Tuesday, January 22, 2008

ಗಾಳಿಪಟ: ಅಭಿನಯ, ಡೈಲಾಗ್‌ನಲ್ಲಿ ಗಣೇಶ


(ಕ‌ರ್ಟೆಸೀ: ವೆಬ್ ದುನಿಯಾ)


ನಿರ್ದೇಶಕ ಯೋಗರಾಜ ಭಟ್ಟರ ಬಹುನಿರೀಕ್ಷಿತ ಗಾಳಿಪಟ ಚಿತ್ರ ಬಿಡುಗಡೆಯಾಗಿದೆ. ಅವರ ಮುಂಗಾರು ಮಳೆ ಚಿತ್ರ ನೋಡಿದ ಪ್ರೇಕ್ಷಕನಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲ, ಆದರೆ ಗಾಳಿಪಟದ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಕಾರಣವೆಂದರೆ, ಮುಂಗಾರುಮಳೆಯ ಮೊದಲು ಮಣಿ ಮತ್ತು ರಂಗ ಎಸ್ಸೆಸ್ಸೆಲ್ಸಿ ಚಿತ್ರಗಳು ಸೋತಿದ್ದವು. ಈಗ ಮುಂಗಾರುಮಳೆ ಎಂಬ ಗೆದ್ದ ಚಿತ್ರದ ನಂತರ ಅವರು ಮತ್ತೊಂದು ಚಿತ್ರ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆ ಸಹಜ.
ಗಾಳಿಪಟ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ಮುಂಗಾರುಮಳೆಯ ಗುಂಗಿನಲ್ಲೇ ಬರುತ್ತಾನೆ. ಅದೇ ಬೇರೆ, ಇದೇ ಬೇರೆ ಎಂದು ಯೋಗರಾಜ ಭಟ್ಟರು ಎಷ್ಟೇ ಹೇಳಿದರೂ ಈ ಹ್ಯಾಂಗೋವರ್ ತಪ್ಪಿದ್ದಲ್ಲ ಎಂಬುದು ಸತ್ಯ. ಅದಕ್ಕೆ ಪುಷ್ಟಿ ನೀಡುವಂತೆ ಮಳೆ, ಗಾಳಿ, ಹಸಿರು, ಅದೇ ಶೈಲಿಯ ಡೈಲಾಗ್‌ಗಳು ಗಾಳಿಪಟದಲ್ಲೂ ಕಾಣಿಸಿಕೊಂಡಿದೆ. ಈ ದೃಷ್ಟಿಯಿಂದ ನೋಡುವುದಾದರೆ ಯೋಗರಾಜ ಭಟ್ಟರಿಗೇ ಇನ್ನೂ ಮುಂಗಾರು ಮಳೆಯ ಹ್ಯಾಂಗೋವರ್ ಹೋಗಿಲ್ಲ ಎನ್ನಬೇಕು!!
ಇದನ್ನೆಲ್ಲಾ ಪಕ್ಕಕ್ಕಿಟ್ಟು ನೋಡುವುದಾದರೆ ಗಾಳಿಪಟ ಒಂದು ಸುಂದರ ಚಿತ್ರ. ಮುಂಗಾರು ಮಳೆಗಿಂತ ಚೆನ್ನಾಗಿದ್ಯಾ? ಅಂತ ನೀವು ಕೇಳ್ಬಾರ್ದು ಅಷ್ಟೇ. ಚಿತ್ರದ ಪಾತ್ರಧಾರಿಗಳನ್ನು, ಛಾಯಾಗ್ರಾಹಕನನ್ನು, ತಂತ್ರಜ್ಞರನ್ನು ಹೀಗೂ ಬಳಸಿಕೊಳ್ಳಬಹುದಾ ಎಂಬ ಪ್ರಶ್ನೆಗೆ ಗಾಳಿಪಟ ಉತ್ತರ ನೀಡುತ್ತದೆ ಎಂದು ಧೈರ್ಯವಾಗಿ ಹೇಳಬಹುದು. ಆದರೆ ತಮ್ಮ ಕಥೆಯನ್ನು ಹೇಳುವಲ್ಲಿ ಅವರು ಗಣೇಶ್‌ಗಷ್ಟೇ ಹೆಚ್ಚಿನ ಒತ್ತು ನೀಡಿರುವುದು ಅವರ ಅನಿವಾರ್ಯತೆಯೋ, ಉದ್ಯಮದ ಅಗತ್ಯತೆಯೋ ಅಥವಾ ಪ್ರೇಕ್ಷಕನ ನಿರೀಕ್ಷೆಯೋ ಎಂಬುದನ್ನು ಸ್ವತಃ ಯೋಗರಾಜ ಭಟ್ಟರಷ್ಟೇ ಹೇಳಬಲ್ಲರು.
ಗಣೇಶೋತ್ಸವ ಮತ್ತೆ ಮುಂದುವರಿಯುವ ಸೂಚನೆ ಗಾಳಿಪಟದಲ್ಲಿ ಸ್ಪಷ್ಟವಾಗಿ ಸಿಕ್ಕಿದೆ. ಈ ಹಿಂದಿನ ಅವರ ಚಿತ್ರಗಳೆಲ್ಲವೂ ಸೂಪರ್ ಹಿಟ್. ಒಂದು ಅವಧಿಯಲ್ಲಂತೂ ಬೆಂಗಳೂರಿನ ಸಾಗರ್ ಚಿತ್ರಮಂದಿರದಲ್ಲಿ ಅವರ ಮುಂಗಾರು ಮಳೆ ಪ್ರದರ್ಶಿತವಾಗುತ್ತಿದ್ದರೆ, ಇತ್ತ ಅಪರ್ಣಾದಲ್ಲಿ ಹುಡುಗಾಟ, ಅತ್ತ ಕಪಾಲಿಯಲ್ಲಿ ಚೆಲುವಿನ ಚಿತ್ತಾರ ಚಿತ್ರಗಳು ಕಿಕ್ಕಿರಿದ ಜನಸಂದಣಿಯಲ್ಲಿ ಪ್ರದರ್ಶನ ಕಾಣುತ್ತಿದ್ದವು. ಒಂದು ರೀತಿಯಲ್ಲಿ ಅದು ಗಣೇಶೋತ್ಸವವೇ ಆಗಿತ್ತು. ಗಾಳಿಪಟ ಚಿತ್ರದಲ್ಲಿ ಗಣೇಶ್ ಅಭಿನಯ, ಡೈಲಾಗ್ ಡೆಲಿವರಿ, ಚುರುಕುತನ, ಪಾತ್ರದ ರೂಪುರೇಷೆಗಳನ್ನೆಲ್ಲಾ ಗಮನಿಸಿದರೆ ಹಾಗೂ ಪ್ರೇಕ್ಷಕ ಪ್ರಭುಗಳಿಂದ ಅದಕ್ಕೆ ಸಿಗುತ್ತಿರುವ ಪ್ರೋತ್ಸಾಹವನ್ನು ಗಮನಿಸಿದರೆ ಗಣೇಶೋತ್ಸವ ಮುಂದುವರಿಯುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.
ಚಿತ್ರದ ಕಥೆ ಮತ್ತು ಚಿತ್ರಕಥೆ ತುಂಬಾ ಸಿಂಪಲ್. ಬೆಂಗಳೂರಿನ ಏಕತಾನತೆಯಿಂದ ಬೋರಾಗಿ ಮೂವರು ಶ್ರೀಮಂತ ಗೆಳೆಯರು ಮುಗಿಲುಪೇಟೆ ಎಂಬ ಊರಿಗೆ ಆಗಮಿಸುತ್ತಾರೆ. ಅಲ್ಲಿನ ತಾತನ ಮನೆಯಲ್ಲಿರುವ ಮೂವರು ಹೆಣ್ಣುಮಕ್ಕಳ ಮನ ಗೆಲ್ಲಲು ಯತ್ನಿಸುವುದು, ಅದರಲ್ಲಿ ವೈಫಲ್ಯ-ಸಾಫಲ್ಯ ಮೊದಲಾದ ಸರ್ಕಸ್‌ಗಳು ಚಿತ್ರದ ಹೂರಣ. ಇದಕ್ಕೆ ಹಾಸ್ಯ-ಪಂಚಿಂಗ್ ಡೈಲಾಗ್-ರಮ್ಯ ಹೊರಾಂಗಣ-ಹಾಡುಗಳ ರೆಕ್ಕೆಪುಕ್ಕವನ್ನು ಕಟ್ಟಿರುವುದು ಯೋಗರಾಜ ಭಟ್ಟರ ವೈಶಿಷ್ಟ್ಯ. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಇದರಲ್ಲಿ ಅವರಿಗೆ ಸಾಥ್ ನೀಡಿರುವುದು ಕ್ಯಾಮೆರಾಮನ್ ರತ್ನವೇಲು ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ.
ಅಭಿನಯದ ವಿಷಯಕ್ಕೆ ಬರುವುದಾದರೆ, ಗಣೇಶ್ ಈಸ್ ಸಿಂಪ್ಲೀ ಗ್ರೇಟ್. 'ಆತನೊಬ್ಬ ಅಭಿನಯ ರಕ್ಕಸ' ಎಂದು ಪ್ರೀತಿಪೂರ್ವಕವಾಗಿ ಬಯ್ಯುವಷ್ಟು ಚುರುಕಾಗಿ ಗಣೇಶ್ ಅಭಿನಯಿಸಿದ್ದಾರೆ. ಅಪ್ಪಟ ತಿಂಡಿಪೋತ, ಮಾತಿನಮಲ್ಲನಾಗಿ ಅಭಿನಯಿಸಿರುವ ಗಣೇಶ್‌ಗೆ ಇಂಥಾ ಪಾತ್ರಗಳು ವೃತ್ತಿ ಜೀವನಕ್ಕೆ ಒಳ್ಳೆಯ ಬುನಾದಿಯನ್ನು ಕೊಡಬಲ್ಲವು. ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ಪಾತ್ರಗಳ ಪಾತ್ರ ಪೋಷಣೆ ಇನ್ನೊಂದಿಷ್ಟು ಆಗಬೇಕಿತ್ತು ಎಂದು ಅಲ್ಲಲ್ಲಿ ಅನಿಸುತ್ತದೆಯಾದರೂ ಅದೇನೂ ಕೊರತೆಯಲ್ಲ.
ಮತ್ತಿನ್ನೇನು ಹೇಳುವುದು? ಒಮ್ಮೆ ಚಿತ್ರಮಂದಿರಕ್ಕೆ ಹೋಗಿ 'ಗಾಳಿಪಟ' ಹಾರಿಸಿಬನ್ನಿ ಎಂದು ಹೇಳಬಹುದು, ಅಷ್ಟೇ!

No comments: