(ಕರ್ಟೆಸಿ: ದಟ್ಸ್ ಕನ್ನಡ)
Monday, May 26, 2008
ಜಗ್ಗೇಶ್, ಬಿ ಸಿ ಪಾಟೀಲ್ ವಿನ್.. ಅದರ್ಸ್ ಲಾಸ್ ...!?
ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಣ್ಣದ ಲೋಕದ ಥಳಕುಬಳುಕಿಗೆ ಮರುಳಾಗಿಲ್ಲ। ವರ್ಚಸ್ಸು, ಚರಿಷ್ಮಾ, ಸ್ಟಾರ್ಗಿರಿ, ನಾಟಕದ ಮಾತು, ತೋರಿಕೆಯ ಭರವಸೆಗಳನ್ನೆಲ್ಲ ಬದಿಗಿಟ್ಟು ಕಣಕ್ಕಿಳಿದಿದ್ದ ಸಿನೆಮಾ ತಾರೆಗಳನ್ನೆಲ್ಲ ನಿವಾಳಿಸಿ ಎಸೆದಿದ್ದಾರೆ, ಸೋಲಿನ ಮಳೆ ಸುರಿಸಿದ್ದಾರೆ।ಪ್ರಥಮ ಬಾರಿಗೆ ತೇರದಾಳದಿಂದ ಉಮಾಶ್ರೀ, ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದ ಅಂಬರೀಷ್ ಶ್ರೀರಂಗಪಟ್ಟಣದಿಂದ, ಬಂಡಾಯದ ಬಸಿ ಎಬ್ಬಿಸಿ ಟಿಕೀಟು ಗಿಟ್ಟಿಸಿಕೊಂಡಿದ್ದ ಜಗ್ಗೇಶ್ ತುರುವೇಕೆರೆಯಿಂದ, ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದ 'ಕೌರವ' ಬಿಸಿ ಪಾಟೀಲ್, ಅತ್ತ ಪೂರ್ಣ ಪ್ರಮಾಣದ ನಟನೂ ಆಗದ ರಾಜಕಾರಣಿಯೂ ಆಗದ ಸಿಪಿ ಯೋಗೇಶ್ವರ್ ಚನ್ನಪಟ್ಟಣದಿಂದ, ರಾಜಕಾರಣಿಯಾದಾಗಿನಿಂದ ಕ್ಷೇತ್ರದತ್ತ ತಲೆಯನ್ನೇ ಹಾಕದ ಶಶಿಕುಮಾರ್ ಚಳ್ಳಕೆರೆಯಿಂದ, ಸಿನೆಮಾರಂಗದಲ್ಲಿ ಕೆಲಸವಿಲ್ಲದೆ ರಿಟೈರಾಗಿದ್ದ ನಿರ್ದೇಶಕ ಮಹೇಂದರ್, ಮುಂಗಾರು ಮಳೆಯಿಂದ ಚಿತ್ರರಂಗಕ್ಕೆ ಗೆಲುವಿನ ಮಳೆ ಸುರಿಸಿದ್ದ ಇ। ಕೃಷ್ಣಪ್ಪ ಯಲಹಂಕದಿಂದ, ನಿರ್ಮಾಪಕ ಸಂದೇಶ ನಾಗರಾಜ್ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾಶ್ರೀ ಎಂಬ ನಟಿಯೊಬ್ಬರು ಈ ಬಾರಿ ವಿಧಾನಸೌಧ ಹತ್ತುವ ಉಮ್ಮೇದಿಯಿಂದ ಮತದಾರರತ್ತ ಕೈಯೊಡ್ಡಿದ್ದರು।ಇವರಲ್ಲಿ ತುರುವೇಕೆರೆಯಿಂದ ಜಗ್ಗೇಶ್ ಮತ್ತು ಹಿರೇಕೇರೂರಿನಿಂದ ಸ್ಪರ್ಧಿಸಿದ್ದ ಬಿಸಿ ಪಾಟೀಲ್ ಅವರಿಬ್ಬರನ್ನು ಬಿಟ್ಟು ಉಳಿದೆಲ್ಲರಿಗೂ ಜಾಣ ಮತದಾರರು ಕೈ ತೋರಿಸಿದ್ದಾರೆ। ರಂಗುರಂಗಿನ ಮಾತುಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ, ಚಿತ್ರರಂಗದ ಯಶಸ್ಸು ರಾಜಕೀಯ ದ್ವಾರ ಬಡಿಯಲು ಮಾನದಂಡವಲ್ಲವೆಂದು ಕ್ಷೇತ್ರಕ್ಕೇ ಬಾರದ ಶಾಸಕರಿಗೆ, ಮಾಜಿ ಸಂಸದರಿಗೆ, ಮಾಜಿ ನಟನಟಿಯರಿಗೆ ಮತದಾರರು ಬರೋಬ್ಬರಿ ಚಳ್ಳೆಹಣ್ಣು ತಿನ್ನಿಸಿದ್ದಾರೆ.ಟಿಕೆಟ್ ಸಿಗದೇ ಕಂಗಾಲಾಗಿ ಬಂಡಾಯದ ಬಾವುಟ ಹಾರಿಸಿದ್ದ ಜಗ್ಗೇಶ್ ಮಾತ್ರ ನಿರೀಕ್ಷಿತವೋ ಅನಿರೀಕ್ಷಿತವೋ ಅಂತೂ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಅಷ್ಟೋ ಇಷ್ಟೋ ಕೆಲಸ ಮಾಡಿದ್ದು ಅವರ ಸಹಾಯಕ್ಕೆ ಬಂದಿದೆ. ಚಿತ್ರರಂಗದಲ್ಲಿ ಕೆಲಸ ಕಡಿಮೆಯಿದ್ದಾಗ ಜನರ ಹಿತಕ್ಕಾಗಿಯೂ ಕೆಲಸ ಮಾಡಿದ್ದಕ್ಕೆ ಮತದಾರರು ಅವರ ಕೈಬಿಟ್ಟಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ರಚಿಸುವ ಯಾವ ಸಾಧ್ಯತೆಯೂ ಇಲ್ಲದ್ದರಿಂದ ಜನಸೇವೆಯನ್ನು ಸದ್ಯಕ್ಕೆ ಬದಿಗಿಟ್ಟು ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಳ್ಳುತ್ತಾರೋ ನೋಡಬೇಕು. ಬಿಸಿ ಪಾಟೀಲ್ ಗೆಲ್ಲಿಸಿದ್ದಕ್ಕಾಗಿ ಮತದಾರರಿಗೆ ವಿಶೇಷ 'ಥ್ಯಾಂಕ್ಸ್' ಹೇಳಬೇಕು. ಚನ್ನಪಟ್ಟಣ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಸೈನಿಕ ಖ್ಯಾತಿಯ ಸಿ.ಪಿ. ಯೋಗೀಶ್ವರ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.ಆದರೆ ಇದೇ ಮಾತನ್ನು ಉಳಿದವರಿಗೆ ಹೇಳಲಾಗುವುದಿಲ್ಲ. ಸಂಸದರಾಗಿದ್ದಾಗ ಅಂಬರೀಷ್ ಕ್ಷೇತ್ರದ ಉದ್ಧಾರಕ್ಕಾಗಿ ಕೆಲಸ ಮಾಡಿದ್ದೂ ಅಷ್ಟಕ್ಕಷ್ಟೇ. ಮೊದಲ ಪಟ್ಟಿಯಲ್ಲಿ ಟಿಕೀಟು ಸಿಗದಿದ್ದರೂ ತಾರಾವರ್ಚಸ್ಸಿನಿಂದ ಟಿಕೀಟು ಗಿಟ್ಟಿಸಿದ್ದ ಅಂಬಿ ಈಗ ಶ್ರೀರಂಗಪಟ್ಟಣದಿಂದ ಕಂಬಿ ಕೀಳುವಂತೆ ಮಾಡಿದ್ದಾರೆ ಜನತೆ. ತಮಿಳುನಾಡು ಹೊಗೇನಕಲ್ ಯೋಜನೆಗೆ ಸಂಬಂಧಿಸಿದಂತೆ ಕ್ಯಾತೆ ತೆಗೆದಿದ್ದಾಗ ಜನರ ಕಷ್ಟಕ್ಕೆ ಧಾವಿಸದಿದ್ದುದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಅವರು ಇನ್ನೆಂದು ಮೇಲೇಳಲಿಕ್ಕಿಲ್ಲ.ಚಿತ್ರದಲ್ಲಿ ಮಾತಿನ ಮೋಡಿಯಿಂದ ಚಿತ್ರರಸಿಕರ ಮನಗೆದ್ದಿದ್ದ ಉಮಾಶ್ರೀ ಉತ್ತರ ಕರ್ನಾಟಕದ ಜನತೆಯ ಮತವನ್ನು ಗೆಲ್ಲಲು ಸೋತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ನಾಟಕಗಳನ್ನು ಪ್ರದರ್ಶಿಸಿ, ಅಲ್ಲಿನ ಭಾಷೆಯನ್ನು ಕರಗತ ಮಾಡಿಕೊಂಡಿದ್ದರೂ ಇದ್ಯಾವುದೂ ಅಲ್ಲಿ ಕೆಲಸಕ್ಕೆ ಬಂದಿಲ್ಲ. ಉಮಾಶ್ರೀಯಾಗಲಿ ಹೇಮಾಶ್ರೀಯಾಗಲಿ ಜಯಶ್ರೀ ಮುಡಿಗೇರಲು ಅನುಭವ, ವರ್ಚಸ್ಸು ಬೇಕೆಂದು ಮತದಾರ ಮನದಟ್ಟು ಮಾಡಿಕೊಟ್ಟಿದ್ದಾನೆ.ಬಾಗೇಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡೈಲಾಗ್ ಕಿಂಗ್ ಸಾಯಿಕುಮಾರ್ ಮಾತಾಡದಂತೆ ಮತದಾರರು ಮಾಡಿದ್ದಾರೆ. ಸಿನಿಮಾ ನಂಟು ಹೊಂದಿರುವ ಬಂಗಾರಪ್ಪನವರ ಪುತ್ರರಾದ ಕುಮಾರ್ ಹಾಗೂ ಮಧು ನೆಲಕಚ್ಚಿದ್ದಾರೆ. ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೇಮಾಶ್ರೀ, ಸಂದೇಶ್ ನಾಗರಾಜ್, ಮಹೇಂದರ್ ಇವರಿಗೆ ಸ್ವಂತಃ ಗೆಲ್ಲುವ ಭರವಸೆಯಿರಲಿಲ್ಲ. ಮುಂಗಾರು ಮಳೆಯ ಯಶಸ್ಸನ್ನು ಕ್ಯಾಷ್ ಮಾಡೋಣವೆಂದು ಕಣಕ್ಕಿಳಿದಿದ್ದ ಇ.ಕೃಷ್ಣಪ್ಪಗೆ ಮಾತ್ರ ಸೋಲು ಅನಿರೀಕ್ಷಿತ.
Thursday, May 22, 2008
ದೇವರಾಜ್ ಪೌರಾಣಿಕ ಡಿಜಿಟಲ್ ಚಿತ್ರ "ಪ್ರಚಂಡ ರಾವಣ"
ವಜ್ರಮುನಿ ಅವರಿಗೆ ಕೀರ್ತಿತಂದ'ರಾವಣ'ನ ಪಾತ್ರ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ। ಜನರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂಬ ನಂಬಿಕೆ ನನಗೆ ಇದೆ। ಚಿತ್ರ ಚೆನ್ನಾಗಿ ಬಂದಿದೆ ಎಂದು ಡೈನಾಮಿಕ್ ಹೀರೊ ದೇವರಾಜ್ ಸುದ್ದ್ದಿಗಾರರಿಗೆ ಹೇಳಿದರು। ಪ್ರಚಂಡ ರಾವಣ ಚಿತ್ರ ಈವಾರ ರಾಜ್ಯದಲ್ಲಿ ತೆರೆಕಾಣಲು ಸಿದ್ಧವಾಗಿದೆ।ಪೌರಾಣಿಕ ಚಿತ್ರಕ್ಕೆ ಡಿಜಿಟಲ್ ಸ್ಪರ್ಶನೀಡಲಾಗಿದೆ. ವಸ್ತ್ರವಿನ್ಯಾಸ, ಸೆಟ್ಟಿಂಗ್ ನಲ್ಲೂ ವಿಶೇಷ ಗಮನಹರಿಸಿ ಚಿತ್ರವನ್ನು ತೆಗೆದಿದ್ದೇವೆ. ಜನರಿಗೆ ಚಿತ್ರ ಮೆಚ್ಚುಗೆಯಾಗಲಿದೆ ಎಂಬ ಆಶಾವಾದವನ್ನು ನಿರ್ದೇಶಕ ಪ್ರಸಾದ್ ವ್ಯಕ್ತಪಡಿಸಿದರು. ನಟಿ ರಾಜೇಶ್ವರಿ, ನಿರ್ಮಾಪಕರಾದ ಲೋಕೇಶ್ ಹಾಗೂ ಗಿರೀಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.ನನ್ನ ಗುರು ಉದಯ್ ಕುಮಾರ್ ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಮಾಡಿದ ಆಂಜನೇಯನ ಪಾತ್ರವೇ ನನಗೆ ಸ್ಫೂರ್ತಿಎಂದ ಭರತ್ ಭಾಗವತರ್, ವಿಶೇಷವಾಗಿ ಮಕ್ಕಳಿಗೆ ಆಂಜನೇಯನ ಪಾತ್ರ ಇಷ್ಟವಾಗಲಿದೆ ಎಂದರು.ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರು ಸೃಷ್ಟಿಸಿದ "ಪ್ರಚಂಡರಾವಣ" ಕೃತಿ. ನಾಟಕ ರೂಪ ತಾಳಿ, ನಟ ವಜ್ರಮುನಿ ಅವರಿಗೆ ಅಪಾರ ಯಶಸ್ಸು, ಕೀರ್ತಿಯನ್ನು ತಂದುಕೊಟ್ಟಿತ್ತು.ಈಗಾಗಲೇ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಪಡೆದ ಈ ಅಮೋಘ ದೃಶ್ಯ ವೈಭವವನ್ನು ಪುನಃ ತೆರೆಗೆ ತರುವುದು ಸಾಹಸವೇ ಸೈ. ಬಹುಶಃ ವಜ್ರಮುನಿ ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ ನಾನು ಈ ಪಾತ್ರ ನಿರ್ವಹಿಸಲು ಹಿಂಜರಿಯುತ್ತಿದ್ದೆ. ಆದರೆ ಅಭಿಮಾನಿಗಳ ಆಯ್ಕೆ ನನ್ನ ಕಡೆಗೆ ಸೂಚಿತವಾದದ್ದು ನನ್ನ ಪುಣ್ಯ.(ಎಸ್ ಎಂಎಸ್ ಮೂಲಕ ರಾವಣ ಪಾತ್ರಧಾರಿಯ ಆಯ್ಕೆ ನಡೆದಿದ್ದು ವಿಶೇಷ) ನಿರ್ದೇಶಕ ಪ್ರಸಾದ್ ಹಾಗೂ ಪ್ರಚಂಡ ರಾವಣ ಚಿತ್ರ ತಂಡದ ನಿರಂತರ ಬೆಂಬಲದಿಂದ ನಾನು ಈ ಪಾತ್ರ ಮಾಡಲು ಸಾಧ್ಯವಾಯಿತು ಎಂದು ಪ್ರಾಂಜಲ ಮನಸ್ಸಿನಿಂದ ದೇವರಾಜ್ ಹೇಳಿದರು.
Monday, May 19, 2008
ಸಂಡಲ್ ವುಡ್ ನಲ್ಲಿ ಬಾಲಿವುಡ್ ಅತಿಥಿಗಳು...!?
ಬಾಲಿವುಡ್ ನಟರಾದ ನಾನಾ ಪಾಟೇಕರ್ ಅಥವಾ ಸುನಿಲ್ ಶೆಟ್ಟಿ ಇವರಿಬ್ಬರಲ್ಲಿ ಒಬ್ಬರು ಕನ್ನಡದ 'ನೀನೇ ಎಲ್ಲಾ' ಚಿತ್ರದಲ್ಲಿ ನಟಿಸಲಿದ್ದಾರೆ। ಐದು ನಿಮಿಷಗಳ ಕಾಲಾವಧಿಯ ಅತಿಥಿ ಪಾತ್ರದ ಕಾಣಿಸಲಿದ್ದಾರೆ। ಚಿತ್ರದಲ್ಲಿನ ಡಿಶುಂ ಡಿಶುಂ, ಹಾಡು ಅಥವಾ ಯಾವುದಾದರೂ ಒಂದು ಸನ್ನಿವೇಶದಲ್ಲಿ ಹಾಗೆ ಬಂದು ಹೀಗೆ ಹೋಗಲಿದ್ದಾರೆ.'ನೀನೇ ಎಲ್ಲಾ' ಚಿತ್ರದ ನಿರ್ದೇಶಕ ಸಚಿನ್ ಬಾಲಿವುಡ್ನಲ್ಲಿ ಲಾರೆನ್ಸ್ ಡಿಸೋಜಾ, ವಿಕ್ರಂ ಭಟ್, ಬಿ.ಆರ್.ಇಷಾರಾ, ದಿನೇಶ್ ದುಬೆ ಹಾಗೂ ಮಹಮದ್ ಆಲಿ ಸೇರಿದಂತೆ ಮುಂತಾದವರ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಹಾಗಾಗಿ ಬಾಲಿವುಡ್ನ ಖ್ಯಾತ ನಾಮರನ್ನು ಕನ್ನಡಕ್ಕೆ ಕರೆತರುವ ಇರಾದೆ ಸಹಜವಾಗಿ ಸಚಿನ್ ಅವರಿಗಿದೆ. ಬಾಲಾಜಿ ಟಿವಿ ತಂಡದಲ್ಲಿ ಮೂರು ವರ್ಷಗಳ ಕಾಲ ಚಿತ್ರಕಥೆಗಳ ಮೇಲ್ವಿಚಾರಕರಾಗಿ ಕೆಲಸ ಮಾಡಿದ ಅನುಭವ ಇದೆ. ಅನಿವಾಸಿ ಕನ್ನಡಿಗರಾದ ಜಾಯ್ ಮತ್ತು ರೋಹನ್ ಪ್ರದೀಪ್ 'ನೀನೆ ಎಲ್ಲಾ' ಚಿತ್ರಕ್ಕೆ ನಿರ್ಮಾಣದ ಜವಾಬ್ದಾರಿಯನ್ನು ಎಲ್ಲಾ ಅವರೇ ಹೊತ್ತಿದ್ದಾರೆ. ತಮ್ಮ ಗೆಳೆಯನೊಬ್ಬನ ನಿಜ ಜೀವನದ ಕಥೆಯನ್ನು ಆಧರಿಸಿ ನಿರ್ದೇಶಕ ಸಚಿನ್ ಚಿತ್ರಕಥೆ ರೂಪಿಸಿದ್ದರಂತೆ. ನೀನೇ ಎಲ್ಲಾ ಸಚಿನ್ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ. ಹಾಗೆಯೇ ಚಿತ್ರದ ಮುಖ್ಯ ಭೂಮಿಕೆಯಲ್ಲಿನ ಭರತ್ ಮತ್ತು ಅಮೃತಾ ಅವರಿಗೂ ಇದು ಮೊದಲ ಚಿತ್ರ.ನೀಲಾ ಅವರ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಗುರುಪ್ರಸಾದ್ ಛಾಯಾಗ್ರಹಣವಿದೆ. ರವೀಂದ್ರ ಹಾಗೂ ತಬಲಾ ನಾಣಿ ಸಂಭಾಷಣೆ ಇದೆ. ಚಿತ್ರೀಕರಣ ಜುಲೈ 15ರಿಂದ ಪ್ರಾರಂಭವಾಗಲಿದೆ. ಚಿತ್ರದ ಧ್ವನಿ ಸುರುಳಿ ಹಾಗೂ ಸಿಡಿಗಳು ಅಕ್ಟೋಬರ್ 20 ರಂದು ಬಿಡುಗಡೆ ಕಾಣಲಿವೆ. ನವಂಬರ್ 13 ರಂದು ಯುಕೆಯಲ್ಲಿ ವಿಶೇಷ ಪ್ರದರ್ಶನ ಕಂಡು ನವೆಂಬರ್ 21ರಂದು ಎಲ್ಲಾ ಕಡೆ ಚಿತ್ರ ಬಿಡುಗಡೆಯಾಗಲಿದೆ.
(ಕರ್ಟೆಸಿ: ದಟ್ಸ್ಕನ್ನಡ)
Wednesday, May 14, 2008
ಬೆಂಗಳೂರ್ ಸಿನಿಮಾನಲ್ಲಿ ಆಂದ್ರಿತಾ ರಾಯ್ ಪ್ರವೇಶ
ರೂಪದರ್ಶಿ ಕಮ್ ನಟಿಯಾದ ಈಕೆಗೆ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಸಾಲುಸಾಲಾಗಿ ಚಿತ್ರಗಳ ಆಫರ್ ಹುಡುಕಿಕೊಂಡು ಬಂದಿವೆ.ಬೆಂಗಳೂರು ಮೂಲದ ಈ ಹುಡುಗಿಗೆ ಹರಕು ಮುರುಕಿನ ಕನ್ನಡ ಮಾತಾಡಿ ಅಭ್ಯಾಸ ಇದೆ. ಕನ್ನಡಭಾಷೆ ಕಲಿಯುವ ಉತ್ಸಾಹವಿದೆ.ಪ್ರಜ್ವಲ್ ದೇವರಾಜ್ ಜತೆಗಿನ 'ಮೆರವಣಿಗೆ'ಚಿತ್ರಕ್ಕೆ ಆಯ್ಕೆಯಾದ ನಂತರ ಈಕೆಗೆ ಅದೃಷ್ಟ ಖುಲಾಯಿಸಿದೆ. ಸುಮಾರು ನಾಲ್ಕಾರು ಚಿತ್ರಗಳಿಗೆ ಬುಕ್ ಆಗಿದ್ದಾರೆ. ವಿಷ್ಯ ಅಂದ್ರೆ ಮೆರವಣಿಗೆ ಇನ್ನೂ ತೆರೆ ಕಂಡಿಲ್ಲ. ಮೇ ಅಂತ್ಯಕ್ಕೆ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ. ಪ್ರಜ್ವಲ್ ಜತೆಗೆ "ನನ್ನವನು' ಎಂಬ ಇನ್ನೊಂದು ಚಿತ್ರಕ್ಕೆ ಆಗಲೇ ಸಹಿ ಹಾಕಿರುವ ಆಂದ್ರಿತಾಗೆ ಇನ್ನೆರಡು ಚಿತ್ರಗಳು ಕಾದಿವೆ.ನೆನಪಿರಲಿ ಪ್ರೇಮ್ ನಾಯಕತ್ವದ 'ಜನುಮ ಜನುಮದಲ್ಲೋ' ಚಿತ್ರಕ್ಕೆ ಕೂಡ ಈಕೆಯೇ ನಾಯಕಿ, ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಬ್ಯಾನರ್ ನಲ್ಲಿ ತಯಾರಾಗುತ್ತಿರುವ 'ವಾಯುಪುತ್ರ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜತೆಗೆ ನಟಿಸಲಿದ್ದಾರೆ. ಈ ಚಿತ್ರವನ್ನು ಕಿಶೋರ್ ಸರ್ಜಾ ನಿರ್ದೇಶಿಸಲಿದ್ದಾರೆ. ಈ ಚಿತ್ರ ತೆಲುಗಿಗೂ ಡಬ್ ಆಗುವ ಸಾಧ್ಯತೆಗಳಿವೆ. ಕನ್ನಡ ಚಿತ್ರಗಳ ಜತೆಗೆ ಈಕೆ ಚಂದ್ರ ಮಹೇಶ್ ನಿರ್ದೇಶನದ ತೆಲುಗು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.ಪ್ರಜ್ವಲ್ ಅವರೊಡನೆ ಎರಡನೇ ಚಿತ್ರದಲ್ಲಿ ಕೆಲಸ ಮಾಡಲು ಖುಷಿಯಾಗುತ್ತದೆ.ನಾನು ಸ್ವಲ್ಪ ವಾಚಾಳಿ, ಪ್ರಜ್ವಲ್ ಕೂಡ ಮಾತಾಡುತ್ತಿದ್ದರೆ ಹೊತ್ತು ಹೋಗುವುದು ಗೊತ್ತಾಗುವುದಿಲ್ಲ. ಆದ್ರೆ ಕೆಲಸದ ವಿಷ್ಯದಲ್ಲಿ ತುಂಬಾ ಶ್ರದ್ಧೆವಹಿಸಿ ನಿರ್ದೇಶಕರ ಅಗತ್ಯಕ್ಕೆ ತಕ್ಕಂತೆ ನಟಿಸುತ್ತಿರುವೆ. ಮೆರವಣಿಗೆಯಲ್ಲಿ ನಗರ ಭಾಗಕ್ಕಿಂತ ಕಾಡುಮೇಡುಗಳಲ್ಲಿ ಚಿತ್ರೀಕರಣ ಹೆಚ್ಚಾಗಿತ್ತು. 'ನನ್ನವನು' ಚಿತ್ರ ಹೆಚ್ಚಾಗಿ ಬೆಂಗಳೂರಿನಲ್ಲಿ ನಡೆದಿದೆ. ಹಾಡುಗಳ ಶೂಟಿಂಗ್ ವಿದೇಶದಲ್ಲಿ ಆಗಬಹುದು. ಪ್ರಜ್ವಲ್ ಜೊತೆ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ನಿರೀಕ್ಷೆಯಿದೆ. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ನಟಿಸುವ ಬಯಕೆಯಿದೆ ಎನ್ನುತ್ತಾರೆ 'ನನ್ನವನು' ಚಿತ್ರದಶೂಟಿಂಗ್ ನಲ್ಲಿದ್ದ ಆಂದ್ರಿತಾ .
(ಕರ್ಟೆಸಿ: ದಟ್ಸ್ ಕನ್ನಡ)
Tuesday, May 13, 2008
ರಾಜಕೀಯ ಕುರಿತ ವಿಷ್ಣು ವರ್ಧನ್ ಅಂತರಂಗ ಬಹಿರಂಗ
ರಾಹುಲ್ಗಾಂಧಿಯ ವ್ಯಕ್ತಿಗತ ವಿಚಾರಗಳು ನನಗೆ ಗೊತ್ತಿಲ್ಲ. ಆದರೆ ಆತ ಭ್ರಷ್ಟ ರಾಜಕಾರಣಿ ಆಗಲಾರ ಎಂಬ ಭರವಸೆ ನನ್ನಲ್ಲಿದೆ. ನಮ್ಮ ದೇಶಕ್ಕೆ ಇಂತಹ ಯುವ ನಾಯಕರು ಬೇಕು. ಹಾಗೆಯೇ ಕೃಷ್ಣಭೈರೇಗೌಡ. ಅವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಒಳ್ಳೆಯ ವಿದ್ಯಾವಂತ. ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಅಂತಲೇ ಅಲ್ಲ ಇಂತಹ ಯುವ ನಾಯಕರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಇವರೆಲ್ಲಾ ಭ್ರಷ್ಟರಾಗದೆ ಉನ್ನತ ಮೌಲ್ಯಗಳನ್ನು ಇಟ್ಟುಕೊಂಡು ಮುಂದುವರಿಯಬೇಕು ಎನ್ನುತ್ತಾರೆ ನಟ ವಿಷ್ಣುವರ್ಧನ್.ಸಾಹಸಸಿಂಹ ವಿಷ್ಣು ವರ್ಧನ್ ದೈಹಿಕ ಹಾಗೂ ಮಾನಸಿಕವಾಗಿ ಮಾಗಿದ್ದಾರೆ. ರಾಜಕೀಯ ಕುರಿತ ಇತ್ತೀಚೆಗಿನ ಅವರ ಒಲವು ನಿಲುವು ನೋಡಿದರೆ, ಮುಂದೊಂದು ದಿನ ಅವರು ರಾಜಕೀಯ ರಂಗ ಪ್ರವೇಶಿಸುವುದು ಖಚಿತ ಎನಿಸುತ್ತದೆ. ಈ ಹಿಂದೆ ಅಂಬರೀಷ್ ಪರವಾಗಿ ವಿಷ್ಣು ಹಲವಾರು ಬಾರಿ ಪ್ರಚಾರ ಭಾಷಣ ಮಾಡಿದ್ದರು. ಈ ಬಾರಿ ಚುನಾವಣೆಗೆ ಶ್ರೀರಂಗಪಟ್ಟಣದಲ್ಲಿ ಅಂಬಿ ಕಣಕ್ಕಿಳಿದಿದ್ದಾರೆ. ಆದರೆ ಯಾಕೋ ಏನೋ ಈ ಸಲ ಅಂಬಿ ಪರ ಅಷ್ಟಾಗಿ ಪ್ರಚಾರಕ್ಕಿಳಿಯದೆ ಮಗುಮ್ಮಾಗಿ ಇದ್ದು ಬಿಟ್ಟರು ವಿಷ್ಣು.ನನ್ನ ಗೆಳೆಯ ಅಂಬಿ ಈಗಾಗಲೇ ಸಾಕಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾನೆ. ಆದರೆ ಅವನು ಇನ್ನು ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅವನಲ್ಲಿ ನಾನು ಏನೇನೋ ಕನಸು ಕಂಡಿದ್ದೀನಿ. ಅವನ್ನೆಲ್ಲಾ ನನಸು ಮಾಡುತ್ತಾನೆ ಎಂಬ ನಂಬಿಕೆ ನನಗಿದೆ. ಶ್ರೀರಂಗಪಟ್ಟಣದಲ್ಲಿ ಅಂಬಿ ಗೆದ್ದೇ ಗೆಲ್ಲುತ್ತ್ತಾನೆ. ಪ್ರಜೆಗಳ ನೋವಿಗೆ ಸ್ಪಂದಿಸಿದರೆ ಖಂಡಿತ ಆತ ಅದ್ಭುತಗಳನ್ನು ಸೃಷ್ಟಿಸಬಹುದು ಎಂದು ವಿಷ್ಣು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.ನನಗೆ ರಾಜಕೀಯ ಪ್ರವೇಶಿಸುವುದು ಇಷ್ಟವಿಲ್ಲ. ಹಾಗೆಂದು ರಾಜ್ಯದ ಬಗ್ಗೆ ರಾಜ್ಯದ ಉದ್ಧಾರದ ಕುರಿತು ನನಗೆ ಕಾಳಜಿ ಇಲ್ಲ ಎಂದಲ್ಲ. ಶಾಂತಿ ನೆಮ್ಮದಿಗೆ ಹೆಸರಾದ ಕರ್ನಾಟಕ ಒಂದು ಮಾದರಿ ರಾಜ್ಯವಾಗಬೇಕು. ಜನ ನೆಮ್ಮದಿಯಿಂದ ಬದುಕು ನಡೆಸಬೇಕು ಎಂಬ ಕನಸು ನನಗಿದೆ. ಈ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವ ಕಾಲ ಬಂದರೆ ಖಂಡಿತ ರಾಜಕೀಯಕ್ಕೆ ಧುಮುಕುತ್ತೇನೆ. ಭ್ರಷ್ಟ, ಸುಳ್ಳು-ವಂಚನೆಯ ರಾಜಕೀಯದಲ್ಲಿ ನನಗೆ ನಂಬಿಕೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ರಾಜಕೀಯಕ್ಕೆ ಬಂದು ನನ್ನ ಮೌಲ್ಯಗಳನ್ನು ಊದಿದರೆ, ಅದು ಅರಣ್ಯ ರೋದನ ಅಷ್ಟೆ ಎನ್ನುತ್ತಾರೆ ವಿಷ್ಣು.ದೇಶವನ್ನು ಉದ್ಧಾರ ಮಾಡಬೇಕಾದರೆ ರಾಜಕೀಯಕ್ಕೆ ಪ್ರವೇಶಿಸಬೇಕೆಂದೇನು ಇಲ್ಲ. ರಾಜಕೀಯದಿಂದ ದೂರವಿದ್ದೂ ಸಮಾಜದಲ್ಲಿ ಕ್ರಾಂತಿ ತರಬಹುದು. ಭ್ರಷ್ಟ ರಾಜಕಾರಣ ಇಲ್ಲದ ಭಾರತವನ್ನು ನೋಡಬೇಕು. ತಾನೊಬ್ಬ ಪ್ರಜಾಸೇವಕ ಎಂಬ ಪ್ರಮಾಣಿಕ ಕಳಕಳಿ ರಾಜಕಾರಣಿಗಳಿಗೆ ಬರಬೇಕು. ಪ್ರತಿಯೊಬ್ಬ ಪ್ರಜೆಯು ಈ ಮಣ್ಣಿನ ಋಣ ತೀರಿಸಬೇಕು. ಆಗಷ್ಟೇ ಇಡೀ ವಿಶ್ವ ನಮ್ಮ ದೇಶ, ರಾಜ್ಯದ ಕಡೆ ನೋಡುವಂತಾಗುತ್ತದೆ. ಹೀಗೆ ವಿಷ್ಣು ತಮ್ಮ ಅಂತರಂಗದಲ್ಲಿನ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
(ಕರ್ಟೆಸಿ: ದಟ್ಸ್ಕನ್ನಡ)
Friday, May 9, 2008
ಕನ್ನಡದಲ್ಲಿ ಅನಿಮೇಷನ್ ಘಟೋತ್ಕಚ
'ಮಾಯಾಬಜಾರ್'ನ ಒಂದು ಪ್ರಸಿದ್ಧ ಪಾತ್ರ ಘಟೋತ್ಕಚ. ಅವನ ಪಂಚಭಕ್ಷ್ಯಪರಮಾನ್ನಗಳನ್ನು ಕುರಿತು ಹೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ. ಈಗ ಘಟೋತ್ಕಚನನ್ನು ಕಣ್ಣರಳಿಸಿ ನೋಡಲು ಚಿತ್ರಮಂದಿರಗಳಿಗೆ ಲಗ್ಗೆ ಹಾಕಬೇಕಾಗಿದೆ. ಕಂಪ್ಯೂಟರ್ ಅನಿಮೇಷನಲ್ಲಿ ಆ ಪಾತ್ರ ಈಗ ಬೆಳ್ಳಿ ಪರದೆಗೆ ಅಡಿ ಇಡಲಿದೆ. ಸೂರ್ಯದೇವರ ವಿನೋದ್ ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ತೆಲುಗು,ತಮಿಳು, ಮಲೆಯಾಳಂ ಮತ್ತು ಬಂಗಾಳಿ) ಚಿತ್ರಮಂದಿರಗಳಿಗೆ ದಾಂಗುಡಿ ಇಡಲಿದೆ.ನಾವು ಘಟೋತ್ಕಚನ 5 ವರ್ಷಗಳ ಬಾಲ್ಯ ಜೀವನ ಹಾಗೂ ಯೌವ್ವನದ ಸಾಹಸಗಾಥೆಗಳನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಒಂದಿಲ್ಲ ಒಂದು ಕಾರಣಕ್ಕ್ಕೆ ಘಟೋತ್ಕಚನನ್ನು ಎಲ್ಲರೂ ಇಷ್ಟಪಡುತ್ತಾರೆ ಎನ್ನುತ್ತಾರೆ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್. ಇದು ಅವರ ಎರಡನೇ ಅನಿಮೇಷನ್ ಚಿತ್ರ. ಇದಕ್ಕೂ ಮೊದಲು ಅಲ್ಲಾವುದ್ದೀನನ್ನು ಅನಿಮೇಟ್ ಮಾಡಿದ್ದರು. ಕಲಾವಿದರಿಗೆ ನಿರ್ದೇಶನ ಮಾಡುವುದು ಕಷ್ಟ. ನಾವು ಒಂದು ಹೇಳಿದರೆ ಅವರೊಂದು ಮಾಡಿ ತೋರಿಸುತ್ತಾರೆ. ಆದರೆ ಅನಿಮೇಷನ್ ಚಿತ್ರಗಳು ಹಾಗಲ್ಲ. ನಮಗೆ ಒಪ್ಪುವಂತೆ ಪಾತ್ರಗಳನ್ನ್ನು ತೆರೆಯ ಮೇಲೆ ತೋರಿಸಬಹುದು. ಇವು ಒಂದು ರೀತಿ ಖುಷಿ ಕೊಡುತ್ತವೆ ಎನ್ನುತ್ತಾರೆ ಸಿಂಗೀತಂ.ಈ ಬೇಸಿಗೆಯಲ್ಲಿ ಮಕ್ಕಳು ಹಾಗೂ ಮನೆಮಂದಿಗೆ ಘಟೋತ್ಕಜ ಉತ್ತಮ ಮನರಂಜನೆ ನೀಡಲಿದ್ದಾನೆ. ಚಿತ್ರದ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಿದ್ದ ನಿರ್ಮಾಪಕರು, ಚಿತ್ರೀಕರಣಕ್ಕಾಗಿ 35 ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಅನಿಮೇಷನ್ ಚಿತ್ರ ತಯಾರಾಗುತ್ತಿದೆ ಎನ್ನುತ್ತಾರೆ.ಮೇ 23ರಂದು ಘಟೋತ್ಕಚ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಸನ್ ಅನಿಮ್ಯಾಟಿಕ್ಸ್ ಬ್ಯಾನರ್ನಡಿ ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆಯನ್ನು ಸಿಂಗೀತಂ ಶ್ರೀನಿವಾಸರಾವ್ ಹೊತ್ತಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ದಲೇರ್ ಮೆಹಂದಿ, ಶ್ರೇಯಾ ಘೋಷಾಲ್, ಸುದೇಶ್ ಭೋಂಸ್ಲೆ, ಶಾನ್ ಮತ್ತಿತ್ತರ ಗಾಯಕರು ಘಟೋತ್ಕಚನಿಗೆ ಡಬ್ಬಿಂಗ್ ಮಾಡಿದ್ದಾರೆ.ಒಟ್ಟಿನಲ್ಲಿ ಅನಿಮೇಷನ್ ಚಿತ್ರಗಳು ಹಿರಿ-ಕಿರಿಯರೆನ್ನದೆ ಎಲ್ಲರನ್ನೂ ಪರದೆ ಕಣ್ಣ್ಣು ಕೀಲಿಸುವಂತೆ ಹಾಗೂ ತಮ್ಮ ಇರುವನ್ನೇ ಮರೆಯುವಂತೆ ಮಾಡುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಬೇಸಿಗೆ ಮನರಂಜನೆ ತಣಿಸಲು ಇದಕ್ಕಿಂತ ಉತ್ತಮ ಪುರಾಣ ಪ್ರಸಿದ್ಧ ಚಿತ್ರ ಸಿಗಲಿಕ್ಕಿಲ್ಲ.
(ಕರ್ಟೆಸಿ: ದಟ್ಸ್ಕನ್ನಡ)
Thursday, May 8, 2008
"ಜೀ ಕನ್ನಡ" ಸೆಕಂಡ್ ಯಾನಿವರ್ಸರಿ
ಕಿರುತೆರೆಗೆ ಪದಾರ್ಪಣೆ ಮಾಡಿದ ಎರಡೇ ವರ್ಷದಲ್ಲಿ ಕನ್ನಡಿಗರ ಮನಗೆದ್ದು ಕನ್ನಡಿಗರ ಮನೆಮಾತಿನ ವಾಹಿನಿ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಕನ್ನಡಿಗರ ಕಣ್ಮಣಿ ಜೀ ಕನ್ನಡ, ಸ್ಥಾಪನೆಯ ಎರಡೇ ವರ್ಷದಲ್ಲಿ ಉತ್ತಮ ಹಾಗೂ ವೈವಿಧ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕನ್ನಡಿಗರ ಮನಗೆದ್ದಿದೆ.ಇದೇ ಮೇ 11ಕ್ಕೆ ಜೀ ಕನ್ನಡ ಎರಡನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಎರಡನೇ ವರ್ಷದ ಸಂಭ್ರಮದಲ್ಲಿ ಜೀಕನ್ನಡ ಪ್ರತಿದಿನ ಸಂಜೆ 7 ಗಂಟೆಗೆ 30 ನಿಮಿಷಗಳ ಸುದ್ದಿ ಪ್ರಸಾರವನ್ನು ಪ್ರಾರಂಭಿಸುತ್ತಿದೆ. ವಿಶೇಷವೆಂದರೆ ಸುದ್ದಿ@೭ ವಾರ್ತಾ ವಾಚಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಮೇ 5ರಿಂದ ನೇರಪ್ರಸಾರದ ಸುದ್ದಿ ಪ್ರಾರಂಭವಾಗಿದ್ದು ಹಿರಿತೆರೆಯ ತಾರೆಗಳನ್ನು ಸುದ್ದಿ ವಾಚನೆಗೆ ಬಳಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಪ್ರಪ್ರಥಮವಾಗಿ ಜೀ ಕನ್ನಡ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದೆ. ಈ ಎರಡು ವರ್ಷಗಳಲ್ಲಿ ಹಲವಾರು ನೂತನ ಪ್ರಯೋಗಗಳನ್ನು ಜೀ ಕನ್ನಡ ಮಾಡಿದೆ. ಇತ್ತೀಚೆಗೆ ಈ ವಾಹಿನಿಯ ಇನ್ನೊಂದು ಸಾಧನೆಯಾಗಿ ದುಬೈನಲ್ಲಿ ನಡೆಸಿದ ಕಾರ್ಯಕ್ರಮವೊಂದು ಸಾಕ್ಷಿಯಾಗಿದೆ. ಅನಿವಾಸಿ ಕನ್ನಡಿಗರಿಗಾಗಿ ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದೆ. ಜೀ ಕನ್ನಡ, ಕನ್ನಡ ಚಿತ್ರರಂಗದ ನಟರಾದ ದರ್ಶನ್, ವಿಜಯ ರಾಘವೇಂದ್ರ, ದಿಗಂತ್ ಹಾಗೂ ನಟಿಯರಾದ ಅನುಪ್ರಭಾಕರ್, ನೀತೂ ಮುಂತಾದವರೊಡನೆ ದುಬೈನಲ್ಲಿ ರಸಸಂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಿತ್ತು. ಮೇ 11ರಂದು ಬೆಳಿಗ್ಗೆ 11ಕ್ಕೆ ಜೀ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಸ್ಪರ್ಧಾ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮಗಳು, ಸಿನೆಮಾ, ಎಲ್ಲದರಲ್ಲೂ ತನ್ನತನವನ್ನು ಜೀ ಕನ್ನಡ ಮೆರೆದಿದೆ. ಕಳೆದ ವರ್ಷ ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಅತ್ಯಂತ ಯಶಸ್ವಿ ಕಾರ್ಯಕ್ರಮ ಎನಿಸಿಕೊಂಡಿತ್ತು. ಅಲ್ಲದೇ ಕುಣಿಯೋಣು ಬಾರಾ, ಬಾಳೇ ಬಂಗಾರ, ಯಾರಿಗುಂಟು ಯಾರಿಗಿಲ್ಲ, ಕಾಮಿಡಿ ಕಿಲಾಡಿಗಳು, ಧಾರಾವಾಹಿಗಳಾದ ಏಕೆ ಹೀಗೆ ನಮ್ಮ ನಡುವೆ, ಅನುಪಮ, ಅಕ್ಕ ಯಶಸ್ವಿಯಾಗಿವೆ.ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿದ 'ಕಾಮಿಡಿ ಕಿಲಾಡಿಗಳು' ಕರ್ನಾಟಕದ ಕಾಮಿಡಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಪ್ರಾರಂಭಿಸಿದ ಕರ್ನಾಟಕ ಚಲನಚಿತ್ರ ಗೀತೆ ಗಾಯನದಲ್ಲಿ ದಿಗ್ಗಜರು ಎನಿಸಿಕೊಂಡವರ ನೆನೆಕೆಯ 'ಗುಣಗಾನ' ಕಾರ್ಯಕ್ರಮ ಕೂಡ ಕಿರುತೆರೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಉತ್ತಮ ಯುವ ತಂತ್ರಜ್ಞರು ಹಾಗೂ ಸೃಜನಶೀಲ ವ್ಯಕ್ತಿಗಳನ್ನು ಹೊಂದಿರುವ ಜೀ ಕನ್ನಡ ಕೇವಲ ಎರಡೇ ವರ್ಷಗಳಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನೆ ಮನದಲ್ಲಿ ಅಚ್ಚೊತ್ತಿದ್ದು ಇನ್ನೂ ಹಲವು ಪ್ರಥಮಗಳನ್ನು ಕರ್ನಾಟಕದ ಕಿರುತೆರೆಗೆ ನೀಡಲಿದೆ. ಉತ್ತಮ ಮನರಂಜನಾ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಕನ್ನಡಿಗರನ್ನು ಕನ್ನಡ ವಾಹಿನಿ ವೀಕ್ಷಣೆಯತ್ತ ಸೆಳೆಯಲು ಜೀ ಕನ್ನಡ ಪ್ರಯತ್ನಿಸುತ್ತಿದೆ ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದರು.(ಕರ್ಟೆಸಿ: ದಟ್ಸ್ಕನ್ನಡ)
Monday, May 5, 2008
ಸಿ.ವಿ.ಎಲ್.ಶಾಸ್ತ್ರಿಗೆ ದಾದಾಸಾಹೇಬ್ ಫಾಲ್ಕೆ ಗೌರವ
ಕನ್ನಡದ ಚಿತ್ರರಂಗದ ಹಿರಿಯ ನಿರ್ಮಾಪಕ ಸಿ.ವಿ.ಎಲ್.ಶಾಸ್ತ್ರಿ ಅವರಿಗೆ ದೇಶದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಗಿದೆ. ಮುಂಬೈನಲ್ಲಿ ಗುರುವಾರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿಂದಿ ಚಿತ್ರರಂಗದ ಹಳೆ ನಟ ರಾಜೇಶ್ ಖನ್ನಾ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಶಾಸ್ತ್ರಿ ಅವರಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ದಾದಾಸಾಹೇಬ್ ಫಾಲ್ಕೆ ಅಕಾಡೆಮಿಯ ಅಧ್ಯಕ್ಷರಾದ ಸಂತೋಷ್ ಸಿಂಗ್ ಜೈನ್ ಉಪಸ್ಥಿತರಿದ್ದರು.ಕರ್ನಾಟಕದಲ್ಲಿ ಟೂರಿಂಗ್ ಟಾಕೀಸ್ ಕ್ರಾಂತಿಗೆ ನೇತೃತ್ವ ವಹಿಸಿದ್ದ ಹಾಗೂ ಉದ್ಯಮಿ ಸಿ.ವಿ.ಎಲ್.ಶಾಸ್ತ್ರಿ ಸದಭಿರುಚಿಯ ಹಲವಾರು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿರುವ 'ಮಲಯ ಮಾರುತ', 'ಆಸೆಯ ಬಲೆ' ಮತ್ತು 'ಕಳ್ಳ ಕುಳ್ಳ' ಚಿತ್ರಗಳು ಶಾಸ್ತ್ರಿ ಅವರ ನಿರ್ಮಾಣದಲ್ಲಿ ಸಿದ್ಧವಾದ ಕನ್ನಡ ಸಿನೆಮಾಗಳು ಚಿತ್ರರಸಿಕರ ತನ್ಮನ ತಣಿಸಿವೆ.ಶಾಸ್ತ್ರಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಆಗಿದ್ದರು. ಈ ಹಿಂದೆ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಹಾಗೂ ನಿರ್ಮಾಪಕ ಆರ್.ಲಕ್ಷ್ಮಣ್ ಅವರಿಗೆ ಇದೇ ರೀತಿಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ.
(ಕರ್ಟೆಸಿ: ದಟ್ಸ್ಕನ್ನಡ)
Subscribe to:
Posts (Atom)