(ಕರ್ಟೆಸೀ: ವೆಬ್ ದುನಿಯಾ)
ಪುನೀತ್ ಅಭಿನಯದ ಬಿಂದಾಸ್ ಚಲನಚಿತ್ರ ಹಲವು ನೀರೀಕ್ಷೆಗಳನ್ನು ಹುಟ್ಟುಹಾಕಿದೆ. ಹಲವು ಅಪರೂಪದ ಪ್ರತಿಭೆಗಳು ಈ ಚಿತ್ರದಲ್ಲಿ ಮೇಳೈಸಿರುವುದೇ ಇದಕ್ಕೆ ಕಾರಣ. ಮಿನಿಮಮ್ ಗ್ಯಾರಂಟಿ ನಿರ್ದೇಶಕರೆಂದೇ ಹೆಸರಾದ ಡಿ.ರಾಜೇಂದ್ರಬಾಬು ನಿರ್ದೇಶನದಲ್ಲಿ ಪುನೀತ್ ಪ್ರಥಮ ಬಾರಿಗೆ ಅಭಿನಯಿಸುತ್ತಿದ್ದು ಇವರಿಗೆ ನಾಯಕಿಯಾಗಿರುವಾಕೆ ಬಾಲಿವುಡ್ ಚೆಲುವೆ ಹನ್ಸಿಕಾ. ಹನ್ಸಿಕಾ ಎಂದರೆ ಪ್ರಾಯಶಃ ಕೆಲವರಿಗೆ ಗೊತ್ತಾಗುತ್ತದೋ ಇಲ್ಲವೋ; ಅದರೆ ಅರುಣಾ ಇರಾನಿ ನಿರ್ದೇಶನದ ದೇಸ್ ಮೇ ನಿಕಲಾ ಹೋಗಾ ಚಾಂದ್ ಎಂದರೆ ಈ ಪ್ರತಿಭೆಯ ನೆನಪಾಗುತ್ತದೆ. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಬಾಲನಟಿಯಾಗಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವರು ಹನ್ಸಿಕಾ. ಎಳೆಗರುಂ ಎತ್ತಾಗದೇ ಲೋಕದೊಳ್..? ಎಂದು ಕವಿ ಸೋಮೇಶ್ವರ ಪ್ರಶ್ನಿಸಿರುವಂತೆ ಅಂದು ಬಾಲನಟಿಯಾಗಿದ್ದವಳು ಇಂದು ತನ್ನ ಪಾತ್ರಕ್ಕೆ 36 ಲಕ್ಷ ರೂ.ಗಳನ್ನು ಡಿಮ್ಯಾಂಡ್ ಮಾಡುವ ಮಟ್ಟಿಗೆ ಬೆಳೆದಿದ್ದಾಳೆ ಎಂದರೆ ಅದು ಹೆಮ್ಮೆ ಪಡುವ ವಿಷಯವೇ. ಇನ್ನು ಪುನೀತ್ ವಿಷಯಕ್ಕೆ ಬರುವುದಾದರೆ ಈ ಚಿತ್ರದ ಕುರಿತಾದ ಅವರ ಬದ್ಧತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಏಕೆಂದರೆ ಈ ನಡುವೆ ಅವರಿಗೆ ಯೋಗರಾಜ ಭಟ್ಟರಿಂದ ಗಾಳಿಪಟ ಚಿತ್ರಕ್ಕೆ ಆಫರ್ ಬಂದಿತ್ತು. ಅದರೆ ಬಿಂದಾಸ್ ಬಿಡುಗಡೆಗೆ ಕ್ಲಾಶ್ ಆಗುತ್ತದೆ ಎಂಬ ಒಂದೇ ಕಾರಣದಿಂದ ಗಾಳಿಪಟ ಹಾರಿಸಲು ಪುನೀತ್ ಒಪ್ಪಲಿಲ್ಲ ಎಂಬುದು ಈಗಾಗಲೇ ಪ್ರಚಲಿತದಲ್ಲಿರುವ ಸುದ್ದಿ. ಜೊತೆಗೆ ಪುನೀತ್ ಚಿತ್ರಗಳು ಅವುಗಳ ನಿರೂಪಣೆಯಿಂದ, ಅಭಿನಯದಿಂದ ಹಾಗೂ ಹಾಡುಗಳಿಂದ ಎಲ್ಲರ, ಅದರಲ್ಲೂ ಹೆಂಗೆಳೆಯರ ಮನಸೂರೆಗೊಳ್ಳುತ್ತಿವೆ. ಇತ್ತೀಚಿನ ಅವರ ಅರಸು, ಮಿಲನ ಚಿತ್ರಗಳ ಯಶಸ್ಸು ಎಲ್ಲರ ಕಣ್ಣೆದುರಲ್ಲೇ ಇರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಬಿಂದಾಸ್ ಯಶಸ್ವಿಯಾಗಲಿ ಎಂಬುದು ಎಲ್ಲರ ಹಾರೈಕೆ.
No comments:
Post a Comment