Wednesday, February 6, 2008

ಬೆಳದಿಂಗಳಾಗಿ ಬಾ:ಒಂದಿಷ್ಟು ಅಚ್ಚರಿ, ಒಂದಿಷ್ಟು ನಿರಾಶೆ


(ಕ‌ರ್ಟೆಸೀ: ವನ್ ಇಂಡಿಯಾ)
ಹೆಸರು ಕೇಳಿದರೆ ಎಷ್ಟುಚೆಂದ ಇದೆ ಅಂತ ಅನಿಸುತ್ತದೆ. ಇದೊಂದು ಪ್ರೇಮ ಕತೆ ಎನ್ನುವ ನಿರೀಕ್ಷೆ ಮೂಡಿಸುತ್ತದೆ.ಎಂ.ಎಸ್ .ರಮೇಶ್ ಮೊದಲ ಬಾರಿ ಕವಿತೆಯಂಥ ಹೆಸರು ಇಟ್ಟಿದ್ದರಿಂದ ಆ ನಿರೀಕ್ಷೆ ಇನ್ನಷ್ಟು ಹೆಚ್ಚಾಗುತ್ತದೆ. ಖಡಕ್ ಸಂಭಾಷಣೆಯಿಂದ ಕಿಕ್ ಕೊಡುವ ಇವರಿಂದ ಇನ್ನೋ ಏನೋ ಹೊಸದನ್ನು ನೋಡಬಹುದೆಂಬ ಆಸೆ ಮೂಡುತ್ತದೆ. ಆದರೆ ನೋಡ್ತಾ ನೋಡ್ತಾ ರಮೇಶ್ ಹೀಗೇಕೆ ಮಾಡಿದರೆಂದು ಅಚ್ಚರಿಯಾಗುತ್ತದೆ. ಜತೆಗಿಷ್ಟು ನಿರಾಸೆ.
ದೇವಶೆಟ್ಟಿ ಮಹೇಶ್
ಇದು ನಿಜ. ರಮೇಶ್ ನಿರ್ದೇಶಕರಾಗಿ ಮತ್ತು ಸಂಭಾಷಣಾಕಾರರಾಗಿ ಸೋತಿದ್ದಾರೆ. ತುಂಬಾ ಮಾಮೂಲಿ ಕತೆಗೆ ಅಷ್ಟೇ ನೀರಸ ನಿರೂಪಣೆ ಮಾಡಿದ್ದಾರೆ ವಿರಾಮಕ್ಕೆ ಸಿಗುವ ತಿರುವು ಬಿಟ್ಟರೆ ಕತೆ ಎಲ್ಲೂ ಕುತೂಹಲ ಮೂಡಿಸುವುದಿಲ್ಲ. ಕೊನೆಗೆ ಹೀಗೆ ಆಗುತ್ತದೆ ಎಂದು ಗೊತ್ತಾಗುವಂತಿದ್ದರೆ ಅದನ್ನು ಯಾಕೆ ನೋಡಬೇಕೆಂದು ಜನ ಕೇಳುತ್ತಾರೆ. ಅದಕ್ಕಿಂತ ಹೆಚ್ಚಾಗಿ ದೃಶ್ಯಗಳ ಜಾಳುತನ ಬೋರ್ ಹೊಡೆಸುತ್ತವೆ. ಇದು ಪ್ರೇಮ ಕತೆಯೂ ಅಲ್ಲ. ರೌಡಿಸಂ ಕತೆಯೂ ಅಲ್ಲ. ಎರಡನ್ನೂ ಮಿಕ್ಸ್ ಮಾಡಲು ಹೋಗಿ ಎರಡಕ್ಕೂ ರಮೇಶ್ ನ್ಯಾಯ ಸಲ್ಲಿಸಿಲ್ಲ.ಇನ್ನುಳಿದ ವಿವರ ಕೇಳುವ ಮುನ್ನ ಕತೆಯನ್ನು ಕೊಂಚ ಕೇಳಿ.
ನಾಯಕ ಅಜ್ಜ ಅಜ್ಜಿ ಜತೆ ಬೆಳೆದಿರುತ್ತಾನೆ. ಗೆಳೆಯನ ಮದುವೆಯಲ್ಲಿ ನಾಯಕಿ ಸಿಗುತ್ತಾಳೆ. ಆಕೆಯನ್ನು ಪ್ರೀತಿಸುತ್ತಾನೆ. ಆಕೆ ಪೊಲೀಸ್ ಅಧಿಕಾರಿ ಮಗಳು. ಇದೇ ಹೊತ್ತಿನಲ್ಲಿ ನಾಯಕ ಒಬ್ಬ ರೌಡಿಯನ್ನು ಹೊಡೆಯುತ್ತಾನೆ. ಆತ ದೊಡ್ಡ ಸ್ಮಗ್ಲರ್ ನಬಂಟ. ನನ್ನ ಹುಡುಗನನ್ನು ಹೊಡೆದ ಎಂಬ ಕಾರಣಕ್ಕೆ ಆತ ನಾಯಕನ ಬೆನ್ನು ಬೀಳುತ್ತಾನೆ. ಆಗ ಆ ನಾಯಕ ತನ್ನ ಪ್ರತಿಸ್ಪರ್ಧಿ ಗ್ಯಾಂಗ್ ರೌಡಿಯ ಮಗ ಎಂದು ಗೊತ್ತಾಗುತ್ತದೆ. ಈತ ರೌಡಿ ಮಗ ಎನ್ನುವ ಕಾರಣಕ್ಕೆ ಪೊಲೀಸ್ ಅಧಿಕಾರಿ ಕೂಡ ತನ್ನ ಮಗಳನ್ನು ಈತನಿಗೆ ಕೊಡಲು ಒಪ್ಪುವುದಿಲ್ಲ. ಆ ಪ್ರೀತಿಯನ್ನು ಮರಳಿ ಗಳಿಸಲು ನಾಯಕ ಏನೇನು ಮಾಡುತ್ತ್ತಾನೆ ಎನ್ನ್ನುವುದೇ ಉಳಿದ ಕತೆ.
ತುಂಬಾ ದೊಡ್ಡ ಕ್ಯಾನ್ವಾಸ್ ನ ಚಿತ್ರಕತೆಯನ್ನು ರಮೇಶ್ ಹೆಣೆದಿದ್ದಾರೆ. ಆರಂಭದ ಮಾದುವೆ ಮನೆಯ ತಮಾಷೆ ಖುಷಿಕೊಡುತ್ತವೆ. ವಿರಾಮದ ನಂತರ ರಂಗಾಯಣ ರಘು ಎಲ್ಲರನ್ನೂ ಹಿಂದಿಕ್ಕಿ ಕಿಕ್ ಕೊಡುತ್ತಾರೆ. ವಿಜಯ ರಾಘವೇಂದ್ರ ಎಂದಿನಂತೆ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ರಮಣೀತು ಚೌಧರಿ ಮುದ್ದಾಗಿ ಕಾಣುತ್ತಾಳೆ. ಜತೆಗೆ ಅಭಿನಯದ ಬಗ್ಗೆ ಆಸಕ್ತಿವಹಿಸುವುದು ಒಳ್ಳೆಯದು. ಚಂದ್ರಶೇಖರಕಂಬಾರರು ಸಂಕೋಚದಿಂದ ಕ್ಯಾಮರಾ ಮುಂದೆ ನಿಂತಿರುವುದು ಪ್ರತಿ ಶಾಟ್ ನಲ್ಲಿ ಕಾಣುತ್ತದೆ. ಇಲ್ಲ , ಅವರನ್ನು ನಟನಾಗಿ ಒಪ್ಪಿಕೊಳ್ಳುವುದು ಕಷ್ಟ .ಆದರೆ ಅವರಾಡುವ ಮಾತುಗಳು ಇಷ್ಟ ಇಷ್ಟ. ಶೋಭರಾಜ್, ಸಂಕೇತ್ ಕಾಶಿ, ಅವಿನಾಶ್ ಮೋಸ ಮಾಡಿಲ್ಲ. ಕಾಶಿ ಪತ್ನಿಯಾಗಿ ನಟಿಸಿದ ನಟಿ ನೆನಪಿನಲ್ಲಿ ಉಳಿಯುತ್ತಾಳೆ. ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ಕೊಡುತ್ತವೆ.ವಿರಹ ಗೀತೆ ಮನಸು ತಟ್ಟುತ್ತದೆ.
ಇದೊಂದು ಸ್ವಮೇಕ್ ಕತೆ ಎನ್ನುವುದು ಮೆಚ್ಚಬೇಕಾದ ಅಂಶ. ಆದರೆ ಅಷ್ಟಕ್ಕೇ ಇದನ್ನು ಮೆಚ್ಚಬೇಕು ಅಂದರೆ ಸೋ ಸಾರಿ.ನಾಯಕ ನಾಯಕಿ ನಡುವೆ ಪ್ರೇಮ ಆರಂಭವಾಗುವ ದೃಶ್ಯಗಳನ್ನು ತೋರಿಸದೆ ಅವರು ಪ್ರಾಣ ಕೊಡುವಷ್ಟು ಪ್ರೀತಿಸುತ್ತಾರೆ ಎಂದು ಹೇಳುವುದು ಬಾಲಿಶ. ರಘು ತಂಗಿಯ ಪ್ರೇಮ ಪ್ರಕರಣಕ್ಕೆ ಸುಖ್ಯಾಂತ ಕಾಣಿಸಲು ನಾಯಕ ಹೆಣಗಾಡುವುದರಲ್ಲಿ ಎಲ್ಲೋ ದಿಕ್ಕು ತಪ್ಪಿದಂತಾಗುತ್ತದೆ. ಅಲ್ಲಲ್ಲಿ ಮಾತುಗಳು ಖುಷಿ ಕೊಡುತ್ತವೆ. ಆದರೆ ಎಲ್ಲಾ ನೋಡಿದ ಮೇಲೆ ಅಥವಾ ನೋಡುವಾಗಲೇ ಆಕಳಿಕೆ ತರಿಸುತ್ತಾ, ಕೆಲವೊಮ್ಮೆ ನಗು ಮೂಡಿಸುತ್ತಾ ಸಾಗುತ್ತವೆ.ನಮ್ಮಲ್ಲಿ ಕತೆಗಳು ಇರುವುದು ಇಷ್ಟೇನಾ? ದೃಶ್ಯಗಳ ತಾಜಾತನಕ್ಕೆ ಯಾಕೆ ಕೆಲವರು ಹೊಸದಾಗಿ ಪ್ರಯತ್ನಿಸುತ್ತಲೇ ಇಲ್ಲ? ಎಲ್ಲರೂ ಹೊರಟ ದಾರಿಯನ್ನು ಬಿಟ್ಟು ಕೊಂಚ ಬೇರೆ ಕಡೆ ಕಣ್ಣು ಹಾಯಿಸಿದರೆ ಬೇರೆ ಏನಾದರೂ ಹೊಸದು ಸಿಗಬಹುದುದಲ್ಲವೆ? ರಮೇಶ್ ಗೆ ಸಾಧ್ಯವಿದೆ ಮತ್ತು ಇದೆಲ್ಲಾ ಗೊತ್ತೂ ಇದೆ. ಆದರೂ ಹೀಗೆ ಮಾಡಿದ್ದಾರೆ. ಮುಂದಿನ ಸಾರಿ ಏನು ಮಾಡ್ತಾರೋ ನೋಡೋಣ.

No comments: