
ಮಲ್ಟಿಪ್ಲೆಕ್ಸ್ ಜಮಾನಾ ಬಂದ ಮೇಲೆ ಈವರೆಗೆ ಪಿವಿಆರ್‌ನಲ್ಲಿ ಯಾವ ಚಿತ್ರವೂ ಒಂದು ವರ್ಷ ಸತತವಾಗಿ ಪ್ರದರ್ಶಿತವಾಗಿರಲಿಲ್ಲ. ಆದರೆ ಮುಂಗಾರುಮಳೆಗೆ ಆ ಯೋಗ ಒದಗಿಬಂತು. ಅದಕ್ಕೆ ಕನ್ನಡ ಚಿತ್ರರಂಗಕ್ಕೆ ತಾರುಣ್ಯ ತುಂಬಿದ ನಿರ್ದೇಶಕ ಯೋಗರಾಜ್ ಭಟ್ ಕಾರಣ. ಈಗ ಅವರ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಗಾಳಿಪಟವೂ ಸಹಾ ಖಂಡಿತ ಹಾರುತ್ತದೆ ಎಂಬುದು ಅವರ ಆತ್ಮವಿಶ್ವಾಸ. ಈ ಚಿತ್ರ ಪ್ರೇಕ್ಷಕರಿಗೆ ಇದುವರೆಗೂ ಕಂಡರಿಯದ ಹೊಚ್ಚ ಹೊಸ ಅನುಭವ ನೀಡಲಿದೆ ಎಂಬುದು ಅವರ ವಿಶ್ವಾಸ. ಯಾವಾಗ ಒಬ್ಬ ಗಾಯಕ ಹಾಡಿನಲ್ಲಿ ಲೀನವಾಗಿ ಸಂಗೀತವನ್ನು ಆಸ್ವಾದಿಸಿಕೊಂಡು ಹಾಡುತ್ತಾನೋ ಆ ಹಾಡು ಕೇಳಲು ಇಂಪಾಗಿರುತ್ತದೆ. ಅದೇ ರೀತಿ ಗಾಳಿಪಟ ಚಿತ್ರ ನಿರ್ಮಾಣದ ವೇಳೆ ಖುಷಿ ಇತ್ತು. ಹಾಗಾಗಿ ಈ ಚಿತ್ರವೂ ಚೆನ್ನಾಗಿರುತ್ತದೆ ಎಂಬುದು ಅವರ ಲಾಜಿಕ್. ಪ್ರಕೃತಿ ಸಿರಿಯನ್ನು ಪ್ರೇಕ್ಷಕರಿಗೆ ಹಂಚಲು ಅವರ ಪಟ್ಟ ಶ್ರಮದಲ್ಲಿ ಅವರ ಖುಷಿಯಿತ್ತು. ಚಿತ್ರದ ಬಗ್ಗೆ ಹೇಳಬೇಕಾದರೆ ನೋಡಬೇಕಾದ್ರೆ ಖುಷಿ ಆಗ್ಬೇಕು. ಚಿತ್ರಗಳ ಮೂಲಕ ಸಂದೇಶನೀಡುವುದು ತಮ್ಮ ಉದ್ದೇಶ ಎಂದು ಭಟ್ ತಿಳಿಸಿದ್ದಾರೆ. ಮೈಸೂರು, ಮೇಲುಕೋಟೆ, ಮಡಿಕೇರಿ, ಸಕಲೇಶಪುರ ಮುಂತಾದ ಜಾಗಗಳಲ್ಲಿ 65 ದಿನಗಳ ಚಿತ್ರಣ ಮುಗಿಸಿದ ತಂಡ 2 ಹಾಡುಗಳನ್ನು ಸದ್ಯದಲ್ಲೇ ಮುಗಿಸಲಿದೆ.
No comments:
Post a Comment