Tuesday, March 25, 2008

10ಎ ರೂಟ್ ಬಸ್ ಕಂಡಕ್ಟರಾಗಿ ರಜನಿ ತೆರೆಯಮೇಲೆ


(ಕ‌ರ್ಟೆಸೀ: ದ‌ಟ್ಸ್ ಕ‌ನ್ನಡ‌)
ಇತಿಹಾಸ ಮರುಕಳಿಸುತ್ತದೆ ಎನ್ನುವುದು ಇದಕ್ಕೇ ಏನೋ? ಯಾವ ವೃತ್ತಿಯಿಂದ ನೆಗೆದು ಜಾಕಿ ಚಾನ್ ಬಿಟ್ಟರೆ ಏಷ್ಯಾದಲ್ಲೇ ಅತೀ ಹೆಚ್ಚಿನ ಸಂಭಾವನೆ ಪಡೆಯುವ ನಟ ಎಂದು ಖ್ಯಾತರಾಗಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ 10ಎ ರೂಟ್ ನಂಬರ್ ಬಸ್‌ನಲ್ಲಿ ಖಾಕಿ ಬಟ್ಟೆ ಧರಿಸಲಿದ್ದಾರೆ. ಅವರೊಂದಿಗೆ ಎಪ್ಪತ್ತರ ದಶಕದಲ್ಲಿ ಬಸ್ ಸಾರಥಿಯಾಗಿದ್ದ ಜೀವದ ಗೆಳೆಯ ರಾಜ್ ಬಹಾದ್ದೂರ್ ಮತ್ತೆ ಸ್ಟೀಯರಿಂಗ್ ವೀಲ್ ಹಿಡಿಯಲಿದ್ದಾರೆ. 1970ರಲ್ಲೇ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ರೈಟ್ ರೈಟ್ ಎಂದು ಹೇಳುತ್ತ ಜನರನ್ನು ಸೆಳೆದಿದ್ದ ರಜನಿ ಮತ್ತೊಮ್ಮೆ ಅದೇ ವೃತ್ತಿಗೆ ಮರಳಲಿದ್ದಾರೆ.
ಶ್ರೀನಗರ ಯಾರ್ರೀ? ಎಷ್ಟೊಂದ್ ಜಗಾ ಇದೆಯಲ್ರೀ, ಹೋಗ್ರಿ ಒಳಗೆ, ಯಾಕ್ರೀ ಫುಟ್‌ಬೋರ್ಡ್ ಮೇಲೆ ನಿಂತ್ಕೊಂಡು ಸಾಯ್ತೀರಾ? ಹೆಣ್ಮಕ್ಕಳಿಗೆ ಜಾಗ ಬಿಟ್ಟುಕೊಡಬೇಕಂತ ಗೊತ್ತಾಗಲ್ವಾ? ಶ್ರೀನಗರ ಶ್ರೀನಗರ ಅಂತ ಕೂಗಿದ್ದು ಯಾರಾದ್ರೂ ಹತ್ಕೊಳ್ಳಿ ಅಂತ, ನೀವು ಇಳ್ಕೊಂಡೇ ಬಿಟ್ರಲ್ಲ, ಶ್ರೀನಗರ ಇನ್ನೂ ಬಂದಿಲ್ಲ ಹತ್ರೀ ಮೇಲೆ... ರಜನಿ ಬಾಯಿಂದ ಇಂಥಾ ಮಾತುಗಳು ಬರುವುದನ್ನು ಕೇಳಲು ಕಾಯುತ್ತಿರುವ 10ಎ ರೂಟ್ ಬಸ್ ಚಿತ್ರಪ್ರೇಮಿಗಳೇ ಸಂಭ್ರಮಿಸುವ ಮುನ್ನ ಮುಂದಿನದನ್ನು ಓದಿಬಿಡಿ.
10ಎ ರೂಟ್ ನಂಬರ್ ಬಸ್ ಕಂಡಕ್ಟರ್ ಆಗಿ ಮತ್ತೆ ಆವಿರ್ಭವಿಸುತ್ತಿರುವುದು ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರದಲ್ಲಿ. ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ ನಟಿಸಿದ್ದ 'ಕಥಾ ಪರಯುಂಬೋಲ್' ಚಿತ್ರದ ಅವತರಣಿಕೆಯಲ್ಲಿ ಕಂಡಕ್ಟರ್‌ಗಿರಿಯಿಂದ ಸ್ಟಾರ್‌ಗಿರಿಯವರೆಗೆ ಏರಿದ ವ್ಯಕ್ತಿಯ ಪಾತ್ರದಲ್ಲಿ ವಿಜೃಂಭಿಸಲಿದ್ದಾರೆ ರಜನಿ.
ತಮಿಳಿನಲ್ಲಿ 'ಕುಸೇಲನ್' ಆಗಿದ್ದರೆ ತೆಲುಗಿನಲ್ಲಿ 'ಕುಚೇಲುಡು' ಆಗಿ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣ ರಾಜೇಂದ್ರ ಮಾರುಕಟ್ಟೆಯಿಂದ ಶ್ರೀನಗರದವರೆಗೆ ಚಲಿಸುತ್ತಿದ್ದ ಬಸ್ಸು ಈಗ ಹೈದರಾಬಾದ್ ಸ್ಟುಡಿಯೋದಲ್ಲಿ ಚಲಿಸಲಿದೆ. ಇದರ ಶೂಟಿಂಗ್ ಬೆಂಗಳೂರಿನಲ್ಲಿ ಸಾಧ್ಯವಿಲ್ಲದಿರುವುದರಿಂದ ಹೈದರಾಬಾದ್‌ನ ಸ್ಟುಡಿಯೋದಲ್ಲಿ ರಜನಿ ಮತ್ತು ರಾಜ್ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಆಗಿ ಬಣ್ಣ ಹಚ್ಚಲಿದ್ದಾರೆ.
ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ಕಥೆಯನ್ನು ಚಿತ್ರ ಹೊಂದಿದ್ದರೂ ಇದು ಅವರ ನಿಜ ಜೀವನದ ಕಥೆ ಅಲ್ಲ. ಹಾಗೆ, ಇದನ್ನು ಸಂಪೂರ್ಣ ಅಲ್ಲಗಳೆಯಲೂ ಆಗದು. ಏಕೆಂದರೆ, ಚಿತ್ರರಂಗಕ್ಕೆ ಧುಮುಕಲು ಪ್ರೇರೇಪಿಸಿ ತನುಮನಧನವನ್ನು ಅರ್ಪಿಸಿದ್ದ ರಾಜ್ ಬಹಾದ್ದೂರ್ ಅವರು ಮಾತ್ರವಲ್ಲ ಸ್ಟಾರ್‌ಗಿರಿಗೆ ಏರಲು ಕಾರಣಕರ್ತನಾದ ನಾಪಿತನ ಪಾತ್ರ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಉಳಿದಂತೆಲ್ಲ ಮಲಯಾಳಂ ಚಿತ್ರದ ನಕಲಾಗಲಿದೆ 'ಕುಸೇಲನ್'.
ಸಂತಸದ ಸಂಗತಿಯೆಂದರೆ ರಜನಿ ಕೂಡ ತಮ್ಮ ಅಂದಿನ ದಿನಗಳನ್ನು ಮರೆತಿಲ್ಲ. ನಟನೆಯ ಏಕತಾನತೆ ಬೇಸರವೆನಿಸಿದಾಗ ರಜನಿ ಛದ್ಮವೇಷದಲ್ಲಿ ಬೆಂಗಳೂರಿಗೆ ಬಂದು ತಮ್ಮ ಸ್ನೇಹಿತರನ್ನು ಭೇಟಿಯಾಗುತ್ತಿದ್ದ ಸಂಗತಿಯೂ ಚಿತ್ರದಲ್ಲಿ ಸೇರಿಸಲಾಗಿದೆ. ಆದರೆ ಇಲ್ಲಿ ಅವರು ಛದ್ಮವೇಷ ಧರಿಸಿದರೂ ಯಾವ ಸ್ನೇಹಿತನನ್ನೂ ಭೇಟಿಯಾಗುವುದಿಲ್ಲ. ನಿರ್ದೇಶನದ ಸಾರಥ್ಯವಹಿಸಿರುವ ಪಿ.ವಾಸು ಅವರು ರಜನಿ ನಿಜ ಜೀವನದ ಕೆಲ ಸನ್ನಿವೇಶಗಳನ್ನು 'ಕುಸೇಲನ್' ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಕಂಡಕ್ಟರಾಗಿ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಆರಂಭದ ದಿನಗಳಲ್ಲಿ ರಜನಿ ಕಂಡ ಕಷ್ಟದ ದಿನಗಳು, ಅವರ ನಾಟಕದ ಹುಚ್ಚು ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿವೆ.
ಚಿತ್ರದಲ್ಲಿ ರಜನಿಯ ಪ್ರೇಯಸಿಯಾಗಿ ಅವರ ಹಿಂದಿನೆರಡು ಚಿತ್ರಗಳಾದ ಚಂದ್ರಮುಖಿ ಮತ್ತು ಶಿವಾಜಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಯನತಾರಾ ಅಭಿನಯಿಸಲಿದ್ದಾರೆ. ಚಿತ್ರೀಕರಣ ಮಾರ್ಚ್ 15ರಿಂದ ಹೈದರಾಬಾದ್‌ನ ಸ್ಟುಡಿಯೋದಲ್ಲಿ ಆರಂಭವಾಗಿದೆ. ಅಂದ ಹಾಗೆ, ತಮಿಳು ಚಿತ್ರರಂಗದಲ್ಲಿ ವಿರಾಜಿಸುತ್ತಿರುವ ಮತ್ತೊಬ್ಬ ಸೂಪರ್ ಸ್ಟಾರ್ ಕಮಲಹಾಸನ್ ಕೂಡ ಈ ಚಿತ್ರದಲ್ಲಿ ಅತಿಥಿಯಾಗಿ ನಟಿಸಲಿದ್ದಾರೆ.

No comments: