Saturday, January 12, 2008

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್

(ಕ‌ರ್ಟೆಸೀ: ವ‌ನ್ ಇಂಡಿಯಾ)

ಹಲವಾರು ಚಿತ್ರಗಳು ಬಿಡುಗಡೆಯಾದ ಮೇಲೂ ಪುನೀತ್ ಅಭಿನಯದ 'ಮಿಲನ' ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಎಲ್ಲದಕ್ಕಿಂತಲೂ ಮುಂದಿದೆ. ಈಗಾಗಲೇ ಸಿಲ್ವರ್ ಜ್ಯೂಬಿಲಿ ಆಚರಿಸುತ್ತಿರುವ 'ಮಿಲನ' ಚಿತ್ರ ಶತದಿನೋತ್ಸವದ ನಂತರ, ಕೆಲ ದಿನ ಚಿತ್ರಮಂದಿರಗಳ ಗೊಂದಲದಿಂದ ಪ್ರದರ್ಶನದಲ್ಲಿ ವ್ಯತ್ಯಯವುಂಟಾಗಿತ್ತು. ಮೆಜೆಸ್ಟಿಕ್ ಚಿತ್ರಮಂದಿರ ಲಾಕೌಟಾದನಂತರ ಮೇನಕಾಗೆ ಹಾಕಿದ ಮೇಲೂ ಚಿತ್ರಕ್ಕೆ ಜನಸಾಗರ ಹರಿದು ಬರುತ್ತಲೇ ಇದೆ. ಕೌಟುಂಬಿಕ ಹಿನ್ನೆಲೆಯ ಚಿತ್ರ, ಪುನೀತ್ ಹಾಗೂ ಪಾರ್ವತಿ ಅಭಿನಯ, ಮನೋಮೂರ್ತಿ ಸಂಗೀತ, ಕಾಯ್ಕಿಣಿ ಸಾಹಿತ್ಯದ ಜೊತೆಗೆ ಪ್ರಕಾಶ್ ಅವರ ನಿರ್ದೇಶನ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಎರಡನೇ ಸ್ಥಾನದಲ್ಲಿ ವಿಷ್ಣುವರ್ಧನ್ ಹಾಗೂ ಜಯಪ್ರದಾ ಅಭಿನಯದ ಹಿಂದಿ 'ಬಾಗಬನ್' ಚಿತ್ರದ ರಿಮೇಕ್ 'ಈ ಬಂಧನ' ಚಿತ್ರ ಹೆಂಗಳೆಯರ ಮನೆ ಸೂರೆಮಾಡುವಲ್ಲಿ ಯಶಸ್ವಿಯಾಗಿದೆ. ಪ್ರಥಮಬಾರಿಗೆ ನಿರ್ದೇಶನಕ್ಕೆ ಇಳಿದಿರುವ ವಿಜಯಲಕ್ಷ್ಮಿ ಸಿಂಗ್ ಅವರ ನಿರ್ದೇಶನದಲ್ಲಿ ಹಲವು ಹುಳುಕುಗಳಿದ್ದರೂ, ಜನ ನಿಧಾನವಾಗಿ ಮೆಚ್ಚುಗೆ ಸೂಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲೇ ದಾಖಲೆ ಪ್ರಮಾಣದ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ, ಬಹು ನಿರೀಕ್ಷಿತ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ' ಹಣಗಳಿಕೆಯಲ್ಲಿ ಭಾರಿ ಹಿನ್ನೆಡೆ ಕಂಡಿದೆ. ಟಿವಿ ಮಾಧ್ಯಮಗಳ ಪ್ರಚಾರ, ಸುಳ್ಳು ವಿವಾದ ಸೃಷ್ಟಿಸಿದ ಅಪಪ್ರಚಾರದ ಹೊರತಾಗಿಯೂ ಪ್ರೇಮ್ ಲೆಕ್ಕಾಚಾರ ತಲೆಕೆಳಗಾಗಿದೆ. ಅಭಿಮಾನಿಗಳ ಬಲದಿಂದ ಮೊದಲ ವಾರ ಉತ್ತಮ ಗಳಿಕೆ ಕಂಡಿದ್ದ 'ಪ್ರೀಏಭೂಮೇ' ನಂತರದ ವಾರದಲ್ಲಿ ಕುಸಿದು ಪ್ರೇಮ್ ನಿರೀಕ್ಷೆ ಹುಸಿಮಾಡಿದೆ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ಅವರ 'ಕೃಷ್ಣ' ಚಿತ್ರ ಶತದಿನೋತ್ಸವದ ನಂತರವೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಗಣೇಶ್ ಅಭಿನಯ, ಪೂಜಾ ಗಾಂಧಿ ಕುಣಿತ ಜನಮೆಚ್ಚುಗೆಗೆ ಪಾತ್ರವಾಗಿದೆ. ಹಣಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ನಡುವಿನ ವಾಗ್ವಾದದ ಲಾಭ ಪಡೆದ 'ಚಂಡ' ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ವಿವಾದದಿಂದ ಬಿಗುಮುಖಿಯಾಗಿದ್ದ ನಾರಾಯಣ್ ಮೊಗದಲ್ಲಿ ಮತ್ತೆ ಅವರ ಟ್ರೇಡ್ ಮಾರ್ಕ್ ನಗು ಪ್ರತ್ಯಕ್ಷವಾಗಿದೆ. ಈ ಚಿತ್ರ ಕೊನೆಗೂ ಯಶಸ್ಸಿನ ಹಾದಿ ಹಿಡಿದಿದೆ. ಚಿತ್ರ ವಿತರಕರಿಗೂ ಸಾಕಷ್ಟು ಹಣ ಗಳಿಸಿಕೊಟ್ಟಿದೆ.

No comments: