Wednesday, April 30, 2008

ನಕಲಿ ಮುದ್ರಾಂಕದ ಬ್ರಹ್ಮ ತೆಲಗಿಗೆ ಕೋಪವೇಕೆ?

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಕರ್ನಾಟಕಕ್ಕೆ ಅಪಕೀರ್ತಿ ತಂದ ಮಹನೀಯರಲ್ಲಿ ಅಬ್ದುಲ್ ಕರೀಂ ತೆಲಗಿ ಒಬ್ಬನು. ಐದುನೂರು , ಸಾವಿರ ರೂಪಾಯಿಯ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಡುವ ಜಾಲದಲ್ಲಿ ವ್ಯಾಪಾರ ಅಷ್ಟೇನೂ ಲಾಭದಾಯಕವಾಗಿಲ್ಲ ಎಂದು ಪರಿಗಣಿಸಿ ಭಾರತದಲ್ಲಿ ನಕಲಿ ಸ್ಟಾಂಪ್ ಪೇಪರುಗಳ ಬೃಹತ್ ಉದ್ಯಮವನ್ನು ಸ್ಥಾಪಿಸಿದ ಹೆಗ್ಗಳಿಕೆ ಪಾತ್ರನಾದವನು! ಆತ ಸೃಷ್ಟಿಸಿದ ನಕಲಿ ಮುದ್ರಾಂಕದ ನೆರವಿನಿಂದ ಸ್ಥಿರಾಸ್ತಿ ಮಾರಾಟ ಮತ್ತು ದಾಖಲೆ ಪತ್ರ ಸೃಷ್ಟಿಗೆ ಈ ದೇಶದಲ್ಲಿ ಒಂದು ಹೊಸ ಆಯಾಮ ಬಂದದ್ದು ನಿಮಗೆ ಗೊತ್ತುಂಟು.ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ ಎಂಬ ಮಾತು ತೆಲಗಿ ವಿಚಾರದಲ್ಲಂತೂ ನಿಜವಾಯಿತು. ಆತ ಮತ್ತು ಆತನ ಸಹಚರರು ಸೃಷ್ಟಿಸಿದ್ದ ನಕಲಿ ಛಾಪಾಕಾಗದ ಮಹಾಜಾಲವನ್ನು ಬೇಧಿಸಿದ ಈ ದೇಶದ ಪೊಲೀಸರು ಅವನನ್ನು ದಸ್ತಗಿರಿ ಮಾಡಿ ಕೇಸುಗಳ ಮೇಲೆ ಕೇಸು ಕೇಸುಗಳ ಮೇಲೆ ಕೇಸು ಜಡಿದು ಅವನನ್ನು ಸೆರೆಮನೆಗೆ ತಳ್ಳಿದ ಸುದ್ದಿಗಳನ್ನು ನೀವೆಲ್ಲ ಓದಿಯೇ ಇರುತ್ತೀರಿ. ತೆಲಗಿಯ ವಂಚನೆ ಪ್ರಕರಣವನ್ನು ವಿಚಾರಣೆಗೆ ಒಡ್ಡಿರುವ ನ್ಯಾಯಾಲಯ ಆತನಿಗೆ ಯಾವ ಯಾವ ತಪ್ಪಿಗೆ ಎಷ್ಟೆಷ್ಟು ವರ್ಷ ಸಾಧಾರಣ, ಅಸಾಧಾರಣ, ಕಠಿಣ ಶಿಕ್ಷೆ ವಿಧಿಸಿದೆ ಎಂಬ ಲೆಕ್ಕ ನ್ಯಾಯಲಯಕ್ಕೆ ಮಾತ್ರ ಗೊತ್ತಿದೆ. ನ್ಯಾಯಾಲಯ ಅಪ್ಪಣೆ ಮಾಡಿರುವ ಒಟ್ಟು ಶಿಕ್ಷೆಯನ್ನು ತೆಲಗಿ ಪೂರೈಸಬೇಕಾದರೆ ಕನಿಷ್ಠಪಕ್ಷ ಅವ ಹತ್ತು ಜನ್ಮವನ್ನಾದರೂ ಎತ್ತಿಬರಬೇಕು.ತೆಲಗಿಯ ಜತೆ ಶಾಮೀಲಾಗಿದ್ದರೆಂದು ಆಪಾದಿಸಲಾಗಿದ್ದ ಕರ್ನಾಟಕದ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಾನೂನಿನ ಕಣ್ಣಿನಿಂದ ಪಾರಾದರೇನೋ ನಿಜ. ಆದರೆ, ನಕಲಿ ಮುದ್ರಾಂಕದ ಬ್ರಹ್ಮ ತೆಲಗಿಗೆ ಮಾತ್ರ ಜೈಲಿನಲ್ಲಿ ಚಕ್ಕಿ ಪೀಸುವ ಯೋಗ ತಪ್ಪಲಿಲ್ಲ. ತೆಲಗಿ ಈಗ ಪುಣೆಯ ಯರವಾಡ ಸೆರೆಮನೆಯಲ್ಲಿ ಬಂಧಿಯಾಗಿದ್ದು ಅಲ್ಲಿಂದಲೇ ತನ್ನ ವಕೀಲರ ಮುಖಾಂತರ ತನ್ನ ವಿರುದ್ಧದ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಅವನನ್ನು ಬಾಧಿಸುತ್ತಿರುವ ರೋಗಗಳ ಪಟ್ಟಿಯಲ್ಲಿ ಎಚ್ ಐ ವಿ ಕೂಡ ಒಂದು ಎನ್ನುವುದು ಖೇದಕರ.ಪುರಂದರದಾಸರು, ಕನಕದಾಸರು, ಮಂತ್ರಾಲಯದ ಗುರುಗಳು, ಜೇ ಸಂತೋಷಿಮಾ, ಭಕ್ತ ಕಬೀರ ಮುಂತಾದ ಸಂತರು ಮತ್ತು ಮಹಾಮಹಿಮರ ಬಗ್ಗೆ ನಮ್ಮ ದೇಶದಲ್ಲಿ ಚಿತ್ರಗಳನ್ನು ನಿರ್ಮಿಸುವ ಪರಿಪಾಠವಿದೆ. ಹಾಗೆಯೇ, ಚಾರ್ಲಸ್ ಶೋಭರಾಜ್, ವೀರಪ್ಪನ್, ಚಂಬಲ್ ರಾಣಿಯಂತಹ ಖದೀಮರ ಬಗೆಗೂ ಚಿತ್ರಗಳನ್ನು ತೆಗೆಯಲಾಗುತ್ತದೆ. ಅಂತೆಯೇ, ಆಧುನಿಕ ಭಾರತದಲ್ಲಿ ಹೊಸ ಬಗೆಯ ವಂಚನೆ ಜಾಲವನ್ನು ಸೃಷ್ಟಿಸಿದ ಖ್ಯಾತಿಗೆ ಪಾತ್ರವಾದ ಕರೀಂ ತೆಲಗಿಯ ಜೀವನ ಚರಿತ್ರೆಯನ್ನು ಆಧರಿಸಿ ಬಾಲಿವುಡ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.ಆ ಹಿಂದಿ ಚಲನಚಿತ್ರದ ಹೆಸರು ಮುದ್ರಾಂಕ್. ಚಿತ್ರದಲ್ಲಿ ಒಂದು ಭಾರೀ ಐಟಂ ಸಾಂಗ್ ಇದೆ ( ಐಟಂ ಸಾಂಗ್ ಅಂತ ಯಾಕೆ ಕರೀತಾರೆ ?). ಈ ನೃತ್ಯಕ್ಕೆ ಕುಣಿಯವ ಬೆಡಗಿ ರಾಖಿ ಸಾವಂತ್. ಅದೆಲ್ಲ ಸರೀನೆ. ಆದರೆ ಚಿತ್ರ ತೆಲಗಿಯ ಜೀವನವನ್ನು ಸರಿಯಾಗಿ ಬಿಂಬಿಸಬೇಕು, ಅಪಾರ್ಥ ಕೊಡುವಂತೆ ಚಿತ್ರೀಕರಿಸಿದರೆ ತೆಲಗಿಯ ವಿರುದ್ಧ ಇನ್ನೂ ನಡೆಯುತ್ತಿರುವ ವಿಚಾರಣೆಯ ಮೇಲೆ ಕರಿನೆರಳು ಬೀಳುತ್ತದೆ ಎಂದು ತೆಲಗಿಯ ವಕೀಲರ ಆಕ್ಷೇಪ ಮಾಡಿದ್ದರು. ಅದರಂತೆ, ನ್ಯಾಯಾಲಯ ಚಿತ್ರದ ತುಣುಕುಗಳನ್ನು ಒಮ್ಮೆ ತೆಲಗಿಗೆ ತೋರಿಸಿಬೇಕು ಎಂದು ಆಜ್ಞೆ ಮಾಡಿತು.ಕೋರ್ಟ್ ಆರ್ಡರ್ ಪ್ರಕಾರ ಏಪ್ರಿಲ್ 22ರಂದು ಯರವಾಡ ಸೆರೆಮನೆಯಲ್ಲಿ ಮುದ್ರಾಂಕ್ ಚಿತ್ರವನ್ನು ತೆಲಗಿ ಮತ್ತು ಆತನ ವಕೀಲರಿಗೆ ತೋರಿಸಲಾಯಿತು. ಚಿತ್ರ ನೋಡಿದ ತೆಲಗಿ ಅಸಮಾಧಾನ ವ್ಯಕ್ತಪಡಿಸಿದ. ರಾಖಿಸಾವಂತ್ ನೃತ್ಯ ಅವನಿಗೆ ಸ್ವಲ್ಪವೂ ಹಿಡಿಸಲಿಲ್ಲ ಎಂದು ಆನಂತರ ವಕೀಲಕರು ಜೈಲಿನ ಹೊರಗಡೆ ನೆರೆದಿದ್ದ ಮಾಧ್ಯಮ ಮಿತ್ರರಿಗೆ ಹೇಳಿದರು. ಆದರೆ ಇದೇ ಚಿತ್ರದಲ್ಲಿ ಸಂಭಾವನಾ ಸೇಠ್ ಅವರ ಮೇಲೆ ಚಿತ್ರೀಕರಿಸಲಾಗಿರುವ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ ಎಂದು ತೆಲಗಿ ಸಂತೋಷ ಸೂಚಿಸಿದನು ಎಂದೂ ಅವನ ವಕೀಲರು ತಿಳಿಸಿದರು.ತನ್ನ ಕಥೆಯನ್ನು ಆಧರಿಸಿ ತಾನೇ ಒಂದು ಭಾರೀ ಬಜೆಟ್ಟಿನ ಚಿತ್ರ ನಿರ್ಮಾಣಮಾಡುವ ಆಸೆ ತೆಲಗಿಗೆ ಇತ್ತು. ಆದರೆ ಕನಸು ಮಣ್ಣುಪಾಲಾಯಿತು. ಹಾಗೆ ನೋಡಿದರೆ ಮುದ್ರಾಂಕ್ ಸಣ್ಣ ಬಜೆಟ್ಟಿನ ಚಿತ್ರ.ಒಂದು ವೇಳೆ ತೆಲಗಿಯೇ ಚಿತ್ರ ನಿರ್ಮಿಸಿಸದ್ದಿದ್ದರೆ ಅದು ನಿಜಕ್ಕೂ ಭಾರೀ ಬಜೆಟ್ಟಿನ ಚಿತ್ರವೇ ಆಗುತ್ತಿದ್ದುದರಲ್ಲಿ ಸಂಶಯವಿಲ್ಲ. ತೆಲಗಿಯ ಬಜೆಟ್ಟಿನ ಮುಂದೆ ಯಶರಾಜ್ ಬ್ಯಾನರಿನ ಬಜೆಟ್ಟುಗಳೆಲ್ಲಾ ಯಾವಮಹಾ !
(ಕರ್ಟೆಸಿ: ದಟ್ಸ್ ಕನ್ನಡ)

No comments: