Monday, March 17, 2008

ಪುನೀತ್ ರಾಜ್ ಕುಮಾರ್ ಜೀವನದಲ್ಲಿ ಮತ್ತೊಂದು ವಸಂತಗೀತೆ

(ಕರ್ಟೆಸೀ: ವನ್ ಇಂಡಿಯಾ)
'ಬೆಟ್ಟದ ಹೂವು' ಚಿತ್ರದಲ್ಲಿ ''ಬಿಸಿಲೆ ಇರಲಿ, ಮಳೆಯೆ ಬರಲಿಕಾಡಲ್ಲಿ ಮೇಡಲ್ಲಿ ಅಲೆವೆ, ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ'' ಎಂಬ ಹಾಡಿಗೆ ಕುಣಿದ ಪುನೀತ್ ಇಷ್ಟು ಬೇಗ ಏರಿದ ಎತ್ತರ ನೋಡುತ್ತಿದ್ದರೆ ಆಶ್ಚರ್ಯವಾಗುತ್ತದೆ. ಈ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು ಪುನೀತ್.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಪುನೀತ್ ನಟಿಸಿದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಹಣದ ಹೊಳೆ ಹರಿಸುತ್ತಿವೆ. ಸ್ಯಾಂಡಲ್‌ವುಡ್‌ ಬಾಕ್ಸೀಫೀಸಿನ ಬಾದ್‌ಷಾ ಎನಿಸಿಕೊಂಡಿದ್ದಾರೆ. ಈಗ ಅವರ ಜೀವನದಲ್ಲಿ ಮತ್ತೊಂದು ವಸಂತನ ಆಗಮನವಾಗಿದೆ. ಮೊದಮೊದಲು ಡಾ. ರಾಜ್‌ಕುಮಾರ್ ಅವರ ಪುತ್ರ ಅನ್ನುವ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದರು. ಈ ಅರ್ಹತೆ ಒಂದೆರಡು ಚಿತ್ರಗಳಿಗಷ್ಟೇ ನೆರವಾಯಿತು. ನಂತರ ಪುನೀತ್‌ರ ಚಿತ್ರಗಳು ಗೆಲ್ಲಲು ಅವರ ಪ್ರತಿಭೆ ಒಂದೇ ಮಾನದಂಡವಾಯಿತು.
12 ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ನಟಿಸಿರುವ ಪುನೀತ್‌ಗೆ ಈಗ ಮೂವತ್ತರ ಮೇಲೆ ಮತ್ತೊಂದು. ಆದರೆ ನಟನಿಗೆ ಯಾವತ್ತು ವಯಸ್ಸು ಆಗುವುದೇ ಇಲ್ಲ ಅನ್ನುವ ಮಾತಿದೆ. ನಟರು ಸದಾ ಚಿರ ಯೌವ್ವನ್ನಿಗರು. ಇರಲಿ, ಮನೆಯವರು ಮುದ್ದಾಗಿ ಅಪ್ಪು ಎಂದು ಕರೆಯುವ ಪುನೀತ್ ಅವರದು ಪತ್ನಿ ಅಶ್ವಿನಿ ರೇವನಾಥ್ ಮಕ್ಕಳು ಧೃತಿ ಮತ್ತು ವಂದಿತಾರನ್ನು ಹೊಂದಿದ ಪುಟ್ಟ ಕುಟುಂಬ.
ಬಾಲ ಕಲಾವಿದನಾಗಿ ಪುನೀತ್ ಮೊದಲು ನಟಿಸಿದ ಚಿತ್ರ 'ವಸಂತ ಗೀತ' ನಂತರ ಭಾಗ್ಯವಂತ, ಹೊಸಬೆಳಕು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಯಾರಿವನು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್ ಚಿತ್ರಗಳಲ್ಲಿ ನಟಿಸಿ ತಮ್ಮ ವಾಮನ ಪ್ರತಿಭೆಯನ್ನು ಮೆರೆದಿದ್ದರು.
2002ರಲ್ಲಿ ತೆರೆಕಂಡ ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು 'ಚಿತ್ರ 25 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿತು. ಪುನೀತ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದ್ದು ಇಲ್ಲಿಂದಲೆ. ನಂತರ ಬಂದ 'ಅಭಿ'(125 ದಿನ), ವೀರ ಕನ್ನಡಿಗ(ಹ್ಯಾಟ್ರಿಕ್ ಹೀರೋ ಸ್ಥಾನ ತಪ್ಪಿಸಿದ ಚಿತ್ರ), ಮೌರ್ಯ(136ದಿನ), ಆಕಾಶ್(36 ವಾರ), ನಮ್ಮ ಬಸವ(125 ದಿನ), ಅಜಯ್(100ದಿನ), ಅರಸು(128ದಿನ), ಮಿಲನ(175 ದಿನ) ಎಲ್ಲವೂ ಶತದಿನೋತ್ಸವಗಳನ್ನು ಆಚರಿಸಿಕೊಂಡ ಚಿತ್ರಗಳು. 2008ರಲ್ಲಿ ತೆರೆಕಂಡ 'ಬಿಂದಾಸ್' ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. 'ವಂಶಿ' ಹಾಗೂ 'ರಾಜ್' ಚಿತ್ರಗಳು ಬರಬೇಕಾಗಿವೆ.
ಯೋಗರಾಜ್ ಭಟ್ಟರ ದೃಶ್ಯಕಾವ್ಯ 'ಮುಂಗಾರು ಮಳೆ' ಹಾಗೂ 'ಗಾಳಿಪಟ' ಚಿತ್ರಗಳಲ್ಲಿ ಪುನೀತ್ ನಟಿಸಬೇಕಾಗಿತ್ತು ಆದರೆ ಯೋಗರಾಜ್ ಭಟ್ಟರ ನಿರ್ದೇಶನದ ಮೇಲಿನ ನಂಬಿಕೆ ಸಾಲಲಿಲ್ಲವೋ ಏನೋ ನಟಿಸಲು ಪುನೀತ್ ಅಲ್ಲ ಪಾರ್ವತಮ್ಮ ಒಪ್ಪಲಿಲ್ಲ. 'ದುನಿಯಾ' ಚಿತ್ರದಲ್ಲಿ ವಿಜಯ್ ಅಭಿನಯ ನೋಡಿ ಮೆಚ್ಚಿ ಬೆನ್ನುತಟ್ಟಿದ್ದರು ಪುನೀತ್. ಕನ್ನಡದಲ್ಲೇ ಅತ್ಯಂತ ಹೆಚ್ಚು ಸಂಭಾವನೆ(ಸರಿ ಸುಮಾರು ಒಂದೂವರೆ ಕೋಟಿ ರೂ.) ಪಡೆಯುವ ನಟ ಪುನೀತ್ ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಮಯೂರ ಚಿತ್ರದ ನಿರ್ದೇಶಕರ ಹಠಾತ್ ಮರಣದ ಕಾರಣ ಆ ಚಿತ್ರ ನೆನೆಗುದಿಗೆ ಬಿತ್ತು. 'ಬಿಂದಾಸ್' ಬಿಡುಗಡೆಯಾದ ಒಂದು ವಾರದಲ್ಲೇ 3 ಕೋಟಿ ರೂ. ಗಳಿಸಿದೆ. ಇಷ್ಟೆಲ್ಲಾ ಹೆಗ್ಗಳಿಕೆಗಳ ಜೊತೆಗೆ ಮತ್ತಷ್ಟು ಯಶಸ್ಸು ಅವರಿಗೆ ಸಿಗಲೆಂದು ಹಾರೈಸೋಣ.
ಪುನೀತ್ ರಾಜ್‌ಕುಮಾರ್ ಮಾ.17ರಂದು ಎರಡು ಕಡೆ ಅನ್ನದಾನವನ್ನು ಏರ್ಪಡಿಸಿದ್ದಾರೆ. ಒಂದು ಮಲೆ ಮಹದೇಶ್ವರ ಬೆಟ್ಟ ಹಾಗೂ ಹುಬ್ಬಳ್ಳಿಯ ಸಿದ್ಧಾರೂಡ ಆಶ್ರಮದಲ್ಲಿ. ಎರಡು ಕಡೆ ವಿಶೇಷ ಪೂಜೆ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

No comments: