Monday, April 21, 2008

ಡಾ.ರಾಜ್ ವ್ಯಕ್ತಿತ್ವವನ್ನು ದಾಖಲಿಸುವ ಪವರ್ ಸ್ಟಾರ್ ಪುನೀತ್ ಪುಸ್ತಕ


ಡಾ.ರಾಜ್‌ಕುಮಾರ್ ಅವರ ಸಂಪೂರ್ಣ ವ್ಯಕ್ತಿತ್ವದ ಪುಸ್ತಕ ಶೀಘ್ರದಲ್ಲೇ ಹೊರಬರಲಿದೆ. ಅವರ ವ್ಯಕ್ತಿತ್ವದ ಹಲವು ಮಜಲುಗಳನ್ನು ಪರಿಚಯಿಸುವ ಪುಸ್ತಕವನ್ನು ಪವರ್ ಸ್ಟಾರ್ ಪುನೀತ್ ಹೊರತರುತ್ತಿದ್ದಾರೆ. ಪುಸ್ತಕದ ಹೆಸರು 'ಡಾ.ರಾಜ್‌ಕುಮಾರ್, ವ್ಯಕ್ತಿ ಹಿಂದಿನ ವ್ಯಕ್ತಿತ್ವ'. ತಮ್ಮ ಆಪ್ತ ಗೆಳೆಯರು, ಸಹಚರರು, ಒಡನಾಡಿಗಳು ಮತ್ತು ಬಂಧುಗಳೊಂದಿಗೆ ಡಾ.ರಾಜ್ ಹಂಚಿಕೊಂಡ ಅಪರೂಪದ ಕ್ಷಣಗಳು ಪುಸ್ತಕದಲ್ಲಿ ಅನಾವರಣಗೊಳ್ಳಲಿವೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರಬರಲಿರುವ ಪುಸ್ತಕ ಕೆಲವು ಅಪರೂಪದ ಘಟನೆಗಳನ್ನು ದಾಖಲಿಸಲಿದೆ.ಡಾ.ರಾಜ್ ಬದುಕಿದ್ದಾಗಲೇ ಈ ಪುಸ್ತಕವನ್ನು ಹೊರತರುವ ಉದ್ದೇಶ ಪುನೀತ್ ಅವರಿಗಿತ್ತು. ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡ ಮಧುರ ಕ್ಷಣಗಳನ್ನು ತಮ್ಮ ಪುಸ್ತಕದಲ್ಲಿ ಓದಿ ಸಂತೋಷ ಪಡುತ್ತಾರೆ ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಅದು ಕನಸಾಗಿಯೇ ಉಳಿಯಿತು. ಅಪ್ಪಾಜಿ ಅವರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ. ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿರುವ ಡಾ.ರಾಜ್‌ ಅವರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವುದೇ ನನ್ನ ಪುಸ್ತಕ ಗುರಿ. ಮುಂದಿನ ಅಪ್ಪಾಜಿ ಹುಟ್ಟುಹಬ್ಬದಂದು ಈ ಪುಸ್ತಕವನ್ನು ಅಭಿಮಾನಿಗಳಿಗೆ ಸಮರ್ಪಿಸಲಿದ್ದೇನೆ ಎನ್ನುತ್ತಾರೆ ಪುನೀತ್.ಡಾ.ರಾಜ್‌ಕುಮಾರ್ ಬಂಧುಗಳೊಂದಿಗೆ, ಒಡನಾಡಿಗಳೊಂದಿಗೆ ಕಳೆದ ಅಪರೂಪದ ಭಾವಚಿತ್ರಗಳು ಪುಸ್ತಕದಲ್ಲಿ ಇರುತ್ತವೆ. ಅತ್ಯಂತ ಅಪರೂಪದ 4 ಸಾವಿರ ಭಾವಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಡಾ.ರಾಜ್‌ರ ಮೇರು ಪ್ರತಿಭೆ, ವ್ಯಕ್ತಿತ್ವ, ಹಳೆ ನೆನಪು, ಅವರ ಸ್ವಭಾವ, ಆಪ್ತರು, ಜೀವನದಲ್ಲಿ ಎದುರಿಸಿದ ಕಷ್ಟ ನಷ್ಟಗಳು, ಸಂಗೀತ, ಯೋಗ...ಹೀಗೆ ಹತ್ತು ಹಲವು ಮುಖಗಳು ಅನಾವರಣಗೊಳ್ಳಲಿವೆ.ಪುನೀತ್‌ರ ಪುಸ್ತಕ ಅಪರೂಪದಲ್ಲೇ ಅಪರೂಪ ಎನ್ನುವ ರಾಜಣ್ಣನ ಭಾವಚಿತ್ರಗಳನ್ನು ಪ್ರಕಟಿಸಲಿದೆ. ಇದಕ್ಕಾಗಿ ರಾಜ್ ಅಭಿಮಾನಿಗಳು, ಆಪ್ತರು ತಮ್ಮ ಸಂಗ್ರಹದಲ್ಲಿರುವ ಭಾವಚಿತ್ರಗಳನ್ನು ತಮಗೆ ಕಳುಹಿಸಿದರೆ ಅವರಿಗೆ ಆಭಾರಿಯಾಗಿರುತ್ತೇನೆ ಎಂದಿದ್ದಾರೆ ಪುನೀತ್. ಡಾ.ರಾಜ್‌ ಅವರೊಂದಿಗೆ ಕಳೆದ ಅಪರೂಪದ ಭಾವಚಿತ್ರಗಳನ್ನು ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
(ಕರ್ಟೆಸಿ: ದಟ್ಸ್‌ಕನ್ನಡ)

No comments: