಾಗಿರುತ್ತೇನೆ ಎಂದಿದ್ದಾರೆ ಪುನೀತ್. ಡಾ.ರಾಜ್‌ ಅವರೊಂದಿಗೆ ಕಳೆದ ಅಪರೂಪದ ಭಾವಚಿತ್ರಗಳನ್ನು ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
(ಕರ್ಟೆಸಿ: ದಟ್ಸ್‌ಕನ್ನಡ)

Thursday, April 17, 2008

"ಬೇಗ ಚಂದ ಮಾಮ" ಸಾಂಗ್ಸ್ ರಿಲಿಸ್

ಕನ್ನಡ ಚಿತ್ರರಂಗದ ಬೇರುಗಳು ಬಲಿಷ್ಠವಾಗಿವೆ. ಹಾಗಾಗಿಯೇ ಹೊಸ ಕನಸುಗಳನ್ನು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಮಾಪಕ, ನಿರ್ದೇಶಕರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಕನ್ನಡ ಚಿತ್ರೋದ್ಯಮ ವೇದಿಕೆ ಒದಗಿಸುತ್ತದೆ. ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಅತ್ಯಂತ ಚಟುವಟಿಕೆಯಿಂದ ಇರಲು ಇದೂ ಒಂದು ಕಾರಣ. 'ಬಾ ಬೇಗ ಚಂದ ಮಾಮ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾಡುತ್ತಾ ಹೀಗೆಂದರು ಹಂಸಲೇಖಾ. ಬಿ.ಆರ್.ಪಂತುಲು ಅವರ 'ರತ್ನಗಿರಿಯ ರಹಸ್ಯ' ಚಿತ್ರದ ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ... ಹಾಡಿನ ಚರಣ ಈ ಚಿತ್ರಕ್ಕೆ ಸ್ಪೂರ್ತಿಎಂದರು.ಹೆಚ್ಚೂ ಕಡಿಮೆ ಇದೇ ರೀತಿಯ ಅಭಿಪ್ರಾಯ ಕರ್ತೆಸಿ ಕರ್ತೆಸಿ:ಕರ್ತೆಸಿ:ಕರ್ತೆಸಿ:ಕರ್ತೆಸಿವಿಷ್ಣುವರ್ಧನ್ ರ ಮನದಾಳದಿಂದಲೂ ಹೊರಹೊಮ್ಮಿದವು.ಶತಕ ಬಾರಿಸುವುದಕ್ಕಿಂತ ಪಂದ್ಯದ ಗೆಲ್ಲುವುದು ಮುಖ್ಯ.ನಿಮ್ಮ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಬಿ.ಎಚ್.ಮುರಳಿ ಈ ಹಿಂದೆ ಡಬ್ಬಿಂಗ್ ಕಲಾವಿದಹಾಗೂ ಹಾಡುಗಾರರಾಗಿದ್ದವರು. ಈಗ ತಮ್ಮ ಪ್ರಥಮ ಪ್ರಯತ್ನದಲ್ಲಿ ಬಾ ಬೇಗ ಚಂದ ಮಾಮದ ನಿರ್ದೇಶನ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.ಅವರ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ವಿಷ್ಣು ಬಾ ಬೇಗ ಚಂದ ಮಾಮ ಚಿತ್ರತಂಡಕ್ಕೆ ಹಾರೈಸಿದರು. ಬೆಂಗಳೂರಿನ ರಿಜಾಯ್ಸ್ ಆಡಿಟೋರಿಯಂನಲ್ಲಿ 'ಬಾ ಬೇ ಚಂ ಮಾ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ನಟಿ ಸುಧಾರಾಣಿ, ನಿರ್ದೇಶಕ ಬಿ.ಎಚ್.ಮುರಳಿ, ಪೂಜಾ ಗಾಂಧಿ, ರಾಜಕಾರಣಿಗಳಾದ ಸಲೀಂ ಅಹ್ಮದ್ ಮತ್ತು ಆರ್.ವಿ.ಹರೀಶ್, ಹರ್ಷಪ್ಪ ರೆಡ್ಡಿ, ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ಬಾ ಬೇಗ ಚಂದ ಮಾಮದ ನಾಯಕ ದೀಪಕ್, ನಿರ್ಮಾಪಕ ಕುಮಾರಸ್ವಾಮಿ ಇನ್ನಿತರರು ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.'ಅಮರ ಮಧುರ ಪ್ರೇಮ' ಹೆಸರಿನ ಚಿತ್ರ 1982ರಲ್ಲಿ ತೆರೆಕಂಡಿತ್ತು. ಸುರೇಶ್ ಹೆಬ್ಳೀಕರ್ ಹಾಗೂ ಶೋಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಪಿ.ಆರ್.ರಾಮದಾಸ್ ನಾಯ್ಡು ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ರತ್ನಗಿರಿ ರಹಸ್ಯ ಚಿತ್ರದ ಅಮರ ಮಧುರ ಗೀತೆ ಇಷ್ಟಿಲ್ಲಾ ಸಿನೆಮಾ ಶೀರ್ಷಿಕೆಗಳಿಗೆ ಸ್ಫೂರ್ತಿಯಾಗುತ್ತಿರಬೇಕಾದರೆ, ನಮ್ಮ ಇಂದಿನ ನಿರ್ದೇಶಕ, ನಿರ್ಮಾಪಕರು ಅರ್ಥವಿಲ್ಲದ ಶೀರ್ಷಿಕೆಗಳನ್ನು ಯಾಕಾದರೂ ಇಡುತ್ತಿದ್ದಾರೋ ಅರ್ಥವಾಗುತ್ತಿಲ್ಲ! (ದಟ್ಸ್ ಕನ್ನಡ ವಾರ್ತ)

Tuesday, April 15, 2008

ಪುಜ ಗಾಂಧಿ ಇನ್ ಜರ್ನಲಿಸ್ಟ್ ರೋಲ್


''ಇದು ನನ್ನ ಪ್ರಥಮ ಪ್ರಯತ್ನ. ಸ್ನೇಹಿತರ ಜೊತೆ ಹೈದರಾಬಾದ್‌ಗೆ ಹೋಗಿದ್ದಾಗ ತೆಲುಗಿನ 'ಅನಸೂಯ' ಚಿತ್ರ ನೋಡಿದೆ. ಅದ್ಭುತವಾಗಿತ್ತು. ಈ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕು ಎಂದು ನಿರ್ಧರಿಸಿದೆ. ಅನಸೂಯ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದೇನೆ. ತೆಲುಗು ಚಿತ್ರವನ್ನು ನಿರ್ದೇಶಿಸಿದ ರವಿಬಾಬು ಅವರ ಅಸೋಸಿಯೇಟ್ ಆಗಿದ್ದ ಶಿವಗಣಪತಿ ಕನ್ನಡದ 'ಅನು' ಚಿತ್ರವನ್ನು ನಿರ್ದೇಶಿಸಲಿದ್ದಾರೆ.'' ಎಂದರು ನಿರ್ಮಾಪಕ ಬಾಲು.ತೆಲುಗಿನಲ್ಲಿ ಭರ್ಜರಿ ಪ್ರದರ್ಶನ ಕಂಡ ಅನಸೂಯ ಚಿತ್ರದಲ್ಲಿ ಭೂಮಿಕಾ ನಾಯಕಿಯಾಗಿ ನಟಿಸಿದ್ದರು. ಕನ್ನಡಕ್ಕ್ಕೆ ರಿಮೇಕಾಗುತ್ತಿರುವ 'ಅನು' ಚಿತ್ರದಲ್ಲಿ ಪೂಜಾಗಾಂಧಿ ನಟಿಸಲಿದ್ದಾರೆ. ಚಿತ್ರದಲ್ಲಿ ಪೂಜಾಗಾಂಧಿ ಕ್ರೈಮ್ ವರದಿಗಾರ್ತಿ. ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಕೊಲೆ ರಹಸ್ಯವನ್ನು ಭೇದಿಸಲು ಬರುತ್ತಾಳೆ. ಆನಂತರ ಒಂದರ ಹಿಂದೆ ಒಂದು ಐದು ಹೆಣಗಳು ಬೀಳುತ್ತವೆ. ಆ ಕೊಲೆ ರಹಸ್ಯಗಳ ಜಾಡು ಅರಸಿ ಚಿತ್ರದ ನಾಯಕಿ ಹೊರಡುತ್ತಾಳೆ. ಚಿತ್ರಕಥೆ ಹಲವಾರು ಕುತೂಹಲ ಘಟ್ಟಗಳಲ್ಲಿ ಸಾಗುತ್ತದೆ. ಈ ಚಿತ್ರಕ್ಕೆ ನಾಯಕಿಯೇ ಕೇಂದ್ರಬಿಂದುವಾಗಿರುವ ಕಾರಣ ಪೂಜಾಗಾಂಧಿ ಸಖತ್ ಖುಷಿಯಾಗಿದ್ದರು. ದುನಿಯಾ ಚಿತ್ರದ ರಶ್ಮಿ ಮತ್ತು ನಾಗಕಿರಣ್ ವಿದ್ಯಾರ್ಥಿಗಳಾಗಿ ನಟಿಸುತ್ತಿದ್ದಾರೆ. ಮೊದಲೆ ತೆಲುಗು ಚಿತ್ರ ನೊಡಿರುವ ರಶ್ಮಿ ವೈದ್ಯಕೀಯ ವಿದ್ಯಾರ್ಥಿನಿಯ ಪಾತ್ರದಲ್ಲಿ ನಟಿಸುತ್ತಿರುವುದು ನನಗೇನು ಕಷ್ಟವಾಗುತ್ತಿಲ್ಲ ಎನ್ನುತ್ತಾರೆ. ಜಮಾನ, ಸಿಹಿಗಾಳಿ ಚಿತ್ರಗಳ ಛಾಯಾಗ್ರಹಣದ ನಂತರನಿರಂಜನ್ ಬಾಬು ಅವರಿಗೆ ಇದು ಮೂರನೆಯ ಚಿತ್ರ. ಚಿತ್ರದಲ್ಲಿ ನೈಟ್ ಎಫೆಕ್ಟ್ ಜಾಸ್ತಿ ಇರುವ ಕಾರಣ ಇವರ ಜವಾಬ್ದಾರಿ ಜಾಸ್ತಿ. ಇನ್ನು ಸಂಗೀತ ನಿರ್ದೇಶನ ಶೇಖರ್ ಚಂದ್ರ ಅವರದು. ತೆಲುಗಿನ ಅನಸೂಯ ಹಾಗೂ ಕನ್ನಡದ ಅನು ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶಕರು. ತೆಲುಗಿನ ಟ್ಯೂನ್‌ಗಳನ್ನು ಹಾಗೇ ಎತ್ತಿ ಇಳಿಸುತ್ತಾರೆಂದು ಬೇರೆ ಹೇಳಬೇಕಾಗಿಲ್ಲ. ಚಿತ್ರದಲ್ಲಿ ಎರಡು ಹಾಡುಗಳು ಮಾತ್ರ ಇವೆಯಂತೆ. ಅದರಲ್ಲಿ ಒಂದು ಐಟಂ ಸಾಂಗು! ಆ ಹಾಡಿಗೆ ಬಾಂಬೆಯಿಂದ ನೃತ್ಯಗಾರ್ತಿಯನ್ನು ಕರೆಸುವ ಆಲೋಚನೆಯೂ ಇದೆಯಂತೆ ನಿರ್ಮಾಪಕರ ತಲೆಯಲ್ಲಿ.
(ಕರ್ಟೆಸಿ : ದಟ್ಸ್‌ಕನ್ನಡ ಸಿನಿವಾರ್ತೆ)

Wednesday, April 9, 2008

ಹುಬ್ಬೇರಿಸುವ ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ

''...ನಿಜವಾದ ಸ್ವಾತಂತ್ರ್ಯ ತಳಮಟ್ಟದಿಂದ ಆರಂಭವಾಗಬೇಕು. ಹಾಗೆ ಆರಂಭವಾದಾಗ ಪ್ರತಿಯೊಂದು ಹಳ್ಳಿಯು ಪ್ರಜಾಪ್ರಭುತ್ವದ ವಾಹಕವಾಗುತ್ತದೆ. ತಮ್ಮ ವ್ಯವಹಾರಗಳನ್ನು ತಾವೇ ನಿರ್ವಹಿಸಿಕೊಳ್ಳುವ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ನಮ್ಮ ಹಳ್ಳಿಗಳು ಪಡೆಯುವಂತಾಗಬೇಕು. ಹಳ್ಳಿಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು.'' ಎಂಬ ಮಹಾತ್ಮ ಗಾಂಧೀಜಿ ಅವರ ಕನಸು ಎಷ್ಟು ಹಳ್ಳಿಗಳಲ್ಲಿ ನನಸಾಗಿದೆಯೋ ಗೊತ್ತಿಲ್ಲ. ಆದರೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರಲ್ಲಿ ಬೆಂಗಳೂರಿನಿಂದ ನೆಲಮಂಗಲ, ಕುಣಿಗಲ್ ಮಾರ್ಗವಾಗಿ ಬರೋಬ್ಬರಿ110 ಕಿ.ಮೀನ ಒಂದು ಹಳ್ಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕನ್ನಡಿ ಹಿಡಿಯಿತು.
ಅದು ಎ.ನಾಗತಿಹಳ್ಳಿ ಗ್ರಾಮ. ಏ.4,5,6 ಮತ್ತು 7ರಂದು ಅಲ್ಲಿ ನಾಲ್ಕು ದಿನಗಳ ಸಾಂಸ್ಕೃತಿಕ ಹಬ್ಬದ ಸಡಗರ. ನಮ್ಮೂರ ಹಬ್ಬಕ್ಕೆ ಬನ್ನಿ ಎಂದು ನಾಗತಿಹಳ್ಳಿಯ ಅಭಿವ್ಯಕ್ತಿ ಮಹಿಳಾ ಸಂಘ, ಅಭಿವ್ಯಕ್ತಿ ಯುವಕರ ಸಂಘ, ಶ್ರೀ ಸ್ವಾಮಿ ವಿವೇಕಾನಂದ ಯುವಕ ರೈತ ಸಂಘ, ಸ್ತ್ರೀಶಕ್ತಿ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ನಾಗತಿಹಳ್ಳಿಯ ಸುತ್ತಣ ಹತ್ತೂರು ಗ್ರಾಮಸ್ಥರು ಸ್ವಾಗತಕೋರಿದರು. ನಾಲ್ಕು ದಿನಗಳ ಕಾಲ ಉಚಿತ ವೈದ್ಯಕೀಯ ಶಿಬಿರ, ಮಕ್ಕಳ ಕಲಾ ಶಿಬಿರ, ಗ್ರಾಮೀಣ ಕ್ರೀಡೆಗಳು, ರಾಸುಗಳ ಪ್ರದರ್ಶನ, ಶ್ರಮದಾನ, ಗ್ರಾಮ ನೈರ್ಮಲ್ಯ, ಕೃಷಿ ಚಿಂತನೆ, ಜನಪದ ಮೇಳ, ಭಾವಗೀತೆ, ಯಕ್ಷಗಾನ, ನಾಟಕ ಹೀಗೆ ಹತ್ತು ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ 'ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ-2008' ವೇದಿಕೆ ಒದಗಿಸಿತು.
ಏ.4ರಂದು ಬೆಳಗ್ಗೆ 9.30ಕ್ಕೆ ಶುರುವಾದ ನಾಗತಿಹಳ್ಳಿ ಹಬ್ಬ 'ದಕ್ಷಾಧ್ವರ' ಕಥಾಭಾಗದ ಯಕ್ಷಗಾನ ಬಯಲಾಟದೊಂದಿಗೆ ಸಾಂಸ್ಕೃತಿಕ ಉತ್ತುಂಗಕ್ಕೆ ಕೊಂಡೊಯ್ಯಿತು. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕವಿ ಜಯಂತ ಕಾಯ್ಕಿಣಿ, ನಟ ಶ್ರೀನಗರ ಕಿಟ್ಟಿ, ರಮಣಶ್ರೀ ಗ್ರೂಪ್‌ನ ಷಡಕ್ಷರಿ ಮುಖ್ಯ ಅತಿಥಿಗಳಾಗಿದ್ದರು. ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ 'ದಕ್ಷಾಧ್ವರ' ದಲ್ಲಿ ದಕ್ಷನಾಗಿ ಕಟ್ಟಿಕೊಟ್ಟ ಪಾತ್ರ ಗಮನ ಸೆಳೆಯಿತು.
ಬಣ್ಣದ ಲೋಕದ ನಿರ್ಮಾಣ, ನಿರ್ದೇಶನ ಜೊತೆಗೆ ಆಗಾಗ ಅತಿಥಿ ಪಾತ್ರಗಳಲ್ಲಿ ದರ್ಶನ ಕೊಡುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಯಕ್ಷಗಾನ ಬಯಲಾಟದಲ್ಲಿ ಈ ಪಾಟಿ ಪ್ರದರ್ಶನ ನೀಡುತ್ತಾರೆ ಎಂದು ಗೊತ್ತಿರಲಿಲ್ಲಚಂದ್ರು ಅವರಿಗೆ ಯಕ್ಷಗಾನ ಗೊತ್ತು ಎಂದು ಅವರ ಆಪ್ತರಿಗಷ್ಟೇ ಗೊತ್ತಿದ್ದ ವಿಚಾರ। ನಾಗತಿಹಳ್ಳಿಯಲ್ಲಿ ಅಂದಿನ ಯಕ್ಷಗಾನ ಬಯಲಾಟದಲ್ಲಿ ಅವರ ಮತ್ತೊಂದು ಪ್ರತಿಭೆ ಬಯಲಾಯಿತು!ಹಾಗೆಯೇ ಎಲ್ಲ ಹಳ್ಳಿಗಳಲ್ಲಿ ಈ ರೀತಿಯ ಸಾಂಸ್ಕೃತಿಕ ಹಬ್ಬಗಳು ನಡೆದರೆ ಎಷ್ಟು ಚೆನ್ನ ಅನ್ನಿಸುತ್ತದೆ.

(ಕರ್ಟೆಸೀ: ದಟ್ಸ್ ಕನ್ನಡ)

Tuesday, April 8, 2008

ರಜನಿಯ ಪ್ರತ್ಯುತ್ತರ ಉಡಾಫೆ ಮಾತು:ಚಂಪಾ

ಬೆಂಗಳೂರು: ತಮಿಳುನಾಡು ಹಾಗೂ ಕನ್ನಡ ಚಿತ್ರರಂಗ ನಡೆಸಿದ ಸತ್ಯಾಗ್ರಹ ಕೊನೆಗೆ , ರಜನಿ ವರ್ಸಸ್ ಕನ್ನಡಿಗ ಎಂದು ತಿರುಗಿದೆ. ಆವೇಶದ ಭರದ ಭಾಷಣದಲ್ಲಿ 'ಕನ್ನಡಿಗರಿಗೆ ಒದೆಯಿರಿ' ಎಂಬ ಪ್ರಚೋದನಾಕಾರಿ ಮಾತುಗಳನ್ನು ಆಡಿದ ರಜನಿಕಾಂತ್ ತಮ್ಮ ತಪ್ಪನ್ನು ಒಪ್ಪಿಕೊಂಡು ಸಮಸ್ತ ಕನ್ನಡಿಗರ ಕ್ಷಮೆಯಾಚನೆ ಮಾಡಬೇಕು ಎಂದು ಕನ್ನಡಪರಸಂಘಟನೆಗಳು ಆಗ್ರಹಿಸಿವೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಗೆ ರಜನಿ ನೀಡಿದ ಪ್ರತ್ಯುತ್ತರದಲ್ಲಿ 'ನಾನು ಸಮಸ್ಯೆ ಹುಟ್ಟುಹಾಕುತ್ತಿರುವ ವ್ಯಕ್ತಿಗಳನ್ನು ಒದೆಯಬೇಕು ಎಂದಿದ್ದೇನೆಯೇ ವಿನಾ ಅದು ಎಲ್ಲಾ ಕನ್ನಡಿಗರಿಗೆ ಅಲ್ಲಾ. ಆ ರೀತಿ ಹೇಳಲು ನಾನು ಅವಿವೇಕಿ ಅಲ್ಲ ಎಂದ ರಜನಿಯವರು ಹೇಳಿದ್ದರು.
ಈ ಮಾತುಗಳಿಂದ ತೃಪ್ತರಾಗದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲರು ರಜನಿ ಕಾಂತ್ ಅಲ್ಲಿನ ಜನತೆಗೆ ದೇವರೇ ಇರಬಹುದು. ಆದರೆ ಆಡಿದ ಮಾತಿನಿಂದ ತಪ್ಪಿಸಿಕೊಳ್ಳಲು, ವಿಷ್ಣುವರ್ಧನ್, ಅಂಬರೀಷ್, ಗಿರೀಶ್ ಕಾರ್ನಡ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅಶ್ವತ್ಥ್ ಅವರುಗಳು ಹೇಳಿದರೆ ಕ್ಷಮೆ ಕೋರುವೆ ಎಂದು ಉಡಾಫೆ ಮಾತನಾಡಿದ್ದಾರೆ. ಮೇಲ್ಕಂಡ ಗಣ್ಯರಲ್ಲಿ ಅಂಬಿ, ವಿಷ್ಣು ಅವರು ಕನ್ನಡಿಗರೇ ಅಲ್ಲ. ಕನ್ನಡ ಚಳವಳಿಗೆ ಕೈಜೋಡಿಸಿದವರಲ್ಲ. ಉಳಿದವರ ವಿಷಯ ಬೇಡ ಎಂದು ಚಂಪಾ ಹೇಳಿದ್ದಾರೆ.
ನಾಡಿನ ಹಲವಾರು ಕಲಾವಿದರು, ರಾಜಕಾರಣಿಗಳ ಅಭಿಪ್ರಾಯಗಳು ಇದಕ್ಕೆ ಪೂರಕವಾಗಿದ್ದು, ಎಲ್ಲರೂ ರಜನಿಕಾಂತ್ ಅವರ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ। ರಜನಿ ಕಾಂತ್ ಚಿತ್ರಗಳ ಬಿಡುಗಡೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂಬ ಕರವೇ ಅಧ್ಯಕ್ಷ ನಾರಾಯಣಗೌಡರ ಹೇಳಿಕೆಗೆ ಉತ್ತರಿಸಿದ ರಜನಿ ಕಾಂತ್ ಕರ್ನಾಟಕದಲ್ಲಿ ತಮಿಳರಿಗಿಂತ ಕನ್ನಡಿಗರೇ ಹೆಚ್ಚು ನನ್ನ ಚಿತ್ರಗಳನ್ನು ಇಷ್ಟಪಡುತ್ತಾರೆ। ಇದರಿಂದ ಅವರಿಗೇ ನಷ್ಟ ಎಂದಿದ್ದಾರೆ. ರಜನಿಕಾಂತ್ ವಿರುದ್ಧ ವಿವಿಧ ಸಂಘಟನೆಗಳಿಂದ ಭಾನುವಾರವೂ ಪ್ರತಿಭಟನೆ ಮುಂದುವರೆದಿತ್ತು.
(ಕರ್ಟೆಸೀ: ದಟ್ಸ್ ಕನ್ನಡ)