Monday, March 31, 2008

ಚಿತ್ರ ವಿಮರ್ಶೆ: ಸತ್ಯ ಇನ್ ಲ‌ವ್

(ಕ‌ರ್ಟೆಸೀ: ದ‌ಟ್ಸ್ ಕ‌ನ್ನಡ‌) ಶಿವರಾಜ್ ಕುಮಾರ್ ಮಚ್ಚು ಹಿಡಿದು ನಿಂತಿದ್ದಾರೆ, ಎಂತಹ ಬಿರುಗಾಳಿಯನ್ನೂ ಎದುರಿಸುವ ಸಲುವಾಗಿ 'ಅಖಾಡ'ಕ್ಕಿಳಿದಿದ್ದಾರೆ ಎಂದರೆ ಸಾಕು. ಅದಕ್ಕೊಂದು ಕಾರಣ ಇರಲೇ ಬೇಕು. ಸುಖಾಸುಮ್ಮನೆ ಪೋಸ್ ಕೊಡುವವರಲ್ಲ ಶಿವಣ್ಣ.
ಎತ್ತಾಡಿಸಿ, 'ಜೋ'ಗುಳ ಹಾಡಿ, ತೊಟ್ಟಿಲು ತೂ'ಗಿ'ದ ತಾಯಿಗಾಗಿಯೋ, ಬೆನ್ನಿಗೆ ಬಿದ್ದ ತಂಗಿಯ 'ಸಂತ'ಸಕ್ಕೆ ಅಡ್ಡಿಬಂದವರನ್ನು ಬಗ್ಗುಬಡಿಯುವ ಸಲುವಾಗಿಯೋ, ದೇಹಿ ಎಂದ ಬಡ ಜನರನ್ನು ಕಾಡುವ ವೈರಿಗಳ ಮಗ್ಗುಲು ಮುರಿಯಲೋ... ಒಟ್ಟಾರೆ ಅದಕ್ಕೊಂದು 'ಧರ್ಮಕಾರಣ' ಇದ್ದೇ ಇರುತ್ತೆ; ಇರಲೇ ಬೇಕು ಕೂಡ.
ಶಿವಣ್ಣ ಮತ್ತೊಮ್ಮೆ ಅದೇ ಮಚ್ಚು ಹಿಡಿದು, ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೊಂದು ಕಾರಣವನ್ನೂ ಕೊಟ್ಟಿದ್ದಾರೆ. ತಮ್ಮಲ್ಲಿ ಅಂಕುರಿಸಿದ ಪ್ರೀತಿಗಾಗಿ, ಅದರ ನೀತಿಗಾಗಿ, ಆ ನೀತಿಯ ಪರಿಪೂರ್ಣ ಪಾಲನೆಗಾಗಿ ಆ ವೇಷ ಧರಿಸಿದ್ದಾರೆ. 'ಸತ್ಯ'ನಾಗಿ ಬದಲಾಗಿದ್ದಾರೆ. ಐ ಆಮ್ 'ಇನ್ ಲವ್' ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.
ಸತ್ಯವನ್ನೇ ಹೇಳುತ್ತೇನೆ. ಅದನ್ನು ಬಿಟ್ಟು ಇನ್ನೇನು ಹೇಳುವುದಿಲ್ಲ. ಆ ಸತ್ಯದಾಣೆಗೂ ಪ್ರೀತಿಯೇ ಸತ್ಯ ಎಂಬ ಕಹಿ ಸತ್ಯವನ್ನು ಶಿವಣ್ಣನ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಘವ ಲೋಕಿ.
ಒಂದು ಸಾಮಾನ್ಯ ಕಥೆಯ ಎಳೆಯನ್ನಿಟ್ಟುಕೊಂಡು 'ಈ ಭೂಮಿ ಮೇಲೆ ಪ್ರೀತಿ ಏಕಿದೆ?' ಪ್ರೀತಿಯ ಮುಂದಿರುವ ಸವಾಲುಗಳೇನು? ಅಂಥದ್ದೊಂದು ಪರಿಪೂರ್ಣ ಪ್ರೀತಿಗೆ ಹೇಗೆ ನ್ಯಾಯ ಸಲ್ಲಿಸಬೇಕು? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಯತ್ನ ಮಾಡಿದ್ದಾರೆ. ಆ ಪ್ರೀತಿಯನ್ನು ಪ್ರಚುರ ಪಡಿಸಲು ಸತ್ಯ ಎಂಬ ಪ್ರಧಾನ ಪಾತ್ರ ಸೃಷ್ಟಿಸಿದ್ದಾರೆ. ಆ ಪಾತ್ರದ ಹತ್ತು ಹಲವು ನೇಪಥ್ಯ ದೃಶ್ಯಗಳನ್ನು ಸೃಷ್ಟಿಸಿ ಕತೆಗೆ ಇನ್ನಷ್ಟು ಮೆರುಗು ನೀಡಿದ್ದಾರೆ.
ಒಂದು ಪಕ್ಕಾ ಮಾಸ್ ಚಿತ್ರಕ್ಕೆ ಏನೇನು ಬೇಕೋ ಅವೆಲ್ಲವನ್ನು ಒಂದೆಡೆ ಕಲೆಹಾಕಿ ಪ್ಯಾಕೇಜ್ ರೀತಿಯಲ್ಲಿ ನೀಡಿದ್ದಾರೆ. ಒಂದು ದೃಶ್ಯ, ಅದರ ಬೆನ್ನಿಗೇ ಒಂದು ಫೈಟು, ಮತ್ತೊಂದಿಷ್ಟು ಕಾಮಿಡಿ ಟ್ರ್ಯಾಕ್, ಜತೆಗೊಂದು ಹಾಡು, ನಂತರ ಮತ್ತೊಂದು ದೃಶ್ಯ... ಹೀಗೆ ಎಲ್ಲವೂ ಫಟಾಫಟ್. ಶಿವಣ್ಣನ ಮ್ಯಾನರಿಸಂಗೆ ಸರಿಹೊಂದುವಂತಹ ಡೈಲಾಗ್‌ಗಳು, ಅವರಿಗೆ ಸರಿಹೊಂದುವ ವಿಲನ್‌ಗಳು ಹೀಗೆ ಪ್ರತಿ ಫ್ರೇಮ್‌ನಲ್ಲೂ ಹೊಸತನ ಸೃಷ್ಟಿಸಲು ಪ್ರಯತ್ನಿಸಿದ್ದಾರೆ.
ಎಲ್ಲಾ ಅರ್ಥವಾಗಬೇಕಾದರೆ ಮೊದಲು ಕತೆ ಕೇಳಲೇ ಬೇಕು. ಆತ ಸತ್ಯ. ಅಪ್ಪ, ಅಮ್ಮ, ಅಕ್ಕ-ಭಾವನೊಂದಿಗಿರುತ್ತಾನೆ. ಜತೆಗೊಂದಿಷ್ಟು ಪಡ್ಡೆ ಹುಡುಗರು. ಎಲ್ಲರದ್ದೂ ಪಾರ್ಕು, ಡಿಸ್ಕೋಥೆಕ್ ಅಲ್ಲಿ ಇಲ್ಲಿ ಅಂಡಲೆಯುವ ವೃತ್ತಿ. ಸತ್ಯ ಜಂಟಲ್‌ಮನ್. ಯಾರಾದರೂ ಹೆಣ್ಣುಮಕ್ಕಳ ತಂಟೆಗೆ ಹೋದರೆ ಅವರ ಜತೆ ಫೈಟ್ ಮಾಡುತ್ತಾನೆ. ಆದರೆ ಪ್ರೀತಿ, ಪ್ರೇಮದ ಬಗ್ಗೆ ಮಾತ್ರ ಆತ ನೂರು ಮಾರು ದೂರ. ಆದರೆ ಲಲನಾಮಣಿಯರಿಗೆ ಮಾತ್ರ ಸತ್ಯ ನಿತ್ಯ ಮದನ.
ಮನೆಮಂದಿಯಲ್ಲಾ ಸೇರಿ ಮಂತ್ರಾಲಯಕ್ಕೆ ಟ್ರಿಪ್ ಹೋಗುತ್ತಾರೆ. ಸತ್ಯನಿಗೆ ಅಲ್ಲೊಬ್ಬಳು ವೇದಾ ಎಂಬ ಹುಡುಗಿ ಸಿಗುತ್ತಾಳೆ. ಅವರಳ ನೋಟ, ಮೈಮಾಟ ಸತ್ಯನ ಮನಸ್ಸಿನಲ್ಲಿ ಪ್ರೀತಿಯ ಅಲೆ ಎಬ್ಬಿಸುತ್ತದೆ. ಅದುವೇ ನಿಜವಾದ ಪ್ರೀತಿ ಎಂದು ಮನದಟ್ಟಾಗುವ ವೇಳೆಗೆ ಆಕೆ ಮಾಯವಾಗುತ್ತಾಳೆ. ಅವಳ ಹುಡುಕಾಟದಲ್ಲಿ ಒಂದಷ್ಟು ಕಾಲಹರಣ ಮಾಡುತ್ತಾನೆ. ಕೊನೆಗೂ ಅವಳ ಮೂಲವನ್ನು ಪತ್ತೆಹಚ್ಚುತ್ತಾನೆ. ಆಕೆ ಆಂಧ್ರದ ಕರ್ನೂಲು ಮೂಲದ ರೌಡಿ ರಂಗಾರೆಡ್ಡಿಯ ಮಗಳು ಎಂಬ ವಿಷಯ ಅರಿತು ಅವಳನ್ನು ಪಡೆದುಕೊಳ್ಳಲು ರೈಲು ಹತ್ತುತ್ತಾನೆ. ಇತ್ತ ರಂಗಾರೆಡ್ಡಿ ಮಕ್ಕಳಿಗೆ ಸತ್ಯನ ಉದ್ದೇಶ ಗೊತ್ತಾಗಿ ಅವನನ್ನು ಮುಗಿಸುವ ಸಂಚು ಹೂಡುತ್ತಾರೆ. ಆದರೂ ಸತ್ಯ ಎಲ್ಲರನ್ನೂ ಬಗ್ಗು ಬಡಿಯುತ್ತಾನೆ. ಅವಳಿಗಾಗಿ ಎಲ್ಲದಕ್ಕೂ ಸಿದ್ಧನಾಗುತ್ತಾನೆ. ಅವಳ ಮನಸ್ಸು ಗೆಲ್ಲಲು ಯತ್ನಿಸುತ್ತಾನೆ. ಸಾಕಷ್ಟು ಬಾರಿ ಸಾವಿನ ದವಡೆಗೂ ಹೋಗಿ ಮತ್ತೆ ಎದ್ದು ಬರುತ್ತಾನೆ... ಮುಂದಿನದನ್ನು ತೆರೆ ಮೇಲೆ ನೋಡಿದರಷ್ಟೇ ಚೆಂದ.
ಇಡೀ ಚಿತ್ರದ ಹೈಲೈಟ್ ಎಂದರೆ ಶಿವಣ್ಣನ ಅಮೋಘ ಅಭಿನಯ. ಒಟ್ಟಾರೆ ಹೇಳುವುದಾದರೆ ಸರ್ವಂ 'ಶಿವ' ಮಯಂ. ಪ್ರೀತಿಯ ಹುಡುಕಾಟದಲ್ಲಿ ಅವರು ಪಡುವ ಪಾಡು, ಅದು ಸಿಗುವ ಸೂಚನೆಗಳೇ ಇಲ್ಲದಿದ್ದಾಗ ನಲುಗುವ ಪರಿ... ಅವೆಲ್ಲ ಶಿವಣ್ಣನಿಂದ ಮಾತ್ರ ಸಾಧ್ಯ. ಹಾಗಂತ ದೂರದಿಂದ ಬಂದಂತ ಸುಂದರಾಂಗ ಜಾಣೆ ಜೆನಿಲಿಯಾಳನ್ನು ಮಾತ್ರ ಸಹಿಸಿಕೊಳ್ಳುವುದು ಕಷ್ಟ. ಆದರೆ ಆಕೆ ಗಟ್ಟಿಯಾಗಿ ತುಟಿ ಕಚ್ಚಿ ನುಲಿದಾಗ, ಅಂದವಾಗಿ ನಕ್ಕಾಗ, ಶಿವಣ್ಣನ ಜತೆ ಥೈ ಥೈ ಎನ್ನುವಾಗ ಮಾತ್ರ ನೋಡಲು ಎರಡು ಕಣ್ಣು ಸಾಲದು. ಇನ್ನು ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಸೆರೆಯಾದೆನೂ...ಮತ್ತು ರೋಮಾಂಚನಾ... ಹಾಡುಗಳು ಖುಷಿ ಕೊಡುತ್ತವೆ. ಶ್ರೀನಾಥ್, ವಿನಯಾ ಪ್ರಸಾದ್, ಜಯಪ್ರಕಾಶ್, ಅಜಯ್, ಸುಬ್ಬರಾವ್ ಮುಂತಾದ ಪಾತ್ರಗಳು ಕತೆಗೆ ಅನಿವಾರ್ಯ. ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ ಚೆನ್ನಾಗಿದೆ. ಆದರೆ ಕೆಲವು ಕಡೆ ಬರುವ ತೆಲುಗು ಸಂಭಾಷಣೆ ಅಚ್ಚಕನ್ನಡಿಗರಿಗೆ ಅರಗಿಸಿಕೊಳ್ಳುವುದು ತುಸು ಕಷ್ಟ.
ಅಂದಹಾಗೆ ನಿರ್ದೇಶಕರ ಬಗ್ಗೆ ಒಂದು ಮಾತು ಹೇಳಲೇ ಬೇಕು. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಅವರು ಗೆದ್ದಿದ್ದಾರೆ. ಚಿತ್ರದ ಪ್ರತಿ ಸೀನ್‌ನಲ್ಲೂ ಥಳಥಳಿಸುವ ಅದ್ದೂರಿತನ, ಕರ್ನೂಲಿನ ದೃಶ್ಯಗಳಿಗೆ ತೆಲುಗಿನ ನಟರನ್ನೇ ಬಳಸಿಕೊಂಡು ಎಲ್ಲೂ ಅಭಾಸವಾಗದಂತೆ ಚಿತ್ರಿಸಿರುವುದು ಸುಲಭದ ಮಾತಲ್ಲ. ಆ ಮಟ್ಟಿಗೆ ಅವರ ಪ್ರಯತ್ನ ಶ್ಲಾಘನೀಯವೇ ಸರಿ. ಅವರು ನಿರ್ಮಾಪಕರು ವ್ಯಯಿಸಿದ ಕಾಸಿಗಂತೂ ಮೋಸ ಮಾಡಿಲ್ಲ. ಒಟ್ಟಾರೆ ಶಿವಣ್ಣನ ಹಳೇ ಖದರ್ ನೋಡುವ ಹಂಬಲವಿದ್ದರೆ ಚಿತ್ರವನ್ನು ನೋಡಿ...

Wednesday, March 26, 2008

ಗೋಲ್ಡನ್ ಸ್ಟಾರ್ ಗಣೇಶ್ ಏಳು ಅವತಾರಗಳು

(ಕರ್ಟೆಸೀ: ದಟ್ಸ್‌ಕನ್ನಡ)
ಕೆ.ಮಂಜು ನಿರ್ಮಾಣದ, ಹಾಸ್ಯ ನಟ ನಾಗಶೇಖರ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಹೊಚ್ಚಹೊಸ ಚಿತ್ರ 'ಅರಮನೆ' ಪ್ರೇಕ್ಷಕರಿಗೆ ಹಬ್ಬದೂಟವನ್ನೇ ಬಡಿಸಲಿದೆ.
ಅರಮನೆ ಚಿತ್ರದಲ್ಲಿ ಗಣೇಶ್ ಏಳು ಅವತಾರಗಳಲ್ಲಿ ಕಾಣಿಸಲಿದ್ದಾರೆ. ಪ್ರೇಮಿ, ಛಾಯಾಗ್ರಾಹಕ, ವಿದೂಷಕ, ರಾಜ್ ಕಪೂರ್, ಚಾರ್ಲಿ ಚಾಪ್ಲಿನ್ ಮತ್ತು ಅಪ್ಪು ರಾಜ ಪಾತ್ರಗಳಲ್ಲಿ ಬಣ್ಣ ಬಳಿದುಕೊಳ್ಳಲಿದ್ದಾರೆ(ಇನ್ನೊಂದು ಪಾತ್ರ ಯಾವುದು ಎಂದು ಗೊತ್ತಾಗಿಲ್ಲ!). ಅಪ್ಪುರಾಜ ಪಾತ್ರದ ಎರಡು ದಿನಗಳ ಚಿತ್ರೀಕರಣಕ್ಕಾಗಿ ಗಣೇಶ್ ಎರಡು ತಿಂಗಳಿಂದ ಕಠೋರವಾಗಿ ಅಭ್ಯಾಸ ಮಾಡಿದ್ದಾರೆ. ಅಪ್ಪುರಾಜನ ಕೊನೆ ದೃಶ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಬಂಧಿಸಿದ ಮೇಲೆ ಗಣೇಶ್ ಮಧುರ ಯಾತನೆಯಿಂದ ಹೊರಬಂದಿದ್ದಾರೆ.
ಅಪ್ಪು ರಾಜ ಚಿತ್ರದಲ್ಲಿ ಕಮಲ್ ಹಾಸನ್ ಮೂರುವರೆ ಅಡಿ ಎತ್ತರದ ವಿದೂಷಕನ ಪಾತ್ರದಲ್ಲಿ ನಟಿಸಿದ್ದರು. ಈಗ ಅದೇ ರೀತಿಯ ಪಾತ್ರವನ್ನು ಗಣೇಶ್ ಮಾಡುತ್ತಿದ್ದಾರೆ. ಇದೊಂದು ರೀತಿ ಕಷ್ಟದ ಕೆಲಸ. ಕಾಲನ್ನು ಮಡಿಚಿ ಪ್ಯಾಕ್ ಮಾಡಿಕೊಂಡು ಮೊಣಕಾಲಿನ ಮೇಲೆ ನಡೆದಾಡಬೇಕು. ಹಾಡಿನ ಸನ್ನಿವೇಶದಲ್ಲಿ ಎರಡು ದಿನ ಮೊಣಕಾಲಿನ ಮೇಲೆ ನಡೆದು ಸುಸ್ತಾದಗಣೇಶ್ ಕೊನೆಯ ಶಾಟ್‌ನಲ್ಲಿ ಇನ್ನು ನನ್ನ ಕೈಲಿ ಆಗುವುದಿಲ್ಲ ಎಂದು ನೆಲದ ಮೇಲೆ ಬಿದ್ದು ಅತ್ತೇಬಿಟ್ಟರಂತೆ. ನಂತರ ಗಣೇಶ್ ಅವರನ್ನು ಪರೀಕ್ಷಿಸಿದ ವೈದ್ಯರ ತಂಡ ಎಲ್ಲಾ ಓಕೆ ಎಂದು ಹೇಳಿದೆ.
ಈ ಚಿತ್ರದ ಒಂದು ದೃಶ್ಯಕ್ಕಾಗಿ 35ಲಕ್ಷ ರೂ. ವೆಚ್ಚದಲ್ಲಿ ಸೆಟ್ ಹಾಕಲಾಗಿತ್ತು. ನಿರ್ಮಾಪಕ ಕೆ.ಮಂಜು ಅವರ 'ಅರಮನೆ' 18ನೇ ಚಿತ್ರ. ಅರಮನೆ ಏಪ್ರಿಲ್ 4,2008ರಂದು ಕರ್ನಾಟಕ ರಾಜ್ಯದಾದ್ಯಂತ ತೆರೆಕಾಣಲಿದೆ.

Tuesday, March 25, 2008

10ಎ ರೂಟ್ ಬಸ್ ಕಂಡಕ್ಟರಾಗಿ ರಜನಿ ತೆರೆಯಮೇಲೆ


(ಕ‌ರ್ಟೆಸೀ: ದ‌ಟ್ಸ್ ಕ‌ನ್ನಡ‌)
ಇತಿಹಾಸ ಮರುಕಳಿಸುತ್ತದೆ ಎನ್ನುವುದು ಇದಕ್ಕೇ ಏನೋ? ಯಾವ ವೃತ್ತಿಯಿಂದ ನೆಗೆದು ಜಾಕಿ ಚಾನ್ ಬಿಟ್ಟರೆ ಏಷ್ಯಾದಲ್ಲೇ ಅತೀ ಹೆಚ್ಚಿನ ಸಂಭಾವನೆ ಪಡೆಯುವ ನಟ ಎಂದು ಖ್ಯಾತರಾಗಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ 10ಎ ರೂಟ್ ನಂಬರ್ ಬಸ್‌ನಲ್ಲಿ ಖಾಕಿ ಬಟ್ಟೆ ಧರಿಸಲಿದ್ದಾರೆ. ಅವರೊಂದಿಗೆ ಎಪ್ಪತ್ತರ ದಶಕದಲ್ಲಿ ಬಸ್ ಸಾರಥಿಯಾಗಿದ್ದ ಜೀವದ ಗೆಳೆಯ ರಾಜ್ ಬಹಾದ್ದೂರ್ ಮತ್ತೆ ಸ್ಟೀಯರಿಂಗ್ ವೀಲ್ ಹಿಡಿಯಲಿದ್ದಾರೆ. 1970ರಲ್ಲೇ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ರೈಟ್ ರೈಟ್ ಎಂದು ಹೇಳುತ್ತ ಜನರನ್ನು ಸೆಳೆದಿದ್ದ ರಜನಿ ಮತ್ತೊಮ್ಮೆ ಅದೇ ವೃತ್ತಿಗೆ ಮರಳಲಿದ್ದಾರೆ.
ಶ್ರೀನಗರ ಯಾರ್ರೀ? ಎಷ್ಟೊಂದ್ ಜಗಾ ಇದೆಯಲ್ರೀ, ಹೋಗ್ರಿ ಒಳಗೆ, ಯಾಕ್ರೀ ಫುಟ್‌ಬೋರ್ಡ್ ಮೇಲೆ ನಿಂತ್ಕೊಂಡು ಸಾಯ್ತೀರಾ? ಹೆಣ್ಮಕ್ಕಳಿಗೆ ಜಾಗ ಬಿಟ್ಟುಕೊಡಬೇಕಂತ ಗೊತ್ತಾಗಲ್ವಾ? ಶ್ರೀನಗರ ಶ್ರೀನಗರ ಅಂತ ಕೂಗಿದ್ದು ಯಾರಾದ್ರೂ ಹತ್ಕೊಳ್ಳಿ ಅಂತ, ನೀವು ಇಳ್ಕೊಂಡೇ ಬಿಟ್ರಲ್ಲ, ಶ್ರೀನಗರ ಇನ್ನೂ ಬಂದಿಲ್ಲ ಹತ್ರೀ ಮೇಲೆ... ರಜನಿ ಬಾಯಿಂದ ಇಂಥಾ ಮಾತುಗಳು ಬರುವುದನ್ನು ಕೇಳಲು ಕಾಯುತ್ತಿರುವ 10ಎ ರೂಟ್ ಬಸ್ ಚಿತ್ರಪ್ರೇಮಿಗಳೇ ಸಂಭ್ರಮಿಸುವ ಮುನ್ನ ಮುಂದಿನದನ್ನು ಓದಿಬಿಡಿ.
10ಎ ರೂಟ್ ನಂಬರ್ ಬಸ್ ಕಂಡಕ್ಟರ್ ಆಗಿ ಮತ್ತೆ ಆವಿರ್ಭವಿಸುತ್ತಿರುವುದು ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರದಲ್ಲಿ. ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ ನಟಿಸಿದ್ದ 'ಕಥಾ ಪರಯುಂಬೋಲ್' ಚಿತ್ರದ ಅವತರಣಿಕೆಯಲ್ಲಿ ಕಂಡಕ್ಟರ್‌ಗಿರಿಯಿಂದ ಸ್ಟಾರ್‌ಗಿರಿಯವರೆಗೆ ಏರಿದ ವ್ಯಕ್ತಿಯ ಪಾತ್ರದಲ್ಲಿ ವಿಜೃಂಭಿಸಲಿದ್ದಾರೆ ರಜನಿ.
ತಮಿಳಿನಲ್ಲಿ 'ಕುಸೇಲನ್' ಆಗಿದ್ದರೆ ತೆಲುಗಿನಲ್ಲಿ 'ಕುಚೇಲುಡು' ಆಗಿ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣ ರಾಜೇಂದ್ರ ಮಾರುಕಟ್ಟೆಯಿಂದ ಶ್ರೀನಗರದವರೆಗೆ ಚಲಿಸುತ್ತಿದ್ದ ಬಸ್ಸು ಈಗ ಹೈದರಾಬಾದ್ ಸ್ಟುಡಿಯೋದಲ್ಲಿ ಚಲಿಸಲಿದೆ. ಇದರ ಶೂಟಿಂಗ್ ಬೆಂಗಳೂರಿನಲ್ಲಿ ಸಾಧ್ಯವಿಲ್ಲದಿರುವುದರಿಂದ ಹೈದರಾಬಾದ್‌ನ ಸ್ಟುಡಿಯೋದಲ್ಲಿ ರಜನಿ ಮತ್ತು ರಾಜ್ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಆಗಿ ಬಣ್ಣ ಹಚ್ಚಲಿದ್ದಾರೆ.
ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ಕಥೆಯನ್ನು ಚಿತ್ರ ಹೊಂದಿದ್ದರೂ ಇದು ಅವರ ನಿಜ ಜೀವನದ ಕಥೆ ಅಲ್ಲ. ಹಾಗೆ, ಇದನ್ನು ಸಂಪೂರ್ಣ ಅಲ್ಲಗಳೆಯಲೂ ಆಗದು. ಏಕೆಂದರೆ, ಚಿತ್ರರಂಗಕ್ಕೆ ಧುಮುಕಲು ಪ್ರೇರೇಪಿಸಿ ತನುಮನಧನವನ್ನು ಅರ್ಪಿಸಿದ್ದ ರಾಜ್ ಬಹಾದ್ದೂರ್ ಅವರು ಮಾತ್ರವಲ್ಲ ಸ್ಟಾರ್‌ಗಿರಿಗೆ ಏರಲು ಕಾರಣಕರ್ತನಾದ ನಾಪಿತನ ಪಾತ್ರ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಉಳಿದಂತೆಲ್ಲ ಮಲಯಾಳಂ ಚಿತ್ರದ ನಕಲಾಗಲಿದೆ 'ಕುಸೇಲನ್'.
ಸಂತಸದ ಸಂಗತಿಯೆಂದರೆ ರಜನಿ ಕೂಡ ತಮ್ಮ ಅಂದಿನ ದಿನಗಳನ್ನು ಮರೆತಿಲ್ಲ. ನಟನೆಯ ಏಕತಾನತೆ ಬೇಸರವೆನಿಸಿದಾಗ ರಜನಿ ಛದ್ಮವೇಷದಲ್ಲಿ ಬೆಂಗಳೂರಿಗೆ ಬಂದು ತಮ್ಮ ಸ್ನೇಹಿತರನ್ನು ಭೇಟಿಯಾಗುತ್ತಿದ್ದ ಸಂಗತಿಯೂ ಚಿತ್ರದಲ್ಲಿ ಸೇರಿಸಲಾಗಿದೆ. ಆದರೆ ಇಲ್ಲಿ ಅವರು ಛದ್ಮವೇಷ ಧರಿಸಿದರೂ ಯಾವ ಸ್ನೇಹಿತನನ್ನೂ ಭೇಟಿಯಾಗುವುದಿಲ್ಲ. ನಿರ್ದೇಶನದ ಸಾರಥ್ಯವಹಿಸಿರುವ ಪಿ.ವಾಸು ಅವರು ರಜನಿ ನಿಜ ಜೀವನದ ಕೆಲ ಸನ್ನಿವೇಶಗಳನ್ನು 'ಕುಸೇಲನ್' ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಕಂಡಕ್ಟರಾಗಿ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಆರಂಭದ ದಿನಗಳಲ್ಲಿ ರಜನಿ ಕಂಡ ಕಷ್ಟದ ದಿನಗಳು, ಅವರ ನಾಟಕದ ಹುಚ್ಚು ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿವೆ.
ಚಿತ್ರದಲ್ಲಿ ರಜನಿಯ ಪ್ರೇಯಸಿಯಾಗಿ ಅವರ ಹಿಂದಿನೆರಡು ಚಿತ್ರಗಳಾದ ಚಂದ್ರಮುಖಿ ಮತ್ತು ಶಿವಾಜಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಯನತಾರಾ ಅಭಿನಯಿಸಲಿದ್ದಾರೆ. ಚಿತ್ರೀಕರಣ ಮಾರ್ಚ್ 15ರಿಂದ ಹೈದರಾಬಾದ್‌ನ ಸ್ಟುಡಿಯೋದಲ್ಲಿ ಆರಂಭವಾಗಿದೆ. ಅಂದ ಹಾಗೆ, ತಮಿಳು ಚಿತ್ರರಂಗದಲ್ಲಿ ವಿರಾಜಿಸುತ್ತಿರುವ ಮತ್ತೊಬ್ಬ ಸೂಪರ್ ಸ್ಟಾರ್ ಕಮಲಹಾಸನ್ ಕೂಡ ಈ ಚಿತ್ರದಲ್ಲಿ ಅತಿಥಿಯಾಗಿ ನಟಿಸಲಿದ್ದಾರೆ.

ಕಿಶನ್ ಮುಡಿಗೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ

(ಕ‌ರ್ಟೆಸೀ: ದ‌ಟ್ಸ್ ಕ‌ನ್ನಡ‌)

ಬೀದಿ ಬೀದಿಗಳಲ್ಲಿ ರದ್ದಿ ಆಯುವ ಹುಡುಗರ ಕುರಿತ ಮನೋಜ್ಞ ಚಿತ್ರ 'ಕೇರಾಫ್ ಫುಟ್‌ಪಾತ್' ತಯಾರಿಸಿದ ವಿಶ್ವದ ಅತಿ ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್ ಕೈರೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಆಯ್ದುಕೊಂಡಿದ್ದಾನೆ.
ಹಿಂದಿ ಚಿತ್ರರಂಗದ ಶೆಹೆನ್‌ಷಾ ಅಮಿತಾಭ್ ಬಚ್ಚನ್ ಪಡೆದಿದ್ದ ಪ್ರಶಸ್ತಿಯೊಂದು ವಿಶ್ವದ ಕಿರಿಯ ನಿರ್ದೇಶಕನೆಂದು ಗಿನ್ನೆಸ್ ರೆಕಾರ್ಡ್ ಸೇರಿದ ಕಿಶನ್ ಷೋಕೇಸಲ್ಲಿ ರಾರಾಜಿಸುತ್ತಿರುವುದು ಈ ಪೋರನ ಸಂಸತವನ್ನು ನೂರ್ಮಡಿಸಿದೆ.
ಮಕ್ಕಳ ವಿಭಾಗದಲ್ಲಿ ಪ್ರದರ್ಶಿತವಾದ ಕೇರಾಫ್ ಪುಟ್‌ಪಾತ್ ಚಿತ್ರ ಜ್ಯೂರಿ ಪ್ರಶಸ್ತಿ, ಅಂತಾರಾಷ್ಟ್ರೀಯ ಜ್ಯೂರಿಗಳ ವಿಶೇಷ ಪ್ರಶಸ್ತಿ ಮತ್ತು ಅಮಿತಾಭ್ ಬಚ್ಚನ್‌ಗೆ ನೀಡಿದ್ದ ಮತ್ತೊಂದು ಪ್ರಶಸ್ತಿಗೆ ಕಿಶನ್ ಆಯ್ಕೆಯಾಗಿದ್ದಾನೆ.
ಚಿತ್ರ ನಿರ್ದೇಶನಕ್ಕೆ ಇಳಿಯುವ ಮೊದಲು ಸಣ್ಣಪುಟ್ಟ ಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಿಶನ್ ಎಲ್ಲ ಹುಡುಗರಂತೆ ಆಟವಾಡಿಕೊಂಡಿದ್ದ. ಒಂದು ಶಾಲೆಯಿಂದ ಮರಳುವಾಗ ರದ್ದಿಯನ್ನು ಆರಿಸುತ್ತಿದ್ದ ಹುಡುಗರೇ ಕೇರಾಫ್ ಪುಟ್‌ಪಾತ್ ತೆಗೆಯಲು ಕಿಶನ್‌ಗೆ ಪ್ರಚೋದನೆ ನೀಡಿತು. ಅದಕ್ಕೆ ಹೆತ್ತವರ ಮತ್ತು ಶಾಲಾ ಮುಖ್ಯೋಪಾಧ್ಯಾಯರ ಪ್ರೋತ್ಸಾಹವೂ ದೊರೆಯಿತು.
ರದ್ದಿ ಆಯುವ ಹುಡುಗನೊಬ್ಬ ಶಾಲೆಗೆ ಹೋಗಿ ಅಸಾಧ್ಯವನ್ನು ಸಾಧಿಸುವುದೇ ಚಿತ್ರದ ತಿರುಳು. ಇದು ಇತರ ಬೀದಿಬದಿಯ ಮಕ್ಕಳಿಗೂ ಪ್ರೇರಣೆಯಾಗಬೇಕೆಂಬುದೇ ಕಿಶನ್ ಮನದಿಚ್ಛೆ.

Saturday, March 22, 2008

ಪತ್ನಿಗೆ ವಿಚ್ಛೇದನ ಕೊಡಲು ಮುಂದಾದ ಪ್ರಕಾಶ್ ರೈ

(ಕರ್ಟೆಸೀ: ದಟ್ಸ್ ಕನ್ನಡ)
ಕನ್ನಡ, ತೆಲುಗು,ತಮಿಳು ಹಾಗೂ ಮಲೆಯಾಳಂ ಚಿತ್ರರಂಗದ ಪ್ರಸಿದ್ಧ ನಟ, ನಿರ್ಮಾಪಕ ಪ್ರಕಾಶ್ ರೈ ತಮ್ಮ ಪತ್ನಿಗೆ ಸೋಡಚೀಟಿ ಕೊಡಲು ಮುಂದಾಗಿದ್ದಾರೆ. ಪ್ರಕಾಶ್ ರೈ ತಮ್ಮ ಪತ್ನಿ ಲಲಿತಕುಮಾರಿ ಅವರೊಂದಿಗೆ ವಿವಾಹ ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ತಾರಾ ಜೋಡಿ ಎನಿಸಿಕೊಂಡಿದ್ದ ಈ ದಂಪತಿಗಳಿಗೆ ಮೂರು ಮಕ್ಕಳು (ಗಂಡು ಮಗು ಮೃತಪಟ್ಟಿದೆ) ಇದ್ದಾರೆ.
ಇತ್ತೀಚಿನ ಸುದ್ದಿಯಂತೆ ಪ್ರಕಾಶ್ ರೈ ಚೆನ್ನೈನ ಎಗ್‌ಮೋರ್ ಫ್ಯಾಮಿಲಿ ಕೋರ್ಟ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಹಳಷ್ಟು ದಿನಗಳಿಂದ ಪ್ರಕಾಶ್ ರೈ ಮತ್ತು ಲಲಿತಕುಮಾರಿಅವರ ದಾಂಪತ್ಯ ಹಳಸಿರುವ ಬಗ್ಗೆ ಪತ್ರಿಕೆಗಳು ಆಗಿಂದಾಗ್ಗೆ ವರದಿ ಮಾಡುತ್ತಿದ್ದವು. ನಾವಿಬ್ಬರೂ ಬೇರೆ ಬೇರೆ ಯಾಗಿ ಇರಲು ಇಚ್ಛಿಸಿದ್ದೇವೆ ಎಂದು ಪ್ರಕಾಶ್ ರೈ ಗುರುವಾರ ಸುದ್ದಿಗಾರರಿಗೆ ತಿಳಿಸಿ ಅವರ ದಾಂಪತ್ಯದ ಬಗ್ಗೆ ಕೇಳಿಸುತ್ತಿದ್ದ ಗುಸುಗುಸು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಮಗಳನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂದು ಫ್ಯಾಮಿಲಿ ಕೋರ್ಟಲ್ಲಿ ಪ್ರಕಾಶ್ ರೈ ವಿನಂತಿಸಿಕೊಂಡಿದ್ದಾರೆ. ಮೇಕಪ್ ಸಹಾಯಕಿ ಬೋನಿ ವರ್ಮಾ ಜೊತೆ ಅನೈತಿಕ ಸಂಬಂಧ ಇರುವುದು ನಿಜ ಎಂದು ಸ್ವತಃ ಪ್ರಕಾಶ್ ರೈ ಅವರು ಒಪ್ಪಿಕೊಂಡಿದ್ದಾರೆ. ಬೋನಿ ವರ್ಮಾಳನ್ನು ಮದುವೆಯಾಗಿ ಮುಂದಿನ ಜೀವನ ಆಕೆಯೊಂದಿಗೆ ಕಳೆಯುವುದಾಗಿ ಪ್ರಕಾಶ್ ರೈ ತೀರ್ಮಾನಿಸಿದ್ದಾರೆ.
ಮಹಿಳಾ ಸಂಗಾತಿಯನ್ನು ನನ್ನೊಂದಿಗೆ ಇಟ್ಟುಕೊಳ್ಳುವುದು ಅದು ನನ್ನ ಶುದ್ಧ ವೈಯಕ್ತಿಯ ವಿಚಾರ. ಇದನ್ನು ಯಾರು ತಡೆಯಲು ವಿರೋಧಿಸಲು ಸಾಧ್ಯವಿಲ್ಲ. ನನ್ನ ಪತ್ನಿಗೆ ಈ ಬಗ್ಗೆ ಎಲ್ಲಾ ಗೊತ್ತು. ಈಗ ನಾವು ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ. ಇಷ್ಟಕ್ಕೂ ಮಾಧ್ಯಮ ನಮ್ಮ ವೈಯಕ್ತಿಕ ಜೀವನಕ್ಕೆ ಏಕಿಷ್ಟು ಪ್ರಾಮುಖ್ಯತೆ ಕೊಡುತ್ತಿದೆ. ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಪತ್ರಕರ್ತರೆಡೆಗೆ ಕೆಂಗಣ್ಣಿನಿಂದ ನೋಡಿದರು ಪ್ರಕಾಶ್ ರೈ.
ಪ್ರಕಾಶ್ ರೈ ಒಬ್ಬ ಪ್ಲೇಬಾಯ್ ಅನ್ನುವ ವಿಚಾರ ಗುಟ್ಟಾಗಿ ಏನೂ ಉಳಿದಿಲ್ಲ. ಕನ್ನಡದಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಪ್ರಕಾಶ್ ರೈ 'ಅನುಕೂಲಕ್ಕೊಬ್ಬ ಗಂಡ'ನಾಗಿ ಬದಲಾಗಿದ್ದಾರೆ ಅಷ್ಟೆ.

Monday, March 17, 2008

ಪುನೀತ್ ರಾಜ್ ಕುಮಾರ್ ಜೀವನದಲ್ಲಿ ಮತ್ತೊಂದು ವಸಂತಗೀತೆ

(ಕರ್ಟೆಸೀ: ವನ್ ಇಂಡಿಯಾ)
'ಬೆಟ್ಟದ ಹೂವು' ಚಿತ್ರದಲ್ಲಿ ''ಬಿಸಿಲೆ ಇರಲಿ, ಮಳೆಯೆ ಬರಲಿಕಾಡಲ್ಲಿ ಮೇಡಲ್ಲಿ ಅಲೆವೆ, ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ'' ಎಂಬ ಹಾಡಿಗೆ ಕುಣಿದ ಪುನೀತ್ ಇಷ್ಟು ಬೇಗ ಏರಿದ ಎತ್ತರ ನೋಡುತ್ತಿದ್ದರೆ ಆಶ್ಚರ್ಯವಾಗುತ್ತದೆ. ಈ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು ಪುನೀತ್.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಪುನೀತ್ ನಟಿಸಿದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಹಣದ ಹೊಳೆ ಹರಿಸುತ್ತಿವೆ. ಸ್ಯಾಂಡಲ್‌ವುಡ್‌ ಬಾಕ್ಸೀಫೀಸಿನ ಬಾದ್‌ಷಾ ಎನಿಸಿಕೊಂಡಿದ್ದಾರೆ. ಈಗ ಅವರ ಜೀವನದಲ್ಲಿ ಮತ್ತೊಂದು ವಸಂತನ ಆಗಮನವಾಗಿದೆ. ಮೊದಮೊದಲು ಡಾ. ರಾಜ್‌ಕುಮಾರ್ ಅವರ ಪುತ್ರ ಅನ್ನುವ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದರು. ಈ ಅರ್ಹತೆ ಒಂದೆರಡು ಚಿತ್ರಗಳಿಗಷ್ಟೇ ನೆರವಾಯಿತು. ನಂತರ ಪುನೀತ್‌ರ ಚಿತ್ರಗಳು ಗೆಲ್ಲಲು ಅವರ ಪ್ರತಿಭೆ ಒಂದೇ ಮಾನದಂಡವಾಯಿತು.
12 ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ನಟಿಸಿರುವ ಪುನೀತ್‌ಗೆ ಈಗ ಮೂವತ್ತರ ಮೇಲೆ ಮತ್ತೊಂದು. ಆದರೆ ನಟನಿಗೆ ಯಾವತ್ತು ವಯಸ್ಸು ಆಗುವುದೇ ಇಲ್ಲ ಅನ್ನುವ ಮಾತಿದೆ. ನಟರು ಸದಾ ಚಿರ ಯೌವ್ವನ್ನಿಗರು. ಇರಲಿ, ಮನೆಯವರು ಮುದ್ದಾಗಿ ಅಪ್ಪು ಎಂದು ಕರೆಯುವ ಪುನೀತ್ ಅವರದು ಪತ್ನಿ ಅಶ್ವಿನಿ ರೇವನಾಥ್ ಮಕ್ಕಳು ಧೃತಿ ಮತ್ತು ವಂದಿತಾರನ್ನು ಹೊಂದಿದ ಪುಟ್ಟ ಕುಟುಂಬ.
ಬಾಲ ಕಲಾವಿದನಾಗಿ ಪುನೀತ್ ಮೊದಲು ನಟಿಸಿದ ಚಿತ್ರ 'ವಸಂತ ಗೀತ' ನಂತರ ಭಾಗ್ಯವಂತ, ಹೊಸಬೆಳಕು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಯಾರಿವನು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್ ಚಿತ್ರಗಳಲ್ಲಿ ನಟಿಸಿ ತಮ್ಮ ವಾಮನ ಪ್ರತಿಭೆಯನ್ನು ಮೆರೆದಿದ್ದರು.
2002ರಲ್ಲಿ ತೆರೆಕಂಡ ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು 'ಚಿತ್ರ 25 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿತು. ಪುನೀತ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದ್ದು ಇಲ್ಲಿಂದಲೆ. ನಂತರ ಬಂದ 'ಅಭಿ'(125 ದಿನ), ವೀರ ಕನ್ನಡಿಗ(ಹ್ಯಾಟ್ರಿಕ್ ಹೀರೋ ಸ್ಥಾನ ತಪ್ಪಿಸಿದ ಚಿತ್ರ), ಮೌರ್ಯ(136ದಿನ), ಆಕಾಶ್(36 ವಾರ), ನಮ್ಮ ಬಸವ(125 ದಿನ), ಅಜಯ್(100ದಿನ), ಅರಸು(128ದಿನ), ಮಿಲನ(175 ದಿನ) ಎಲ್ಲವೂ ಶತದಿನೋತ್ಸವಗಳನ್ನು ಆಚರಿಸಿಕೊಂಡ ಚಿತ್ರಗಳು. 2008ರಲ್ಲಿ ತೆರೆಕಂಡ 'ಬಿಂದಾಸ್' ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. 'ವಂಶಿ' ಹಾಗೂ 'ರಾಜ್' ಚಿತ್ರಗಳು ಬರಬೇಕಾಗಿವೆ.
ಯೋಗರಾಜ್ ಭಟ್ಟರ ದೃಶ್ಯಕಾವ್ಯ 'ಮುಂಗಾರು ಮಳೆ' ಹಾಗೂ 'ಗಾಳಿಪಟ' ಚಿತ್ರಗಳಲ್ಲಿ ಪುನೀತ್ ನಟಿಸಬೇಕಾಗಿತ್ತು ಆದರೆ ಯೋಗರಾಜ್ ಭಟ್ಟರ ನಿರ್ದೇಶನದ ಮೇಲಿನ ನಂಬಿಕೆ ಸಾಲಲಿಲ್ಲವೋ ಏನೋ ನಟಿಸಲು ಪುನೀತ್ ಅಲ್ಲ ಪಾರ್ವತಮ್ಮ ಒಪ್ಪಲಿಲ್ಲ. 'ದುನಿಯಾ' ಚಿತ್ರದಲ್ಲಿ ವಿಜಯ್ ಅಭಿನಯ ನೋಡಿ ಮೆಚ್ಚಿ ಬೆನ್ನುತಟ್ಟಿದ್ದರು ಪುನೀತ್. ಕನ್ನಡದಲ್ಲೇ ಅತ್ಯಂತ ಹೆಚ್ಚು ಸಂಭಾವನೆ(ಸರಿ ಸುಮಾರು ಒಂದೂವರೆ ಕೋಟಿ ರೂ.) ಪಡೆಯುವ ನಟ ಪುನೀತ್ ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಮಯೂರ ಚಿತ್ರದ ನಿರ್ದೇಶಕರ ಹಠಾತ್ ಮರಣದ ಕಾರಣ ಆ ಚಿತ್ರ ನೆನೆಗುದಿಗೆ ಬಿತ್ತು. 'ಬಿಂದಾಸ್' ಬಿಡುಗಡೆಯಾದ ಒಂದು ವಾರದಲ್ಲೇ 3 ಕೋಟಿ ರೂ. ಗಳಿಸಿದೆ. ಇಷ್ಟೆಲ್ಲಾ ಹೆಗ್ಗಳಿಕೆಗಳ ಜೊತೆಗೆ ಮತ್ತಷ್ಟು ಯಶಸ್ಸು ಅವರಿಗೆ ಸಿಗಲೆಂದು ಹಾರೈಸೋಣ.
ಪುನೀತ್ ರಾಜ್‌ಕುಮಾರ್ ಮಾ.17ರಂದು ಎರಡು ಕಡೆ ಅನ್ನದಾನವನ್ನು ಏರ್ಪಡಿಸಿದ್ದಾರೆ. ಒಂದು ಮಲೆ ಮಹದೇಶ್ವರ ಬೆಟ್ಟ ಹಾಗೂ ಹುಬ್ಬಳ್ಳಿಯ ಸಿದ್ಧಾರೂಡ ಆಶ್ರಮದಲ್ಲಿ. ಎರಡು ಕಡೆ ವಿಶೇಷ ಪೂಜೆ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

Wednesday, March 12, 2008

ಕ್ರೇಜಿ ಸ್ಟಾರ್ ರವಿಚಂದ್ರನ್ "ನಾ ಟಾಟಾ ನೀ ಬಿರ್ಲಾ" ಸಿದ್ಧ

(ಕರ್ಟೆಸಿ:ದಟ್ಸ್‌ಕನ್ನಡ)
ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗಿ ಅಭಿನಯಿಸುತ್ತಿದ್ದು, ಹಾಸ್ಯಭರಿತ ಚಿತ್ರ 'ನಾ ಟಾಟಾ ನೀ ಬಿರ್ಲಾ' ಚಿತ್ರದಲ್ಲಿ ಮೋಹಕ ತಾರೆ ಜೆನ್ನಿಫರ್ ಕೋತ್ವಾಲ್ ಹಾಗೂ ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಜತೆ ಕುಣಿಯಲಿದ್ದಾರೆ.
ಕಳೆದವಾರ ಬೆಂಗಳೂರಿನಲ್ಲಿ ಬಿರ್ಲಾ ತನ್ನ ಸಂಗಾತಿಯೊಡನೆ ಕುಣಿದಿದ್ದನ್ನು ಚಿತ್ರೀಕರಿಸಿಕೊಂಡ ನಿರ್ದೇಶಕ ಮಾಗಡಿ ಪಾಂಡು ಬ್ಯಾಂಕಾಕ್‌ಗೆ ತೆರಳಿದ್ದಾರೆ. ಅಲ್ಲಿ ಟಾಟಾ ಪಾತ್ರಧಾರಿ ರವಿಚಂದ್ರನ್ ಹಾಗೂ ಬೆಡಗಿ ಜನ್ನಿಫರ್ ಕೊತ್ವಾಲ್ ಅವರ ಅಭಿನಯದಲ್ಲಿ ಹೃದಯಶಿವ ಅವರು ಬರೆದಿರುವ . 'ಮುತ್ತು ಕೊಡಲ ಮುತ್ತು ಕೊಡಲ ಮನಸಾರೆ ಕಣ್ಣಿಗೊಂದನ್ನು ಒತ್ತಿ ಬಿಡಲೆ ಒತ್ತಿ ಬಿಡಲೆ ಮನಸಾ ಈ ಕಾಲಿಂಗ್ ಬೆಲ್ಲನು' ಗೀತೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ಗೀತೆಯ ಚಿತ್ರೀಕರಣದೊಂದಿಗೆ ಮದರ್ ಇಂಡಿಯಾ ಮೂವೀಟೋನ್ ಲಾಂಛನದಲ್ಲಿ ರವಿಕುಮಾರ್ ಹಾಗೂ ಎಸ್.ಎನ್.ದೊಡ್ಡೇಗೌಡರು ನಿರ್ಮಿಸುತ್ತಿರುವ 'ನಾ ಟಾಟಾ ನೀ ಬಿರ್ಲಾ ' ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ. ಕೌಟುಂಬಿಕ ಸನ್ನಿವೇಶದೊಂದಿಗೆ ಹಾಸ್ಯದ ಹೊನಲಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಗೀತರಚನೆ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಲಕ್ಷ್ಮಣರೆಡ್ಡಿ ಸಂಕಲನ, ಕಡೂರುಶಿವು, ಜಿ.ಎಸ್.ವೇದಾಂತ್ ಸಹನಿರ್ದೇಶನ, ಇಸ್ಮಾಯಿಲ್ ಕಲೆ, ಮಲ್ಲಿಕಾರ್ಜುನ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರವಿಚಂದ್ರನ್, ಜಗ್ಗೇಶ್, ಜನ್ನಿಫರ್ ಕೊತ್ವಾಲ್, ಪೂಜಾಗಾಂಧಿ, ನಿಖಿತಾ, ಕೀರ್ತಿಚಾವ್ಲಾ, ಊರ್ವಶಿ, ಜ್ಯೋತಿರಾಣಾ, ಸಾಧುಕೋಕಿಲಾ, ದೊಡ್ಡಣ್ಣ ಮುಂತಾದವರಿದ್ದಾರೆ.

Monday, March 3, 2008

ಪ್ರಣಯರಾಜ ಶ್ರೀನಾಥ್ ರ "ಪ್ರಣಯರಾಜ" ಬಿರುದು ದಾನ...

(ಕರ್ಟೆಸೀ: ವನ್ ಇಂಡಿಯಾ)
ಫೆ.24ರ ಭಾನುವಾರ ಗೋಲ್ಡನ್ ಫಾಮ್ ರೆಸಾರ್ಟ್‌ನಲ್ಲಿ ಗಣೇಶ್-ಶಿಲ್ಪಾರ ಆರತಕ್ಷತೆ ಕಾರ್ಯಕ್ರಮಕ್ಕೆ ಇಡೀ ಕನ್ನಡ ಚಿತ್ರೋದ್ಯಮವೇ ಆಗಮಿಸಿತ್ತು. ಪ್ರಣಯರಾಜ ಶ್ರೀನಾಥ್ ದಂಪತಿಗಳು ನವ ವಧೂ-ವರನಿಗೆ ಶುಭಕೋರಲು ಆರತಕ್ಷತೆಗೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀನಾಥ್ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಮರೆಯಲಾಗದ ಉಡುಗೊರೆಯನ್ನು ಕೊಟ್ಟಿದ್ದಾರೆ. ಮೂರು ದಶಕಗಳಿಗೂ ಅಧಿಕ ಕಾಲದಿಂದ ''ಪ್ರಣಯರಾಜ'' ಎಂದು ಕರೆಸಿಕೊಳ್ಳುತ್ತಿರುವ ಶ್ರೀನಾಥ್ ಆ ಬಿರುದನ್ನು 1976ರಲ್ಲಿ ಪಡೆದುಕೊಂಡಿದ್ದರು. ಈಗ ''ಪ್ರಣಯರಾಜ'' ಕಿರೀಟವನ್ನ್ನು ಗಣೇಶ್‌ಗೆ ಕೊಡುವುದಾಗಿ ಶ್ರೀನಾಥ್ ಮತ್ತವರ ಪತ್ನಿ ಗೀತಾ ನಿರ್ಧರಿಸಿದ್ದಾರೆ. ನಾನೀಗ ಬೆಳ್ಳಿ ತೆರೆ ಯ''ಪ್ರಣಯರಾಜ''ನಾಗಿ ಉಳಿದಿಲ್ಲ. ಆದ್ದರಿಂದ ಈ ಕಿರೀಟವನ್ನು ಪ್ರಸ್ತುತ ಕನ್ನಡ ಚಿತ್ರರಂಗದ ಪ್ರಣಯರಾಜನ ಪಾತ್ರಗಳಲ್ಲಿ ಮಿಂಚುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ವರ್ಗಾಯಿಸುತ್ತಿರುವುದಾಗಿ ಶ್ರೀನಾಥ್ ಪ್ರಕಟಿಸಿದ್ದಾರೆ. ಬರುವ ಯುಗಾದಿ ಹಬ್ಬದಂದು ಬೆಂಗಳೂರಿನ ಕಾರ್ಯಕ್ರಮದಲ್ಲಿ ''ಪ್ರಣಯರಾಜ'' ಕಿರೀಟ ಗಣೇಶ್ ತೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀನಾಥ್ ತುಂಬಾ ದಿನಗಳಿಂದ ತಮ್ಮಲ್ಲೇ ಅದುಮಿಟ್ಟುಕೊಂಡ ಆಸೆಯೊಂದನ್ನು ಪ್ರಕಟಿಸಿದರು. ಗಣೇಶ್‌ ನಾಯಕ ನಟನಾಗಿ ಶ್ರೀನಾಥ್ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಶ್ರೀನಾಥ್ ಎರಡು ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ತಮ್ಮ ಗುರು,ಗೆಳೆಯ, ಮಾರ್ಗದರ್ಶಿಯಾದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುವುದಾಗಿ ಶ್ರೀನಾಥ್ ತಿಳಿಸಿದರು.
ಈ ವರ್ಷದ ಆರಂಭದಲ್ಲೆ ಚಿತ್ರವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಕಾರಣ ರಾಜಕೀಯದಲ್ಲಿ ಕಾರ್ಯಮಗ್ನರಾಗಿ ನಿರ್ದೇಶನವನ್ನು ಪಕ್ಕಕ್ಕಿಟ್ಟರು. ಆದರೆ ಚುನಾವಣೆ ನವೆಂಬರ್‌ಗೆ ಮುಂಡೂಡಲ್ಪಡುವ ಸಾಧ್ಯತೆಗಳು ಇವೆ ಎಂಬ ಮತ್ತೊಂದು ಸುದ್ದಿ ಬಂದ ಕಾರಣ ಶ್ರೀನಾಥ್ ಅವರಿಗೆ ಸ್ವಲ್ಪ ಕಾಲಾವಕಾಶ ಸಿಕ್ಕಿದೆ. ಹಾಗಾಗಿ ನಿರ್ದೇಶನಕ್ಕೆ ಮುಂದಾಗಿರುವುದಾಗಿ ಶ್ರೀನಾಥ್ ತಿಳಿಸಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರದ ಬಗ್ಗೆ ಯಾವುದೇ ವಿವರಗಳೂ ಲಭ್ಯವಿಲ್ಲ. ಶ್ರೀನಾಥ್ ಅವರ ಆಪ್ತ ಸ್ನೇಹಿತರೊಬ್ಬರು ಈ ಚಿತ್ರಕ್ಕೆ ನಿರ್ಮಾಪಕ ಎಂದಷ್ಟೇ ಗೊತ್ತಿರುವ ವಿಚಾರ. ಇನ್ನು ಮುಂದೆ ಶ್ರೀನಾಥ್ ಹೆಸರಿನ ಮುಂದೆ ''ಪ್ರಣಯರಾಜ'' ಬದಲಾಗಿ ''ನಿರ್ದೇಶಕ'' ಎಂಬ ಬಿರುದು ಅಂಟಿಕೊಳ್ಳಲಿದೆ. ಸ್ವಲ್ಪ ಕಷ್ಟವಾಗಬಹುದು ನಿರ್ದೇಶಕ ಶ್ರೀನಾಥ್ ಎಂದು ಕರೆಯಲು. ಕೆಲವರು ಆದರ್ಶ ದಂಪತಿಗಳು ಶ್ರೀನಾಥ್ ಎಂದು ಕರೆಯುವುದೂ ಉಂಟು. ಅವರ ನಿರ್ದೇಶನದಲ್ಲಿ ಉತ್ತಮ ಚಿತ್ರಗಳು ಮೂಡಿ ಬರಲಿ ಎಂದು ಹಾರೈಸೋಣ.