'ಗಜ' ಮತ್ತು 'ಇಂದ್ರ' ಹಿಟ್ ಚಿತ್ರಗಳ ನಂತರ ದರ್ಶನ್‌ರ ಮತ್ತೆರಡು ಚಿತ್ರಗಳು ತೆರೆ ಕಾಣಲು ರೆಡಿಯಾಗಿವೆ। ಈ ವರ್ಷದ ಬಿಗ್ ಹಿಟ್ ಚಿತ್ರವೆಂದರೆ ಗಜ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಂದು ವಿಧದಲ್ಲಿ ಲಕ್ಕಿ ಚಿತ್ರವೂ ಹೌದು. ಚಿತ್ರದಲ್ಲಿನ ಕೆಲ ಹಾಡುಗಳು ಪಡ್ಡೆಗಳನ್ನು ಹುಚ್ಚೆದ್ದು ಕುಣಿಸಿವೆ.ನಂತರ ಬಂದ 'ಇಂದ್ರ' ಚಿತ್ರದ 'ಗುಂ ಗುಂ ಗುಂಮ್ತಾನೆ' ಹಾಡು ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿತು.ಈ ಎರಡು ಯಶಸ್ವಿ ಚಿತ್ರಗಳ ನಂತರ ಆಗಸ್ಟ್ 15 ರಂದು 'ಅರ್ಜುನ' ಮತ್ತು ಸ್ವಂತ ಬ್ಯಾನರ್ ನಲ್ಲಿ ನಿರ್ಮಿಲಾಗಿರುವ 'ನವಗ್ರಹ' ಚಿತ್ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅನಂತರ 'ಬಾಸ್' ಎನ್ನುವ ಚಿತ್ರಕ್ಕೆ ಸಹಿ ಹಾಕಿರುವ ದರ್ಶನ್, ಗಜ ಚಿತ್ರದ ನಾಯಕಿ ನವ್ಯಾ ನಾಯರ್ 'ಬಾಸ್' ಚಿತ್ರಕ್ಕೂ ನಾಯಕಿಯಾಗಿ ಅಭಿನಯಿಸಲಿದ್ದಾರೆ. ರಮೇಶ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀರಾಜ್ ಎನ್ನುವ ಹೊಸಬರು ನಿರ್ದೇಶಕರು. 'ಅರ್ಜುನ' ಚಿತ್ರ ಈಗಾಗಲೇ ಆಸ್ಟ್ರೀಯಾ, ಜರ್ಮನಿ, ಬ್ಯಾಂಕಾಕ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ಇದು ಕಥೆಯ ತಿರುಳು. ಇದರಲ್ಲಿ ದರ್ಶನ್ ಅಭಿನಯ ಮನಮೋಹಕ ಎನ್ನುತ್ತಾರೆ ನಿರ್ಮಾಪಕರು. ಖಳನಾಯಕನ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಅಜಯ್, ಸುಮನ್ ಮತ್ತು ಅಮಿತ್ ನಟಿಸಿದ್ದಾರೆ. ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಸ್ವಂತ ಬ್ಯಾನರ್ ತೂಗುದೀಪ ಪ್ರೊಡಕ್ಷನ್ ನಲ್ಲಿ ನಿರ್ಮಿಸುತ್ತಿರುವ 'ನವಗ್ರಹ' ಚಿತ್ರವನ್ನು ಸಹೋದರ ತೂಗುದೀಪ ದಿನಕರ್ ನಿರ್ದೇಶಿಸಲಿದ್ದಾರೆ. ಕನ್ನಡ ಚಿತ್ರರಂಗದ ಏಳು ಖಳನಟರ ಮಕ್ಕಳ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದರ್ಶನ್, ವಿನೋದ ಪ್ರಭಾಕರ್, ಗಿರಿ ದಿನೇಶ್, ಸೃಜನ್ ಲೋಕೇಶ್, ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಖಳನಟರ ಮಕ್ಕಳು ಒಟ್ಟಿಗೆ ನಟಿಸುವುದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಎಂದು ಹರ್ಷ ವ್ಯಕ್ತಪಡಿಸಿದರು. ಶರ್ಮಿಳಾ ಮಾಂಡ್ರೆ ಮತ್ತು ವರ್ಷಾ ಈ ಚಿತ್ರದ ನಾಯಕಿರು ಎಂದು ದರ್ಶನ್ ಹೇಳಿದರು. ಛಾಯಾಗ್ರಾಹಕರಾಗಿ ಎ.ವಿ.ಕೃಷ್ಣಕುಮಾರ್ ಮತ್ತು ವಿ.ಹರಿಕೃಷ್ಣ ಸಂಗೀತ ನಿರ್ದೇಶಕರಾಗಿದ್ದಾರೆ ಎಂದು ತಮ್ಮ ಚಿತ್ರದ ಬಗ್ಗೆ ವಿವರಿಸಿದರು.
(ಕರ್ಟೆಸಿ: ದಟ್ಸ್ ಕನ್ನಡ)
No comments:
Post a Comment