Monday, March 17, 2008

ಪುನೀತ್ ರಾಜ್ ಕುಮಾರ್ ಜೀವನದಲ್ಲಿ ಮತ್ತೊಂದು ವಸಂತಗೀತೆ

(ಕರ್ಟೆಸೀ: ವನ್ ಇಂಡಿಯಾ)
'ಬೆಟ್ಟದ ಹೂವು' ಚಿತ್ರದಲ್ಲಿ ''ಬಿಸಿಲೆ ಇರಲಿ, ಮಳೆಯೆ ಬರಲಿಕಾಡಲ್ಲಿ ಮೇಡಲ್ಲಿ ಅಲೆವೆ, ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ'' ಎಂಬ ಹಾಡಿಗೆ ಕುಣಿದ ಪುನೀತ್ ಇಷ್ಟು ಬೇಗ ಏರಿದ ಎತ್ತರ ನೋಡುತ್ತಿದ್ದರೆ ಆಶ್ಚರ್ಯವಾಗುತ್ತದೆ. ಈ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು ಪುನೀತ್.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಪುನೀತ್ ನಟಿಸಿದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಹಣದ ಹೊಳೆ ಹರಿಸುತ್ತಿವೆ. ಸ್ಯಾಂಡಲ್‌ವುಡ್‌ ಬಾಕ್ಸೀಫೀಸಿನ ಬಾದ್‌ಷಾ ಎನಿಸಿಕೊಂಡಿದ್ದಾರೆ. ಈಗ ಅವರ ಜೀವನದಲ್ಲಿ ಮತ್ತೊಂದು ವಸಂತನ ಆಗಮನವಾಗಿದೆ. ಮೊದಮೊದಲು ಡಾ. ರಾಜ್‌ಕುಮಾರ್ ಅವರ ಪುತ್ರ ಅನ್ನುವ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದರು. ಈ ಅರ್ಹತೆ ಒಂದೆರಡು ಚಿತ್ರಗಳಿಗಷ್ಟೇ ನೆರವಾಯಿತು. ನಂತರ ಪುನೀತ್‌ರ ಚಿತ್ರಗಳು ಗೆಲ್ಲಲು ಅವರ ಪ್ರತಿಭೆ ಒಂದೇ ಮಾನದಂಡವಾಯಿತು.
12 ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ನಟಿಸಿರುವ ಪುನೀತ್‌ಗೆ ಈಗ ಮೂವತ್ತರ ಮೇಲೆ ಮತ್ತೊಂದು. ಆದರೆ ನಟನಿಗೆ ಯಾವತ್ತು ವಯಸ್ಸು ಆಗುವುದೇ ಇಲ್ಲ ಅನ್ನುವ ಮಾತಿದೆ. ನಟರು ಸದಾ ಚಿರ ಯೌವ್ವನ್ನಿಗರು. ಇರಲಿ, ಮನೆಯವರು ಮುದ್ದಾಗಿ ಅಪ್ಪು ಎಂದು ಕರೆಯುವ ಪುನೀತ್ ಅವರದು ಪತ್ನಿ ಅಶ್ವಿನಿ ರೇವನಾಥ್ ಮಕ್ಕಳು ಧೃತಿ ಮತ್ತು ವಂದಿತಾರನ್ನು ಹೊಂದಿದ ಪುಟ್ಟ ಕುಟುಂಬ.
ಬಾಲ ಕಲಾವಿದನಾಗಿ ಪುನೀತ್ ಮೊದಲು ನಟಿಸಿದ ಚಿತ್ರ 'ವಸಂತ ಗೀತ' ನಂತರ ಭಾಗ್ಯವಂತ, ಹೊಸಬೆಳಕು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಯಾರಿವನು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್ ಚಿತ್ರಗಳಲ್ಲಿ ನಟಿಸಿ ತಮ್ಮ ವಾಮನ ಪ್ರತಿಭೆಯನ್ನು ಮೆರೆದಿದ್ದರು.
2002ರಲ್ಲಿ ತೆರೆಕಂಡ ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು 'ಚಿತ್ರ 25 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿತು. ಪುನೀತ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದ್ದು ಇಲ್ಲಿಂದಲೆ. ನಂತರ ಬಂದ 'ಅಭಿ'(125 ದಿನ), ವೀರ ಕನ್ನಡಿಗ(ಹ್ಯಾಟ್ರಿಕ್ ಹೀರೋ ಸ್ಥಾನ ತಪ್ಪಿಸಿದ ಚಿತ್ರ), ಮೌರ್ಯ(136ದಿನ), ಆಕಾಶ್(36 ವಾರ), ನಮ್ಮ ಬಸವ(125 ದಿನ), ಅಜಯ್(100ದಿನ), ಅರಸು(128ದಿನ), ಮಿಲನ(175 ದಿನ) ಎಲ್ಲವೂ ಶತದಿನೋತ್ಸವಗಳನ್ನು ಆಚರಿಸಿಕೊಂಡ ಚಿತ್ರಗಳು. 2008ರಲ್ಲಿ ತೆರೆಕಂಡ 'ಬಿಂದಾಸ್' ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. 'ವಂಶಿ' ಹಾಗೂ 'ರಾಜ್' ಚಿತ್ರಗಳು ಬರಬೇಕಾಗಿವೆ.
ಯೋಗರಾಜ್ ಭಟ್ಟರ ದೃಶ್ಯಕಾವ್ಯ 'ಮುಂಗಾರು ಮಳೆ' ಹಾಗೂ 'ಗಾಳಿಪಟ' ಚಿತ್ರಗಳಲ್ಲಿ ಪುನೀತ್ ನಟಿಸಬೇಕಾಗಿತ್ತು ಆದರೆ ಯೋಗರಾಜ್ ಭಟ್ಟರ ನಿರ್ದೇಶನದ ಮೇಲಿನ ನಂಬಿಕೆ ಸಾಲಲಿಲ್ಲವೋ ಏನೋ ನಟಿಸಲು ಪುನೀತ್ ಅಲ್ಲ ಪಾರ್ವತಮ್ಮ ಒಪ್ಪಲಿಲ್ಲ. 'ದುನಿಯಾ' ಚಿತ್ರದಲ್ಲಿ ವಿಜಯ್ ಅಭಿನಯ ನೋಡಿ ಮೆಚ್ಚಿ ಬೆನ್ನುತಟ್ಟಿದ್ದರು ಪುನೀತ್. ಕನ್ನಡದಲ್ಲೇ ಅತ್ಯಂತ ಹೆಚ್ಚು ಸಂಭಾವನೆ(ಸರಿ ಸುಮಾರು ಒಂದೂವರೆ ಕೋಟಿ ರೂ.) ಪಡೆಯುವ ನಟ ಪುನೀತ್ ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಮಯೂರ ಚಿತ್ರದ ನಿರ್ದೇಶಕರ ಹಠಾತ್ ಮರಣದ ಕಾರಣ ಆ ಚಿತ್ರ ನೆನೆಗುದಿಗೆ ಬಿತ್ತು. 'ಬಿಂದಾಸ್' ಬಿಡುಗಡೆಯಾದ ಒಂದು ವಾರದಲ್ಲೇ 3 ಕೋಟಿ ರೂ. ಗಳಿಸಿದೆ. ಇಷ್ಟೆಲ್ಲಾ ಹೆಗ್ಗಳಿಕೆಗಳ ಜೊತೆಗೆ ಮತ್ತಷ್ಟು ಯಶಸ್ಸು ಅವರಿಗೆ ಸಿಗಲೆಂದು ಹಾರೈಸೋಣ.
ಪುನೀತ್ ರಾಜ್‌ಕುಮಾರ್ ಮಾ.17ರಂದು ಎರಡು ಕಡೆ ಅನ್ನದಾನವನ್ನು ಏರ್ಪಡಿಸಿದ್ದಾರೆ. ಒಂದು ಮಲೆ ಮಹದೇಶ್ವರ ಬೆಟ್ಟ ಹಾಗೂ ಹುಬ್ಬಳ್ಳಿಯ ಸಿದ್ಧಾರೂಡ ಆಶ್ರಮದಲ್ಲಿ. ಎರಡು ಕಡೆ ವಿಶೇಷ ಪೂಜೆ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

Wednesday, March 12, 2008

ಕ್ರೇಜಿ ಸ್ಟಾರ್ ರವಿಚಂದ್ರನ್ "ನಾ ಟಾಟಾ ನೀ ಬಿರ್ಲಾ" ಸಿದ್ಧ

(ಕರ್ಟೆಸಿ:ದಟ್ಸ್‌ಕನ್ನಡ)
ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗಿ ಅಭಿನಯಿಸುತ್ತಿದ್ದು, ಹಾಸ್ಯಭರಿತ ಚಿತ್ರ 'ನಾ ಟಾಟಾ ನೀ ಬಿರ್ಲಾ' ಚಿತ್ರದಲ್ಲಿ ಮೋಹಕ ತಾರೆ ಜೆನ್ನಿಫರ್ ಕೋತ್ವಾಲ್ ಹಾಗೂ ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಜತೆ ಕುಣಿಯಲಿದ್ದಾರೆ.
ಕಳೆದವಾರ ಬೆಂಗಳೂರಿನಲ್ಲಿ ಬಿರ್ಲಾ ತನ್ನ ಸಂಗಾತಿಯೊಡನೆ ಕುಣಿದಿದ್ದನ್ನು ಚಿತ್ರೀಕರಿಸಿಕೊಂಡ ನಿರ್ದೇಶಕ ಮಾಗಡಿ ಪಾಂಡು ಬ್ಯಾಂಕಾಕ್‌ಗೆ ತೆರಳಿದ್ದಾರೆ. ಅಲ್ಲಿ ಟಾಟಾ ಪಾತ್ರಧಾರಿ ರವಿಚಂದ್ರನ್ ಹಾಗೂ ಬೆಡಗಿ ಜನ್ನಿಫರ್ ಕೊತ್ವಾಲ್ ಅವರ ಅಭಿನಯದಲ್ಲಿ ಹೃದಯಶಿವ ಅವರು ಬರೆದಿರುವ . 'ಮುತ್ತು ಕೊಡಲ ಮುತ್ತು ಕೊಡಲ ಮನಸಾರೆ ಕಣ್ಣಿಗೊಂದನ್ನು ಒತ್ತಿ ಬಿಡಲೆ ಒತ್ತಿ ಬಿಡಲೆ ಮನಸಾ ಈ ಕಾಲಿಂಗ್ ಬೆಲ್ಲನು' ಗೀತೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ಗೀತೆಯ ಚಿತ್ರೀಕರಣದೊಂದಿಗೆ ಮದರ್ ಇಂಡಿಯಾ ಮೂವೀಟೋನ್ ಲಾಂಛನದಲ್ಲಿ ರವಿಕುಮಾರ್ ಹಾಗೂ ಎಸ್.ಎನ್.ದೊಡ್ಡೇಗೌಡರು ನಿರ್ಮಿಸುತ್ತಿರುವ 'ನಾ ಟಾಟಾ ನೀ ಬಿರ್ಲಾ ' ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯವಾಗಿದೆ. ಕೌಟುಂಬಿಕ ಸನ್ನಿವೇಶದೊಂದಿಗೆ ಹಾಸ್ಯದ ಹೊನಲಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಗೀತರಚನೆ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಲಕ್ಷ್ಮಣರೆಡ್ಡಿ ಸಂಕಲನ, ಕಡೂರುಶಿವು, ಜಿ.ಎಸ್.ವೇದಾಂತ್ ಸಹನಿರ್ದೇಶನ, ಇಸ್ಮಾಯಿಲ್ ಕಲೆ, ಮಲ್ಲಿಕಾರ್ಜುನ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರವಿಚಂದ್ರನ್, ಜಗ್ಗೇಶ್, ಜನ್ನಿಫರ್ ಕೊತ್ವಾಲ್, ಪೂಜಾಗಾಂಧಿ, ನಿಖಿತಾ, ಕೀರ್ತಿಚಾವ್ಲಾ, ಊರ್ವಶಿ, ಜ್ಯೋತಿರಾಣಾ, ಸಾಧುಕೋಕಿಲಾ, ದೊಡ್ಡಣ್ಣ ಮುಂತಾದವರಿದ್ದಾರೆ.

Monday, March 3, 2008

ಪ್ರಣಯರಾಜ ಶ್ರೀನಾಥ್ ರ "ಪ್ರಣಯರಾಜ" ಬಿರುದು ದಾನ...

(ಕರ್ಟೆಸೀ: ವನ್ ಇಂಡಿಯಾ)
ಫೆ.24ರ ಭಾನುವಾರ ಗೋಲ್ಡನ್ ಫಾಮ್ ರೆಸಾರ್ಟ್‌ನಲ್ಲಿ ಗಣೇಶ್-ಶಿಲ್ಪಾರ ಆರತಕ್ಷತೆ ಕಾರ್ಯಕ್ರಮಕ್ಕೆ ಇಡೀ ಕನ್ನಡ ಚಿತ್ರೋದ್ಯಮವೇ ಆಗಮಿಸಿತ್ತು. ಪ್ರಣಯರಾಜ ಶ್ರೀನಾಥ್ ದಂಪತಿಗಳು ನವ ವಧೂ-ವರನಿಗೆ ಶುಭಕೋರಲು ಆರತಕ್ಷತೆಗೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀನಾಥ್ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಮರೆಯಲಾಗದ ಉಡುಗೊರೆಯನ್ನು ಕೊಟ್ಟಿದ್ದಾರೆ. ಮೂರು ದಶಕಗಳಿಗೂ ಅಧಿಕ ಕಾಲದಿಂದ ''ಪ್ರಣಯರಾಜ'' ಎಂದು ಕರೆಸಿಕೊಳ್ಳುತ್ತಿರುವ ಶ್ರೀನಾಥ್ ಆ ಬಿರುದನ್ನು 1976ರಲ್ಲಿ ಪಡೆದುಕೊಂಡಿದ್ದರು. ಈಗ ''ಪ್ರಣಯರಾಜ'' ಕಿರೀಟವನ್ನ್ನು ಗಣೇಶ್‌ಗೆ ಕೊಡುವುದಾಗಿ ಶ್ರೀನಾಥ್ ಮತ್ತವರ ಪತ್ನಿ ಗೀತಾ ನಿರ್ಧರಿಸಿದ್ದಾರೆ. ನಾನೀಗ ಬೆಳ್ಳಿ ತೆರೆ ಯ''ಪ್ರಣಯರಾಜ''ನಾಗಿ ಉಳಿದಿಲ್ಲ. ಆದ್ದರಿಂದ ಈ ಕಿರೀಟವನ್ನು ಪ್ರಸ್ತುತ ಕನ್ನಡ ಚಿತ್ರರಂಗದ ಪ್ರಣಯರಾಜನ ಪಾತ್ರಗಳಲ್ಲಿ ಮಿಂಚುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ವರ್ಗಾಯಿಸುತ್ತಿರುವುದಾಗಿ ಶ್ರೀನಾಥ್ ಪ್ರಕಟಿಸಿದ್ದಾರೆ. ಬರುವ ಯುಗಾದಿ ಹಬ್ಬದಂದು ಬೆಂಗಳೂರಿನ ಕಾರ್ಯಕ್ರಮದಲ್ಲಿ ''ಪ್ರಣಯರಾಜ'' ಕಿರೀಟ ಗಣೇಶ್ ತೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀನಾಥ್ ತುಂಬಾ ದಿನಗಳಿಂದ ತಮ್ಮಲ್ಲೇ ಅದುಮಿಟ್ಟುಕೊಂಡ ಆಸೆಯೊಂದನ್ನು ಪ್ರಕಟಿಸಿದರು. ಗಣೇಶ್‌ ನಾಯಕ ನಟನಾಗಿ ಶ್ರೀನಾಥ್ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಶ್ರೀನಾಥ್ ಎರಡು ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ತಮ್ಮ ಗುರು,ಗೆಳೆಯ, ಮಾರ್ಗದರ್ಶಿಯಾದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುವುದಾಗಿ ಶ್ರೀನಾಥ್ ತಿಳಿಸಿದರು.
ಈ ವರ್ಷದ ಆರಂಭದಲ್ಲೆ ಚಿತ್ರವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಕಾರಣ ರಾಜಕೀಯದಲ್ಲಿ ಕಾರ್ಯಮಗ್ನರಾಗಿ ನಿರ್ದೇಶನವನ್ನು ಪಕ್ಕಕ್ಕಿಟ್ಟರು. ಆದರೆ ಚುನಾವಣೆ ನವೆಂಬರ್‌ಗೆ ಮುಂಡೂಡಲ್ಪಡುವ ಸಾಧ್ಯತೆಗಳು ಇವೆ ಎಂಬ ಮತ್ತೊಂದು ಸುದ್ದಿ ಬಂದ ಕಾರಣ ಶ್ರೀನಾಥ್ ಅವರಿಗೆ ಸ್ವಲ್ಪ ಕಾಲಾವಕಾಶ ಸಿಕ್ಕಿದೆ. ಹಾಗಾಗಿ ನಿರ್ದೇಶನಕ್ಕೆ ಮುಂದಾಗಿರುವುದಾಗಿ ಶ್ರೀನಾಥ್ ತಿಳಿಸಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರದ ಬಗ್ಗೆ ಯಾವುದೇ ವಿವರಗಳೂ ಲಭ್ಯವಿಲ್ಲ. ಶ್ರೀನಾಥ್ ಅವರ ಆಪ್ತ ಸ್ನೇಹಿತರೊಬ್ಬರು ಈ ಚಿತ್ರಕ್ಕೆ ನಿರ್ಮಾಪಕ ಎಂದಷ್ಟೇ ಗೊತ್ತಿರುವ ವಿಚಾರ. ಇನ್ನು ಮುಂದೆ ಶ್ರೀನಾಥ್ ಹೆಸರಿನ ಮುಂದೆ ''ಪ್ರಣಯರಾಜ'' ಬದಲಾಗಿ ''ನಿರ್ದೇಶಕ'' ಎಂಬ ಬಿರುದು ಅಂಟಿಕೊಳ್ಳಲಿದೆ. ಸ್ವಲ್ಪ ಕಷ್ಟವಾಗಬಹುದು ನಿರ್ದೇಶಕ ಶ್ರೀನಾಥ್ ಎಂದು ಕರೆಯಲು. ಕೆಲವರು ಆದರ್ಶ ದಂಪತಿಗಳು ಶ್ರೀನಾಥ್ ಎಂದು ಕರೆಯುವುದೂ ಉಂಟು. ಅವರ ನಿರ್ದೇಶನದಲ್ಲಿ ಉತ್ತಮ ಚಿತ್ರಗಳು ಮೂಡಿ ಬರಲಿ ಎಂದು ಹಾರೈಸೋಣ.

Monday, February 25, 2008

Press coverage on "PUTTA" Film

Kannada Prabha
Prajavani
Prajavani
Samyuktha Karnataka
Samyuktha Karnataka

Udayvani

Wednesday, February 6, 2008

ಬೆಳದಿಂಗಳಾಗಿ ಬಾ:ಒಂದಿಷ್ಟು ಅಚ್ಚರಿ, ಒಂದಿಷ್ಟು ನಿರಾಶೆ


(ಕ‌ರ್ಟೆಸೀ: ವನ್ ಇಂಡಿಯಾ)
ಹೆಸರು ಕೇಳಿದರೆ ಎಷ್ಟುಚೆಂದ ಇದೆ ಅಂತ ಅನಿಸುತ್ತದೆ. ಇದೊಂದು ಪ್ರೇಮ ಕತೆ ಎನ್ನುವ ನಿರೀಕ್ಷೆ ಮೂಡಿಸುತ್ತದೆ.ಎಂ.ಎಸ್ .ರಮೇಶ್ ಮೊದಲ ಬಾರಿ ಕವಿತೆಯಂಥ ಹೆಸರು ಇಟ್ಟಿದ್ದರಿಂದ ಆ ನಿರೀಕ್ಷೆ ಇನ್ನಷ್ಟು ಹೆಚ್ಚಾಗುತ್ತದೆ. ಖಡಕ್ ಸಂಭಾಷಣೆಯಿಂದ ಕಿಕ್ ಕೊಡುವ ಇವರಿಂದ ಇನ್ನೋ ಏನೋ ಹೊಸದನ್ನು ನೋಡಬಹುದೆಂಬ ಆಸೆ ಮೂಡುತ್ತದೆ. ಆದರೆ ನೋಡ್ತಾ ನೋಡ್ತಾ ರಮೇಶ್ ಹೀಗೇಕೆ ಮಾಡಿದರೆಂದು ಅಚ್ಚರಿಯಾಗುತ್ತದೆ. ಜತೆಗಿಷ್ಟು ನಿರಾಸೆ.
ದೇವಶೆಟ್ಟಿ ಮಹೇಶ್
ಇದು ನಿಜ. ರಮೇಶ್ ನಿರ್ದೇಶಕರಾಗಿ ಮತ್ತು ಸಂಭಾಷಣಾಕಾರರಾಗಿ ಸೋತಿದ್ದಾರೆ. ತುಂಬಾ ಮಾಮೂಲಿ ಕತೆಗೆ ಅಷ್ಟೇ ನೀರಸ ನಿರೂಪಣೆ ಮಾಡಿದ್ದಾರೆ ವಿರಾಮಕ್ಕೆ ಸಿಗುವ ತಿರುವು ಬಿಟ್ಟರೆ ಕತೆ ಎಲ್ಲೂ ಕುತೂಹಲ ಮೂಡಿಸುವುದಿಲ್ಲ. ಕೊನೆಗೆ ಹೀಗೆ ಆಗುತ್ತದೆ ಎಂದು ಗೊತ್ತಾಗುವಂತಿದ್ದರೆ ಅದನ್ನು ಯಾಕೆ ನೋಡಬೇಕೆಂದು ಜನ ಕೇಳುತ್ತಾರೆ. ಅದಕ್ಕಿಂತ ಹೆಚ್ಚಾಗಿ ದೃಶ್ಯಗಳ ಜಾಳುತನ ಬೋರ್ ಹೊಡೆಸುತ್ತವೆ. ಇದು ಪ್ರೇಮ ಕತೆಯೂ ಅಲ್ಲ. ರೌಡಿಸಂ ಕತೆಯೂ ಅಲ್ಲ. ಎರಡನ್ನೂ ಮಿಕ್ಸ್ ಮಾಡಲು ಹೋಗಿ ಎರಡಕ್ಕೂ ರಮೇಶ್ ನ್ಯಾಯ ಸಲ್ಲಿಸಿಲ್ಲ.ಇನ್ನುಳಿದ ವಿವರ ಕೇಳುವ ಮುನ್ನ ಕತೆಯನ್ನು ಕೊಂಚ ಕೇಳಿ.
ನಾಯಕ ಅಜ್ಜ ಅಜ್ಜಿ ಜತೆ ಬೆಳೆದಿರುತ್ತಾನೆ. ಗೆಳೆಯನ ಮದುವೆಯಲ್ಲಿ ನಾಯಕಿ ಸಿಗುತ್ತಾಳೆ. ಆಕೆಯನ್ನು ಪ್ರೀತಿಸುತ್ತಾನೆ. ಆಕೆ ಪೊಲೀಸ್ ಅಧಿಕಾರಿ ಮಗಳು. ಇದೇ ಹೊತ್ತಿನಲ್ಲಿ ನಾಯಕ ಒಬ್ಬ ರೌಡಿಯನ್ನು ಹೊಡೆಯುತ್ತಾನೆ. ಆತ ದೊಡ್ಡ ಸ್ಮಗ್ಲರ್ ನಬಂಟ. ನನ್ನ ಹುಡುಗನನ್ನು ಹೊಡೆದ ಎಂಬ ಕಾರಣಕ್ಕೆ ಆತ ನಾಯಕನ ಬೆನ್ನು ಬೀಳುತ್ತಾನೆ. ಆಗ ಆ ನಾಯಕ ತನ್ನ ಪ್ರತಿಸ್ಪರ್ಧಿ ಗ್ಯಾಂಗ್ ರೌಡಿಯ ಮಗ ಎಂದು ಗೊತ್ತಾಗುತ್ತದೆ. ಈತ ರೌಡಿ ಮಗ ಎನ್ನುವ ಕಾರಣಕ್ಕೆ ಪೊಲೀಸ್ ಅಧಿಕಾರಿ ಕೂಡ ತನ್ನ ಮಗಳನ್ನು ಈತನಿಗೆ ಕೊಡಲು ಒಪ್ಪುವುದಿಲ್ಲ. ಆ ಪ್ರೀತಿಯನ್ನು ಮರಳಿ ಗಳಿಸಲು ನಾಯಕ ಏನೇನು ಮಾಡುತ್ತ್ತಾನೆ ಎನ್ನ್ನುವುದೇ ಉಳಿದ ಕತೆ.
ತುಂಬಾ ದೊಡ್ಡ ಕ್ಯಾನ್ವಾಸ್ ನ ಚಿತ್ರಕತೆಯನ್ನು ರಮೇಶ್ ಹೆಣೆದಿದ್ದಾರೆ. ಆರಂಭದ ಮಾದುವೆ ಮನೆಯ ತಮಾಷೆ ಖುಷಿಕೊಡುತ್ತವೆ. ವಿರಾಮದ ನಂತರ ರಂಗಾಯಣ ರಘು ಎಲ್ಲರನ್ನೂ ಹಿಂದಿಕ್ಕಿ ಕಿಕ್ ಕೊಡುತ್ತಾರೆ. ವಿಜಯ ರಾಘವೇಂದ್ರ ಎಂದಿನಂತೆ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ರಮಣೀತು ಚೌಧರಿ ಮುದ್ದಾಗಿ ಕಾಣುತ್ತಾಳೆ. ಜತೆಗೆ ಅಭಿನಯದ ಬಗ್ಗೆ ಆಸಕ್ತಿವಹಿಸುವುದು ಒಳ್ಳೆಯದು. ಚಂದ್ರಶೇಖರಕಂಬಾರರು ಸಂಕೋಚದಿಂದ ಕ್ಯಾಮರಾ ಮುಂದೆ ನಿಂತಿರುವುದು ಪ್ರತಿ ಶಾಟ್ ನಲ್ಲಿ ಕಾಣುತ್ತದೆ. ಇಲ್ಲ , ಅವರನ್ನು ನಟನಾಗಿ ಒಪ್ಪಿಕೊಳ್ಳುವುದು ಕಷ್ಟ .ಆದರೆ ಅವರಾಡುವ ಮಾತುಗಳು ಇಷ್ಟ ಇಷ್ಟ. ಶೋಭರಾಜ್, ಸಂಕೇತ್ ಕಾಶಿ, ಅವಿನಾಶ್ ಮೋಸ ಮಾಡಿಲ್ಲ. ಕಾಶಿ ಪತ್ನಿಯಾಗಿ ನಟಿಸಿದ ನಟಿ ನೆನಪಿನಲ್ಲಿ ಉಳಿಯುತ್ತಾಳೆ. ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ಕೊಡುತ್ತವೆ.ವಿರಹ ಗೀತೆ ಮನಸು ತಟ್ಟುತ್ತದೆ.
ಇದೊಂದು ಸ್ವಮೇಕ್ ಕತೆ ಎನ್ನುವುದು ಮೆಚ್ಚಬೇಕಾದ ಅಂಶ. ಆದರೆ ಅಷ್ಟಕ್ಕೇ ಇದನ್ನು ಮೆಚ್ಚಬೇಕು ಅಂದರೆ ಸೋ ಸಾರಿ.ನಾಯಕ ನಾಯಕಿ ನಡುವೆ ಪ್ರೇಮ ಆರಂಭವಾಗುವ ದೃಶ್ಯಗಳನ್ನು ತೋರಿಸದೆ ಅವರು ಪ್ರಾಣ ಕೊಡುವಷ್ಟು ಪ್ರೀತಿಸುತ್ತಾರೆ ಎಂದು ಹೇಳುವುದು ಬಾಲಿಶ. ರಘು ತಂಗಿಯ ಪ್ರೇಮ ಪ್ರಕರಣಕ್ಕೆ ಸುಖ್ಯಾಂತ ಕಾಣಿಸಲು ನಾಯಕ ಹೆಣಗಾಡುವುದರಲ್ಲಿ ಎಲ್ಲೋ ದಿಕ್ಕು ತಪ್ಪಿದಂತಾಗುತ್ತದೆ. ಅಲ್ಲಲ್ಲಿ ಮಾತುಗಳು ಖುಷಿ ಕೊಡುತ್ತವೆ. ಆದರೆ ಎಲ್ಲಾ ನೋಡಿದ ಮೇಲೆ ಅಥವಾ ನೋಡುವಾಗಲೇ ಆಕಳಿಕೆ ತರಿಸುತ್ತಾ, ಕೆಲವೊಮ್ಮೆ ನಗು ಮೂಡಿಸುತ್ತಾ ಸಾಗುತ್ತವೆ.ನಮ್ಮಲ್ಲಿ ಕತೆಗಳು ಇರುವುದು ಇಷ್ಟೇನಾ? ದೃಶ್ಯಗಳ ತಾಜಾತನಕ್ಕೆ ಯಾಕೆ ಕೆಲವರು ಹೊಸದಾಗಿ ಪ್ರಯತ್ನಿಸುತ್ತಲೇ ಇಲ್ಲ? ಎಲ್ಲರೂ ಹೊರಟ ದಾರಿಯನ್ನು ಬಿಟ್ಟು ಕೊಂಚ ಬೇರೆ ಕಡೆ ಕಣ್ಣು ಹಾಯಿಸಿದರೆ ಬೇರೆ ಏನಾದರೂ ಹೊಸದು ಸಿಗಬಹುದುದಲ್ಲವೆ? ರಮೇಶ್ ಗೆ ಸಾಧ್ಯವಿದೆ ಮತ್ತು ಇದೆಲ್ಲಾ ಗೊತ್ತೂ ಇದೆ. ಆದರೂ ಹೀಗೆ ಮಾಡಿದ್ದಾರೆ. ಮುಂದಿನ ಸಾರಿ ಏನು ಮಾಡ್ತಾರೋ ನೋಡೋಣ.

Monday, February 4, 2008

"Putta" Muhurtha Stills




ಮದುವೆ ನಂತರ ಎಲ್ಲಾ ನಟಿಯರ ಗತಿ ಅಷ್ಟೇ


(ಕರ್ಟೆಸೀ:ವೆಬ್ ದುನಿಯಾ)

ಒಂದು ಸಾರಿ ಕುತ್ತಿಗೆಗೆ ತಾಳಿ ಬಿದ್ದುಬಿಟ್ಟರೆ ಚಿತ್ರರಂಗದಲ್ಲಿ ಗ್ಲಾಮರಸ್ ಪಾತ್ರಗಳಿಗೆ ನೇಣು ಬಿತ್ತಿತೆಂದೇ ಲೆಕ್ಕ. ಮದುವೆಯಾದ ಮೇಲೂ ತನ್ನಲ್ಲಿ ಆಕರ್ಷಣೆ ಉಳಿದಿದೆಯೆಂದು ಮೈಕ್ ಹಿಡಿದು ಕೂಗಿಕೊಂಡರೂ ನಿರ್ಮಾಪಕರು ಕ್ಯಾರೆ ಅನ್ನುವುದಿಲ್ಲ. ನಟಿಸಲೇಬೇಕೆಂಬ ಅಭಿಲಾಷೆಯಿದ್ದವರು ಅನಿವಾರ್ಯವಾಗಿ ಅಕ್ಕ, ತಂಗಿ, ಸ್ನೇಹಿತೆ, ಅಗತ್ಯ ಬಿದ್ದರೆ ಅಮ್ಮನ ಪಾತ್ರಕ್ಕೂ ಸೈ ಎನ್ನಬೇಕು. ಲಗ್ನವಾದನಂತರ ಪೋಷಕ ಪಾತ್ರಗಳಿಗೆ ತಥಾಸ್ತು ಎಂದವರ ಪಟ್ಟಿ ದೊಡ್ಡದೇ ಇದೆ. ಸುಧಾರಾಣಿ, ಅನು ಕೃಷ್ಣಕುಮಾರ್, ಶ್ರುತಿ, ರಕ್ಷಿತಾ... ಹುಡುಕಿಕೊಂಡು ಹೊಂಟರೆ ಇನ್ನೂ ನಾಲ್ಕಾರು ನಟಿಯರು ಸಿಕ್ಕೇ ಸಿಗುತ್ತಾರೆ.
ಈ ಪಟ್ಟಿಗೆ ಹೊಸ ಸೇರ್ಪಡೆ ಓಂ ಚಿತ್ರದ ಮೂಲಕ ಅಂಬೆಗಾಲಿಟ್ಟು ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಬೆಳೆದ ನಟಿ ಪ್ರೇಮಾ. ಜೀವನ್‌ರ ಜೀವನ ಸಂಗಾತಿಯಾದ ನಂತರ ಪ್ರೇಮಾ ಮತ್ತೆ ಮುಖಕ್ಕೆ ಬಣ್ಣ ಬಳಿದಿದ್ದಾರೆ. ಆದರೆ ಇದು ಕನ್ನಡ ಚಿತ್ರದಲ್ಲಲ್ಲ. ತೆಲುಗು ಚಿತ್ರದಲ್ಲಿ. ತೆಲುಗು ಚಿತ್ರ ಕೃಷ್ಣಾರ್ಜನದಲ್ಲಿ ಪ್ರೇಮಾ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹಾಗೆ ನೋಡಿದರೆ ಇಂದು (ಫೆ.1) ಬಿಡುಗಡೆಯಾಗಿರುವ ನವಶಕ್ತಿ ಮಹಾತ್ಮೆ ಚಿತ್ರದಲ್ಲೂ ಪ್ರೇಮಾ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಆದರೆ, ಈ ಚಿತ್ರ ಸೆಟ್ಟೇರಿದ್ದು ಅವರ ಮದುವೆಯ ಮೊದಲು, ಬಿಡುಗಡೆಯಾಗಿದ್ದು ಮದುವೆಯಾಗಿ ವರುಷಗಳ ನಂತರ. ಕನ್ನಡ ಚಿತ್ರದಲ್ಲಿಯೂ ಪ್ರಯತ್ನ ಮಾಡಿದರೆ ಅಕ್ಕ, ಅತ್ತಿಗೆ, ನಾದಿನಿ, ಅಮ್ಮನ ಪಾತ್ರಗಳು ಸಿಗುವುದು ಕಷ್ಟವೇನೂ ಅಲ್ಲ. ಆದರೇಕೋ ಪ್ರೇಮಾ ತೆಲುಗು ಚಿತ್ರದತ್ತ ಒಲವು ತೋರಿಸಿದ್ದಾರೆ.
ಮದುವೆಯಾದ ನಂತರ ಸಿನೆಮಾಗಳಲ್ಲಿ ಕ್ಲಿಕ್ಕಾದ ಉದಾಹರಣೆಗಳೂ ಸಾಕಷ್ಟಿವೆ. ಮೋಹಕ ತಾರೆ ಲಕ್ಷ್ಮಿ ನಟನೆಯಲ್ಲಿ ಉತ್ತುಂಗ ತಲುಪಿದ್ದು ಮದುವೆಯಾದ ನಂತರವೇ. ಅಪರೂಪದ ಸತ್ವಯುತ ಪಾತ್ರಗಳು, ಅತ್ಯುತ್ತಮ ಕಥೆ, ಜೀವತುಂಬುವ ಹಾಡುಗಳು ಲಕ್ಷ್ಮಿ ಉಚ್ಛ್ರಾಯ ಸ್ಥಿತಿ ತಲುಪಲು ಸಹಾಯ ಮಾಡಿದ್ದವು. ಈಗ ಮಹಿಳಾ ಪ್ರಧಾನ ಚಿತ್ರಗಳು ದುರ್ಬೀನು ಹಾಕಿಕೊಂಡು ಹುಡುಕಿದರೂ ಸಿಗುವುದಿಲ್ಲ. ಬಹುದಿನಗಳ ನಂತರ ಮತ್ತೆ ಮುಖಕ್ಕೆ ಬಣ್ಣ ಹಚ್ಚಿರುವ ಅಳುಮುಂಜಿ ತಾರೆ ಶ್ರುತಿಗೆ ಕವಿತಾ ಲಂಕೇಶ್ ನಿರ್ದೇಶನದ 'ಅವ್ವ' ಚಿತ್ರದಲ್ಲಿ ಪ್ರಮುಖ ಪಾತ್ರ ದೊರೆತಿದೆ. ಸುಧಾರಾಣಿ, ಅನು ಕೃಷ್ಣಕುಮಾರ್ ಮೊದಲಾದವರು ಈಗಾಗಲೇ ತೆರೆಯ ಮರೆಗೆ ಸೇರಿದ್ದಾರೆ.
ತೆಲುಗಿನತ್ತ ಮುಖ ಮಾಡಿರುವ ಪ್ರೇಮಾ ಕನ್ನಡದತ್ತಲೂ ಗಮನ ಹರಿಸಲಿ. ಪಾತ್ರ ಮುಖ್ಯವಲ್ಲ ಅದರಲ್ಲಿರುವ ಸತ್ವ ಮುಖ್ಯ, ಬದಲಾದ ಸನ್ನಿವೇಶಗಳಿಗೆ ತಾವೂ ಬದಲಾಗಬೇಕೆಂಬ ಸತ್ಯವನ್ನು ಪ್ರೇಮಾ ಅರಿತುಕೊಳ್ಳಲಿ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ. ಅಭಿನಯದ ತಾಕತ್ತಿದ್ದರೆ ಎಂಥ ಪಾತ್ರಗಳಲ್ಲಿಯೂ ಮಿನುಗಬಹುದು ಎಂಬುದಕ್ಕೆ ತಾರಾನೇ ಉಳಿದ ನಟಿಯರಿಗೆ ಉದಾಹರಣೆಯಾಗಲಿ.

Saturday, February 2, 2008

"Putta" Muhurtha (Gallery)

(Courtesy:Chitramala)














ಬಿಪಾಶಾ, ಸಮೀರಾ, ಕತ್ರಿನಾರಿಂದ ಸೆಸಿಯೆಸ್ಟ್ "ರನ್"


(ಕರ್ಟೆಸೀ: ವೆಬ್ ದುನಿಯಾ)
ಅಬ್ಬಾಸ್-ಮಸ್ತಾನ್ ಅವರ ಮುಂದಿನ ಚಿತ್ರ 'ರೇಸ್'ನಲ್ಲಿ ಒಬ್ಬರಲ್ಲ, ಮೂವರು 'ಹಾಟ್' ನಾಯಕಿಯರು ತಮ್ಮ ತಮ್ಮ ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ! ಬಿಪಾಶಾ ಬಸು, ಸಮೀರಾ ರೆಡ್ಡಿ ಮತ್ತು ಕತ್ರಿನಾ ಕೈಫ್ ಅವರನ್ನು ಒಂದೇ ಚಿತ್ರದಲ್ಲಿ ನೋಡುವ ಅವಕಾಶ ದೊರೆತಿರುವುದು ಚಿತ್ರ ರಸಿಕರ ನಿರೀಕ್ಷೆ ಹೆಚ್ಚಿಸಿದೆ.
ಒಂದೇ ಚಿತ್ರದಲ್ಲಿ ಮೂವರೂ ನಟಿಸುತ್ತಿದ್ದರೂ ಈ ನಟೀಮಣಿಯರಿಗೆ ಪರಸ್ಪರ ಮಾತಿಲ್ಲ-ಕಥೆಯಿಲ್ಲವಂತೆ. ಆದರೆ ಮೂವರು ನಾಯಕರಾದ ಅನಿಲ್ ಕಪೂರ್, ಅಕ್ಷಯ್ ಕುಮಾರ್ ಮತ್ತು ಸೈಫ್ ಆಲಿ ಖಾನ್ ಅವರು ಪರಸ್ಪರ ಜೋಕ್ ಮಾಡುತ್ತಾ, ನಗು ನಗುತ್ತಾ ಬೆರೆಯುತ್ತಿದ್ದರೆ, ನಾಯಕಿಯರಂತೂ ಮೌನ ಮೌನ ಮೌನ...
ತಾನು ಮತ್ತು ಕತ್ರಿನಾ ಪರಸ್ಪರ ಮಾತುಕತೆ ನಡೆಸುತ್ತಿಲ್ಲ ಎಂಬುದನ್ನು ಬಿಪಾಶಾ ಒಪ್ಪುತ್ತಾರೆ. ಜಾನ್ ಅಬ್ರಹಾಂ ಮತ್ತು ಸಲ್ಮಾನ್ ಖಾನ್ ಕೂಡ ಪರಸ್ಪರರನ್ನು ಇಷ್ಟಪಡುವುದಿಲ್ಲ, ಬಹುಶಃ ಇದಕ್ಕಾಗಿಯೇ ಬಿಪಾಶಾ ಮತ್ತು ಕತ್ರಿನಾ ಕೂಡ ಪರಸ್ಪರ ಮಾತನಾಡಲು ಇಷ್ಟಪಡುತ್ತಿಲ್ಲ ಎಂಬ ಗುಸುಗುಸು ಬಾಲಿವುಡ್ ಲೋಕದಲ್ಲಿದೆ.
ನಾಯಕಿಯರ ಈ ಮೌನ ವ್ರತವು ಅಬ್ಬಾಸ್-ಮಸ್ತಾನ್ ಅವರಿಗೆ ಶೂಟಿಂಗ್ ನಡೆಸುವಾಗ ತುಂಬಾನೇ ಸಮಸ್ಯೆ ತಂದೊಡ್ಡಿದೆ ಅಂತ ಮೂಲಗಳು ತಿಳಿಸಿವೆ. ಈ ಚಿತ್ರವು ಮಾರ್ಚ್ 21ರಂದು ತೆರೆ ಕಾಣಲಿದೆ.