(ಕರ್ಟೆಸಿ: ದಟ್ಸ್‌ಕನ್ನಡ)
Tuesday, May 13, 2008
ರಾಜಕೀಯ ಕುರಿತ ವಿಷ್ಣು ವರ್ಧನ್ ಅಂತರಂಗ ಬಹಿರಂಗ
ರಾಹುಲ್‌ಗಾಂಧಿಯ ವ್ಯಕ್ತಿಗತ ವಿಚಾರಗಳು ನನಗೆ ಗೊತ್ತಿಲ್ಲ. ಆದರೆ ಆತ ಭ್ರಷ್ಟ ರಾಜಕಾರಣಿ ಆಗಲಾರ ಎಂಬ ಭರವಸೆ ನನ್ನಲ್ಲಿದೆ. ನಮ್ಮ ದೇಶಕ್ಕೆ ಇಂತಹ ಯುವ ನಾಯಕರು ಬೇಕು. ಹಾಗೆಯೇ ಕೃಷ್ಣಭೈರೇಗೌಡ. ಅವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಒಳ್ಳೆಯ ವಿದ್ಯಾವಂತ. ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಅಂತಲೇ ಅಲ್ಲ ಇಂತಹ ಯುವ ನಾಯಕರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಇವರೆಲ್ಲಾ ಭ್ರಷ್ಟರಾಗದೆ ಉನ್ನತ ಮೌಲ್ಯಗಳನ್ನು ಇಟ್ಟುಕೊಂಡು ಮುಂದುವರಿಯಬೇಕು ಎನ್ನುತ್ತಾರೆ ನಟ ವಿಷ್ಣುವರ್ಧನ್.ಸಾಹಸಸಿಂಹ ವಿಷ್ಣು ವರ್ಧನ್ ದೈಹಿಕ ಹಾಗೂ ಮಾನಸಿಕವಾಗಿ ಮಾಗಿದ್ದಾರೆ. ರಾಜಕೀಯ ಕುರಿತ ಇತ್ತೀಚೆಗಿನ ಅವರ ಒಲವು ನಿಲುವು ನೋಡಿದರೆ, ಮುಂದೊಂದು ದಿನ ಅವರು ರಾಜಕೀಯ ರಂಗ ಪ್ರವೇಶಿಸುವುದು ಖಚಿತ ಎನಿಸುತ್ತದೆ. ಈ ಹಿಂದೆ ಅಂಬರೀಷ್ ಪರವಾಗಿ ವಿಷ್ಣು ಹಲವಾರು ಬಾರಿ ಪ್ರಚಾರ ಭಾಷಣ ಮಾಡಿದ್ದರು. ಈ ಬಾರಿ ಚುನಾವಣೆಗೆ ಶ್ರೀರಂಗಪಟ್ಟಣದಲ್ಲಿ ಅಂಬಿ ಕಣಕ್ಕಿಳಿದಿದ್ದಾರೆ. ಆದರೆ ಯಾಕೋ ಏನೋ ಈ ಸಲ ಅಂಬಿ ಪರ ಅಷ್ಟಾಗಿ ಪ್ರಚಾರಕ್ಕಿಳಿಯದೆ ಮಗುಮ್ಮಾಗಿ ಇದ್ದು ಬಿಟ್ಟರು ವಿಷ್ಣು.ನನ್ನ ಗೆಳೆಯ ಅಂಬಿ ಈಗಾಗಲೇ ಸಾಕಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾನೆ. ಆದರೆ ಅವನು ಇನ್ನು ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅವನಲ್ಲಿ ನಾನು ಏನೇನೋ ಕನಸು ಕಂಡಿದ್ದೀನಿ. ಅವನ್ನೆಲ್ಲಾ ನನಸು ಮಾಡುತ್ತಾನೆ ಎಂಬ ನಂಬಿಕೆ ನನಗಿದೆ. ಶ್ರೀರಂಗಪಟ್ಟಣದಲ್ಲಿ ಅಂಬಿ ಗೆದ್ದೇ ಗೆಲ್ಲುತ್ತ್ತಾನೆ. ಪ್ರಜೆಗಳ ನೋವಿಗೆ ಸ್ಪಂದಿಸಿದರೆ ಖಂಡಿತ ಆತ ಅದ್ಭುತಗಳನ್ನು ಸೃಷ್ಟಿಸಬಹುದು ಎಂದು ವಿಷ್ಣು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.ನನಗೆ ರಾಜಕೀಯ ಪ್ರವೇಶಿಸುವುದು ಇಷ್ಟವಿಲ್ಲ. ಹಾಗೆಂದು ರಾಜ್ಯದ ಬಗ್ಗೆ ರಾಜ್ಯದ ಉದ್ಧಾರದ ಕುರಿತು ನನಗೆ ಕಾಳಜಿ ಇಲ್ಲ ಎಂದಲ್ಲ. ಶಾಂತಿ ನೆಮ್ಮದಿಗೆ ಹೆಸರಾದ ಕರ್ನಾಟಕ ಒಂದು ಮಾದರಿ ರಾಜ್ಯವಾಗಬೇಕು. ಜನ ನೆಮ್ಮದಿಯಿಂದ ಬದುಕು ನಡೆಸಬೇಕು ಎಂಬ ಕನಸು ನನಗಿದೆ. ಈ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವ ಕಾಲ ಬಂದರೆ ಖಂಡಿತ ರಾಜಕೀಯಕ್ಕೆ ಧುಮುಕುತ್ತೇನೆ. ಭ್ರಷ್ಟ, ಸುಳ್ಳು-ವಂಚನೆಯ ರಾಜಕೀಯದಲ್ಲಿ ನನಗೆ ನಂಬಿಕೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ರಾಜಕೀಯಕ್ಕೆ ಬಂದು ನನ್ನ ಮೌಲ್ಯಗಳನ್ನು ಊದಿದರೆ, ಅದು ಅರಣ್ಯ ರೋದನ ಅಷ್ಟೆ ಎನ್ನುತ್ತಾರೆ ವಿಷ್ಣು.ದೇಶವನ್ನು ಉದ್ಧಾರ ಮಾಡಬೇಕಾದರೆ ರಾಜಕೀಯಕ್ಕೆ ಪ್ರವೇಶಿಸಬೇಕೆಂದೇನು ಇಲ್ಲ. ರಾಜಕೀಯದಿಂದ ದೂರವಿದ್ದೂ ಸಮಾಜದಲ್ಲಿ ಕ್ರಾಂತಿ ತರಬಹುದು. ಭ್ರಷ್ಟ ರಾಜಕಾರಣ ಇಲ್ಲದ ಭಾರತವನ್ನು ನೋಡಬೇಕು. ತಾನೊಬ್ಬ ಪ್ರಜಾಸೇವಕ ಎಂಬ ಪ್ರಮಾಣಿಕ ಕಳಕಳಿ ರಾಜಕಾರಣಿಗಳಿಗೆ ಬರಬೇಕು. ಪ್ರತಿಯೊಬ್ಬ ಪ್ರಜೆಯು ಈ ಮಣ್ಣಿನ ಋಣ ತೀರಿಸಬೇಕು. ಆಗಷ್ಟೇ ಇಡೀ ವಿಶ್ವ ನಮ್ಮ ದೇಶ, ರಾಜ್ಯದ ಕಡೆ ನೋಡುವಂತಾಗುತ್ತದೆ. ಹೀಗೆ ವಿಷ್ಣು ತಮ್ಮ ಅಂತರಂಗದಲ್ಲಿನ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
Subscribe to:
Post Comments (Atom)
No comments:
Post a Comment