ಎತ್ತಾಡಿಸಿ, 'ಜೋ'ಗುಳ ಹಾಡಿ, ತೊಟ್ಟಿಲು ತೂ'ಗಿ'ದ ತಾಯಿಗಾಗಿಯೋ, ಬೆನ್ನಿಗೆ ಬಿದ್ದ ತಂಗಿಯ 'ಸಂತ'ಸಕ್ಕೆ ಅಡ್ಡಿಬಂದವರನ್ನು ಬಗ್ಗುಬಡಿಯುವ ಸಲುವಾಗಿಯೋ, ದೇಹಿ ಎಂದ ಬಡ ಜನರನ್ನು ಕಾಡುವ ವೈರಿಗಳ ಮಗ್ಗುಲು ಮುರಿಯಲೋ... ಒಟ್ಟಾರೆ ಅದಕ್ಕೊಂದು 'ಧರ್ಮಕಾರಣ' ಇದ್ದೇ ಇರುತ್ತೆ; ಇರಲೇ ಬೇಕು ಕೂಡ.
ಶಿವಣ್ಣ ಮತ್ತೊಮ್ಮೆ ಅದೇ ಮಚ್ಚು ಹಿಡಿದು, ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೊಂದು ಕಾರಣವನ್ನೂ ಕೊಟ್ಟಿದ್ದಾರೆ. ತಮ್ಮಲ್ಲಿ ಅಂಕುರಿಸಿದ ಪ್ರೀತಿಗಾಗಿ, ಅದರ ನೀತಿಗಾಗಿ, ಆ ನೀತಿಯ ಪರಿಪೂರ್ಣ ಪಾಲನೆಗಾಗಿ ಆ ವೇಷ ಧರಿಸಿದ್ದಾರೆ. 'ಸತ್ಯ'ನಾಗಿ ಬದಲಾಗಿದ್ದಾರೆ. ಐ ಆಮ್ 'ಇನ್ ಲವ್' ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.
ಸತ್ಯವನ್ನೇ ಹೇಳುತ್ತೇನೆ. ಅದನ್ನು ಬಿಟ್ಟು ಇನ್ನೇನು ಹೇಳುವುದಿಲ್ಲ. ಆ ಸತ್ಯದಾಣೆಗೂ ಪ್ರೀತಿಯೇ ಸತ್ಯ ಎಂಬ ಕಹಿ ಸತ್ಯವನ್ನು ಶಿವಣ್ಣನ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಘವ ಲೋಕಿ.
ಒಂದು ಸಾಮಾನ್ಯ ಕಥೆಯ ಎಳೆಯನ್ನಿಟ್ಟುಕೊಂಡು 'ಈ ಭೂಮಿ ಮೇಲೆ ಪ್ರೀತಿ ಏಕಿದೆ?' ಪ್ರೀತಿಯ ಮುಂದಿರುವ ಸವಾಲುಗಳೇನು? ಅಂಥದ್ದೊಂದು ಪರಿಪೂರ್ಣ ಪ್ರೀತಿಗೆ ಹೇಗೆ ನ್ಯಾಯ ಸಲ್ಲಿಸಬೇಕು? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಯತ್ನ ಮಾಡಿದ್ದಾರೆ. ಆ ಪ್ರೀತಿಯನ್ನು ಪ್ರಚುರ ಪಡಿಸಲು ಸತ್ಯ ಎಂಬ ಪ್ರಧಾನ ಪಾತ್ರ ಸೃಷ್ಟಿಸಿದ್ದಾರೆ. ಆ ಪಾತ್ರದ ಹತ್ತು ಹಲವು ನೇಪಥ್ಯ ದೃಶ್ಯಗಳನ್ನು ಸೃಷ್ಟಿಸಿ ಕತೆಗೆ ಇನ್ನಷ್ಟು ಮೆರುಗು ನೀಡಿದ್ದಾರೆ.
ಒಂದು ಪಕ್ಕಾ ಮಾಸ್ ಚಿತ್ರಕ್ಕೆ ಏನೇನು ಬೇಕೋ ಅವೆಲ್ಲವನ್ನು ಒಂದೆಡೆ ಕಲೆಹಾಕಿ ಪ್ಯಾಕೇಜ್ ರೀತಿಯಲ್ಲಿ ನೀಡಿದ್ದಾರೆ. ಒಂದು ದೃಶ್ಯ, ಅದರ ಬೆನ್ನಿಗೇ ಒಂದು ಫೈಟು, ಮತ್ತೊಂದಿಷ್ಟು ಕಾಮಿಡಿ ಟ್ರ್ಯಾಕ್, ಜತೆಗೊಂದು ಹಾಡು, ನಂತರ ಮತ್ತೊಂದು ದೃಶ್ಯ... ಹೀಗೆ ಎಲ್ಲವೂ ಫಟಾಫಟ್. ಶಿವಣ್ಣನ ಮ್ಯಾನರಿಸಂಗೆ ಸರಿಹೊಂದುವಂತಹ ಡೈಲಾಗ್‌ಗಳು, ಅವರಿಗೆ ಸರಿಹೊಂದುವ ವಿಲನ್‌ಗಳು ಹೀಗೆ ಪ್ರತಿ ಫ್ರೇಮ್‌ನಲ್ಲೂ ಹೊಸತನ ಸೃಷ್ಟಿಸಲು ಪ್ರಯತ್ನಿಸಿದ್ದಾರೆ.
ಎಲ್ಲಾ ಅರ್ಥವಾಗಬೇಕಾದರೆ ಮೊದಲು ಕತೆ ಕೇಳಲೇ ಬೇಕು. ಆತ ಸತ್ಯ. ಅಪ್ಪ, ಅಮ್ಮ, ಅಕ್ಕ-ಭಾವನೊಂದಿಗಿರುತ್ತಾನೆ. ಜತೆಗೊಂದಿಷ್ಟು ಪಡ್ಡೆ ಹುಡುಗರು. ಎಲ್ಲರದ್ದೂ ಪಾರ್ಕು, ಡಿಸ್ಕೋಥೆಕ್ ಅಲ್ಲಿ ಇಲ್ಲಿ ಅಂಡಲೆಯುವ ವೃತ್ತಿ. ಸತ್ಯ ಜಂಟಲ್‌ಮನ್. ಯಾರಾದರೂ ಹೆಣ್ಣುಮಕ್ಕಳ ತಂಟೆಗೆ ಹೋದರೆ ಅವರ ಜತೆ ಫೈಟ್ ಮಾಡುತ್ತಾನೆ. ಆದರೆ ಪ್ರೀತಿ, ಪ್ರೇಮದ ಬಗ್ಗೆ ಮಾತ್ರ ಆತ ನೂರು ಮಾರು ದೂರ. ಆದರೆ ಲಲನಾಮಣಿಯರಿಗೆ ಮಾತ್ರ ಸತ್ಯ ನಿತ್ಯ ಮದನ.
ಮನೆಮಂದಿಯಲ್ಲಾ ಸೇರಿ ಮಂತ್ರಾಲಯಕ್ಕೆ ಟ್ರಿಪ್ ಹೋಗುತ್ತಾರೆ. ಸತ್ಯನಿಗೆ ಅಲ್ಲೊಬ್ಬಳು ವೇದಾ ಎಂಬ ಹುಡುಗಿ ಸಿಗುತ್ತಾಳೆ. ಅವರಳ ನೋಟ, ಮೈಮಾಟ ಸತ್ಯನ ಮನಸ್ಸಿನಲ್ಲಿ ಪ್ರೀತಿಯ ಅಲೆ ಎಬ್ಬಿಸುತ್ತದೆ. ಅದುವೇ ನಿಜವಾದ ಪ್ರೀತಿ ಎಂದು ಮನದಟ್ಟಾಗುವ ವೇಳೆಗೆ ಆಕೆ ಮಾಯವಾಗುತ್ತಾಳೆ. ಅವಳ ಹುಡುಕಾಟದಲ್ಲಿ ಒಂದಷ್ಟು ಕಾಲಹರಣ ಮಾಡುತ್ತಾನೆ. ಕೊನೆಗೂ ಅವಳ ಮೂಲವನ್ನು ಪತ್ತೆಹಚ್ಚುತ್ತಾನೆ. ಆಕೆ ಆಂಧ್ರದ ಕರ್ನೂಲು ಮೂಲದ ರೌಡಿ ರಂಗಾರೆಡ್ಡಿಯ ಮಗಳು ಎಂಬ ವಿಷಯ ಅರಿತು ಅವಳನ್ನು ಪಡೆದುಕೊಳ್ಳಲು ರೈಲು ಹತ್ತುತ್ತಾನೆ. ಇತ್ತ ರಂಗಾರೆಡ್ಡಿ ಮಕ್ಕಳಿಗೆ ಸತ್ಯನ ಉದ್ದೇಶ ಗೊತ್ತಾಗಿ ಅವನನ್ನು ಮುಗಿಸುವ ಸಂಚು ಹೂಡುತ್ತಾರೆ. ಆದರೂ ಸತ್ಯ ಎಲ್ಲರನ್ನೂ ಬಗ್ಗು ಬಡಿಯುತ್ತಾನೆ. ಅವಳಿಗಾಗಿ ಎಲ್ಲದಕ್ಕೂ ಸಿದ್ಧನಾಗುತ್ತಾನೆ. ಅವಳ ಮನಸ್ಸು ಗೆಲ್ಲಲು ಯತ್ನಿಸುತ್ತಾನೆ. ಸಾಕಷ್ಟು ಬಾರಿ ಸಾವಿನ ದವಡೆಗೂ ಹೋಗಿ ಮತ್ತೆ ಎದ್ದು ಬರುತ್ತಾನೆ... ಮುಂದಿನದನ್ನು ತೆರೆ ಮೇಲೆ ನೋಡಿದರಷ್ಟೇ ಚೆಂದ.
ಇಡೀ ಚಿತ್ರದ ಹೈಲೈಟ್ ಎಂದರೆ ಶಿವಣ್ಣನ ಅಮೋಘ ಅಭಿನಯ. ಒಟ್ಟಾರೆ ಹೇಳುವುದಾದರೆ ಸರ್ವಂ 'ಶಿವ' ಮಯಂ. ಪ್ರೀತಿಯ ಹುಡುಕಾಟದಲ್ಲಿ ಅವರು ಪಡುವ ಪಾಡು, ಅದು ಸಿಗುವ ಸೂಚನೆಗಳೇ ಇಲ್ಲದಿದ್ದಾಗ ನಲುಗುವ ಪರಿ... ಅವೆಲ್ಲ ಶಿವಣ್ಣನಿಂದ ಮಾತ್ರ ಸಾಧ್ಯ. ಹಾಗಂತ ದೂರದಿಂದ ಬಂದಂತ ಸುಂದರಾಂಗ ಜಾಣೆ ಜೆನಿಲಿಯಾಳನ್ನು ಮಾತ್ರ ಸಹಿಸಿಕೊಳ್ಳುವುದು ಕಷ್ಟ. ಆದರೆ ಆಕೆ ಗಟ್ಟಿಯಾಗಿ ತುಟಿ ಕಚ್ಚಿ ನುಲಿದಾಗ, ಅಂದವಾಗಿ ನಕ್ಕಾಗ, ಶಿವಣ್ಣನ ಜತೆ ಥೈ ಥೈ ಎನ್ನುವಾಗ ಮಾತ್ರ ನೋಡಲು ಎರಡು ಕಣ್ಣು ಸಾಲದು. ಇನ್ನು ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಸೆರೆಯಾದೆನೂ...ಮತ್ತು ರೋಮಾಂಚನಾ... ಹಾಡುಗಳು ಖುಷಿ ಕೊಡುತ್ತವೆ. ಶ್ರೀನಾಥ್, ವಿನಯಾ ಪ್ರಸಾದ್, ಜಯಪ್ರಕಾಶ್, ಅಜಯ್, ಸುಬ್ಬರಾವ್ ಮುಂತಾದ ಪಾತ್ರಗಳು ಕತೆಗೆ ಅನಿವಾರ್ಯ. ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ ಚೆನ್ನಾಗಿದೆ. ಆದರೆ ಕೆಲವು ಕಡೆ ಬರುವ ತೆಲುಗು ಸಂಭಾಷಣೆ ಅಚ್ಚಕನ್ನಡಿಗರಿಗೆ ಅರಗಿಸಿಕೊಳ್ಳುವುದು ತುಸು ಕಷ್ಟ.
ಅಂದಹಾಗೆ ನಿರ್ದೇಶಕರ ಬಗ್ಗೆ ಒಂದು ಮಾತು ಹೇಳಲೇ ಬೇಕು. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಅವರು ಗೆದ್ದಿದ್ದಾರೆ. ಚಿತ್ರದ ಪ್ರತಿ ಸೀನ್‌ನಲ್ಲೂ ಥಳಥಳಿಸುವ ಅದ್ದೂರಿತನ, ಕರ್ನೂಲಿನ ದೃಶ್ಯಗಳಿಗೆ ತೆಲುಗಿನ ನಟರನ್ನೇ ಬಳಸಿಕೊಂಡು ಎಲ್ಲೂ ಅಭಾಸವಾಗದಂತೆ ಚಿತ್ರಿಸಿರುವುದು ಸುಲಭದ ಮಾತಲ್ಲ. ಆ ಮಟ್ಟಿಗೆ ಅವರ ಪ್ರಯತ್ನ ಶ್ಲಾಘನೀಯವೇ ಸರಿ. ಅವರು ನಿರ್ಮಾಪಕರು ವ್ಯಯಿಸಿದ ಕಾಸಿಗಂತೂ ಮೋಸ ಮಾಡಿಲ್ಲ. ಒಟ್ಟಾರೆ ಶಿವಣ್ಣನ ಹಳೇ ಖದರ್ ನೋಡುವ ಹಂಬಲವಿದ್ದರೆ ಚಿತ್ರವನ್ನು ನೋಡಿ...