Monday, February 4, 2008

ಮದುವೆ ನಂತರ ಎಲ್ಲಾ ನಟಿಯರ ಗತಿ ಅಷ್ಟೇ


(ಕರ್ಟೆಸೀ:ವೆಬ್ ದುನಿಯಾ)

ಒಂದು ಸಾರಿ ಕುತ್ತಿಗೆಗೆ ತಾಳಿ ಬಿದ್ದುಬಿಟ್ಟರೆ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳಿಗೆ ನೇಣು ಬಿತ್ತಿತೆಂದೇ ಲೆಕ್ಕ. ಮದುವೆಯಾದ ಮೇಲೂ ತನ್ನಲ್ಲಿ ಆಕರ್ಷಣೆ ಉಳಿದಿದೆಯೆಂದು ಮೈಕ್ ಹಿಡಿದು ಕೂಗಿಕೊಂಡರೂ ನಿರ್ಮಾಪಕರು ಕ್ಯಾರೆ ಅನ್ನುವುದಿಲ್ಲ. ನಟಿಸಲೇಬೇಕೆಂಬ ಅಭಿಲಾಷೆಯಿದ್ದವರು ಅನಿವಾರ್ಯವಾಗಿ ಅಕ್ಕ, ತಂಗಿ, ಸ್ನೇಹಿತೆ, ಅಗತ್ಯ ಬಿದ್ದರೆ ಅಮ್ಮನ ಪಾತ್ರಕ್ಕೂ ಸೈ ಎನ್ನಬೇಕು. ಲಗ್ನವಾದನಂತರ ಪೋಷಕ ಪಾತ್ರಗಳಿಗೆ ತಥಾಸ್ತು ಎಂದವರ ಪಟ್ಟಿ ದೊಡ್ಡದೇ ಇದೆ. ಸುಧಾರಾಣಿ, ಅನು ಕೃಷ್ಣಕುಮಾರ್, ಶ್ರುತಿ, ರಕ್ಷಿತಾ... ಹುಡುಕಿಕೊಂಡು ಹೊಂಟರೆ ಇನ್ನೂ ನಾಲ್ಕಾರು ನಟಿಯರು ಸಿಕ್ಕೇ ಸಿಗುತ್ತಾರೆ.
ಈ ಪಟ್ಟಿಗೆ ಹೊಸ ಸೇರ್ಪಡೆ ಓಂ ಚಿತ್ರದ ಮೂಲಕ ಅಂಬೆಗಾಲಿಟ್ಟು ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಬೆಳೆದ ನಟಿ ಪ್ರೇಮಾ. ಜೀವನ್‌ರ ಜೀವನ ಸಂಗಾತಿಯಾದ ನಂತರ ಪ್ರೇಮಾ ಮತ್ತೆ ಮುಖಕ್ಕೆ ಬಣ್ಣ ಬಳಿದಿದ್ದಾರೆ. ಆದರೆ ಇದು ಕನ್ನಡ ಚಿತ್ರದಲ್ಲಲ್ಲ. ತೆಲುಗು ಚಿತ್ರದಲ್ಲಿ. ತೆಲುಗು ಚಿತ್ರ ಕೃಷ್ಣಾರ್ಜನದಲ್ಲಿ ಪ್ರೇಮಾ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹಾಗೆ ನೋಡಿದರೆ ಇಂದು (ಫೆ.1) ಬಿಡುಗಡೆಯಾಗಿರುವ ನವಶಕ್ತಿ ಮಹಾತ್ಮೆ ಚಿತ್ರದಲ್ಲೂ ಪ್ರೇಮಾ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಆದರೆ, ಈ ಚಿತ್ರ ಸೆಟ್ಟೇರಿದ್ದು ಅವರ ಮದುವೆಯ ಮೊದಲು, ಬಿಡುಗಡೆಯಾಗಿದ್ದು ಮದುವೆಯಾಗಿ ವರುಷಗಳ ನಂತರ. ಕನ್ನಡ ಚಿತ್ರದಲ್ಲಿಯೂ ಪ್ರಯತ್ನ ಮಾಡಿದರೆ ಅಕ್ಕ, ಅತ್ತಿಗೆ, ನಾದಿನಿ, ಅಮ್ಮನ ಪಾತ್ರಗಳು ಸಿಗುವುದು ಕಷ್ಟವೇನೂ ಅಲ್ಲ. ಆದರೇಕೋ ಪ್ರೇಮಾ ತೆಲುಗು ಚಿತ್ರದತ್ತ ಒಲವು ತೋರಿಸಿದ್ದಾರೆ.
ಮದುವೆಯಾದ ನಂತರ ಸಿನೆಮಾಗಳಲ್ಲಿ ಕ್ಲಿಕ್ಕಾದ ಉದಾಹರಣೆಗಳೂ ಸಾಕಷ್ಟಿವೆ. ಮೋಹಕ ತಾರೆ ಲಕ್ಷ್ಮಿ ನಟನೆಯಲ್ಲಿ ಉತ್ತುಂಗ ತಲುಪಿದ್ದು ಮದುವೆಯಾದ ನಂತರವೇ. ಅಪರೂಪದ ಸತ್ವಯುತ ಪಾತ್ರಗಳು, ಅತ್ಯುತ್ತಮ ಕಥೆ, ಜೀವತುಂಬುವ ಹಾಡುಗಳು ಲಕ್ಷ್ಮಿ ಉಚ್ಛ್ರಾಯ ಸ್ಥಿತಿ ತಲುಪಲು ಸಹಾಯ ಮಾಡಿದ್ದವು. ಈಗ ಮಹಿಳಾ ಪ್ರಧಾನ ಚಿತ್ರಗಳು ದುರ್ಬೀನು ಹಾಕಿಕೊಂಡು ಹುಡುಕಿದರೂ ಸಿಗುವುದಿಲ್ಲ. ಬಹುದಿನಗಳ ನಂತರ ಮತ್ತೆ ಮುಖಕ್ಕೆ ಬಣ್ಣ ಹಚ್ಚಿರುವ ಅಳುಮುಂಜಿ ತಾರೆ ಶ್ರುತಿಗೆ ಕವಿತಾ ಲಂಕೇಶ್ ನಿರ್ದೇಶನದ 'ಅವ್ವ' ಚಿತ್ರದಲ್ಲಿ ಪ್ರಮುಖ ಪಾತ್ರ ದೊರೆತಿದೆ. ಸುಧಾರಾಣಿ, ಅನು ಕೃಷ್ಣಕುಮಾರ್ ಮೊದಲಾದವರು ಈಗಾಗಲೇ ತೆರೆಯ ಮರೆಗೆ ಸೇರಿದ್ದಾರೆ.
ತೆಲುಗಿನತ್ತ ಮುಖ ಮಾಡಿರುವ ಪ್ರೇಮಾ ಕನ್ನಡದತ್ತಲೂ ಗಮನ ಹರಿಸಲಿ. ಪಾತ್ರ ಮುಖ್ಯವಲ್ಲ ಅದರಲ್ಲಿರುವ ಸತ್ವ ಮುಖ್ಯ, ಬದಲಾದ ಸನ್ನಿವೇಶಗಳಿಗೆ ತಾವೂ ಬದಲಾಗಬೇಕೆಂಬ ಸತ್ಯವನ್ನು ಪ್ರೇಮಾ ಅರಿತುಕೊಳ್ಳಲಿ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ. ಅಭಿನಯದ ತಾಕತ್ತಿದ್ದರೆ ಎಂಥ ಪಾತ್ರಗಳಲ್ಲಿಯೂ ಮಿನುಗಬಹುದು ಎಂಬುದಕ್ಕೆ ತಾರಾನೇ ಉಳಿದ ನಟಿಯರಿಗೆ ಉದಾಹರಣೆಯಾಗಲಿ.

No comments: