Saturday, October 11, 2008

ಅಗ್ನಿ ಶ್ರೀಧರ್ ಬತ್ತಳಿಕೆಯಲ್ಲಿನ ಹೊಸ ಅಸ್ತ್ರ!

'ಆ ದಿನಗಳು' ಯಶಸ್ವಿಯ ನಂತರ 'ದಾದಾಗಿರಿಯ ದಿನಗಳ' ಜಾಡಿನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ 'ಸ್ಲಂ ಬಾಲ'. ಎರಡೇ ಎರಡು ಹಾಡುಗಳನ್ನು ಹೊಂದಿರುವ ಈ ಚಿತ್ರದ ಧ್ವನಿ ಸುರುಳಿ ಇತ್ತೀಚೆಗಷ್ಟೆ ಹೊಟೇಲ್ ಏಟ್ರಿಯಾದಲ್ಲಿ ಹಲವು ಚಿತ್ರೋದ್ಯಮದ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಪತ್ರಕರ್ತೆಯರಾದ ಸಂಯುಕ್ತ ಕರ್ನಾಟಕದ ಕೆ.ಎಚ್.ಸಾವಿತ್ರಿ ಹಾಗೂ ಸಿನಿಮಾ ಮಾಸಿಕ 'ಚಿತ್ರಾ'ದ ತುಂಗರೇಣುಕ ಮತ್ತು ಸರಸ್ವತಿ ಜಾಹಗೀರ್ ದಾರ್ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಸ್ಲಂ ಬಾಲನ ನಿರ್ದೇಶನದ ಜವಾಬ್ದಾರಿ ಹೊತ್ತಿರುವ 'ಅಗ್ನಿ' ವಾರಪತ್ರಿಕೆ ಪತ್ರಕರ್ತೆ ಡಿ.ಸುಮನಾ ಕಿತ್ತೂರು ಈ ಎರಡು ಹಾಡುಗಳನ್ನು ರಚಿಸಿದ್ದಾರೆ.

ಬರಹಗಾರ ಹಾಗೂ 'ಅಗ್ನಿ ' ವಾರಪತ್ರಿಕೆಯ ಸಂಪಾದಕ ಶ್ರೀಧರ್ ಮಾತನಾಡುತ್ತಾ, ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ, ಜವಾಬ್ದಾರಿಯುತವಾದ ಚಿತ್ರಗಳನ್ನು ನಿರ್ಮಿಸಬೇಕಾಗಿದೆ ಎಂದರು. ಸುಮನಾ ಕಿತ್ತೂರು ಅವರು ಈ ಚಿತ್ರವನ್ನು ಮಾಡಲು ಬಹಳಷ್ಟು ಹೆಣಗಿದ್ದಾರೆ. ಪ್ರತಿ ಫ್ರೇಂನಲ್ಲೂ ಅವರ ಪ್ರತಿಭೆ ಎದ್ದು ಕಾಣುತ್ತದೆ. ಸ್ಲಂ ಬಾಲನ ಪಾತ್ರದಲ್ಲಿ ಕಾಣಿಸುವ ವಿಜಯ್ ಸಹ ಈ ಪಾತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ನನ್ನ ಪುಸ್ತಕದಲ್ಲಿನ ಮತ್ತೊಂದು ಪಾತ್ರವಾದ ರಜ್ಜುವಿನ ಪಾತ್ರ ನಿರೂಪಣೆ ಅದ್ಭುತವಾಗಿ ಮೂಡಿಬಂದಿದೆ ಎಂದು ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು.


ಇದೇ ಸಂದರ್ಭದಲ್ಲಿ ಶ್ರೀಧರ್ ಮತ್ತೊಂದು ವಿಷಯವನ್ನ್ನು ತಿಳಿಸಿದರು. ಮಲಯಾಳಂ ನಟ ಮೋಹನ್ ಲಾಲ್ ಅವರೊಂದಿಗೆ ಚಿತ್ರವನ್ನು ನಿರ್ದೇಶಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಮುಂದಿನ ವರ್ಷಮೋಹನ್ ಲಾಲ್ ಕಾಲ್ ಷೀಟ್ ಸಿಗುವ ಸಾಧ್ಯತೆಗಳಿವೆ.ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಇಟ್ಟುಕೊಂಡಿರುವ ಅಗ್ನಿ ಶ್ರೀಧರ್, ಮುಂದಿನ ದಿನಗಳಲ್ಲಿ ಅವುಗಳನ್ನು ಒಂದಾಗಿ ಪ್ರಯೋಗಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ದಿನಗಳು ದೂರವಿಲ್ಲ.


ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿ ಸಿದ್ಧಲಿಂಗಯ್ಯ, ಇಂದುಧರ ಹೊನ್ನಾಪುರ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಚ್.ಡಿ.ಗಂಗರಾಜು, ನಿರ್ಮಾಪಕ ಕನಕಪುರ ಶ್ರೀನಿವಾಸ್, ನಾಯಕ ನಟ ವಿಜಯ್ ಹಾಗೂ ನಾಯಕಿ ಶುಭಾ ಪುಂಜಾ ಉಪಸ್ಥಿತರಿದ್ದರು. ಇಂದುಧರ ಹೊನ್ನಾಪುರ ಮಾತನಾಡುತ್ತಾ, ಸ್ಲಂ ಬಾಲ ಎಲ್ಲ ಚಿತ್ರಗಳಂತಲ್ಲದ ಉತ್ತಮ ಗುಣಮಟ್ಟದಿಂದ ಕೂಡಿದ ಚಿತ್ರ ಎಂದರು. ಈ ರೀತಿಯ ಚಿತ್ರ ಕನ್ನಡದಲ್ಲಿ ಮಾತ್ರ ಮಾಡಲು ಸಾಧ್ಯ. ಜೀವನದ ಪ್ರತಿ ಹೆಜ್ಜೆಯಲ್ಲೂ ಭೂಗತ ಜಗತ್ತು ಹೇಗೆ ತನ್ನ ಕರಾಳ ಹಸ್ತಗಳನ್ನು ಚಾಚಿದೆ ಎಂಬುದು ಈ ಚಿತ್ರ ನೋಡಿದ ನಂತರ ತಿಳಿಯುತ್ತದೆ ಎಂದು 'ಸ್ಲಂ ಬಾಲ'ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
(ಕರ್ಟೆಸೀ: ದಟ್ಸ್ ಕನ್ನಡ)

Thursday, October 9, 2008

ಪೂಜಾಗಾಂಧಿ ಜನ್ಮ ದಿನೊತ್ಸವ

ಕನ್ನಡಕ್ಕೆ ಸಿಕ್ಕ ಕನ್ನಡವರೇ ಆದ ಕನ್ನಡೇತರ ನಟಿ ಪೂಜಾಗಾಂಧಿ! ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಹುಯ್ಯುವ ತನಕ ಅಪರಿಚರಾಗಿದ್ದು ನಂತರ ದಿಢೀರನೆ ಖ್ಯಾತಿಯ ಉತ್ತುಂಗ ಏರಿದ ಹುಡುಗಿ. ಮಿಲನದ ಮೂಲಕ ಮುಂಗಾರು ಮಳೆಯನ್ನು ಮರೆಸಿ ತಾಜ್ ಮಹಲ್ ಹಾಗೂ ಬುದ್ಧಿವಂತನ ಮೂಲಕ ಕನ್ನಡ ಚಿತ್ರರಸಿಕರನ್ನ್ನುಕಾಡುತ್ತಿರುವ ನಟಿ. ಇಂದು ಪೂಜಾಗಾಂಧಿಯ ಜನುಮದಿನ ಎಂದು ಹೇಳಲಷ್ಟೇ ಇಷ್ಟೆಲ್ಲಾ ಪೀಠಿಕೆ।

ಹೆಂಗಸರ ವಯಸ್ಸು, ಗಂಡಸರ ಸಂಬಳ ಕೇಳಬಾರದು ಎಂಬ ಗಾದೆಯೇ ಇರುವುದರಿಂದ ಪೂಜಾ ವಯಸ್ಸು ಇಲ್ಲಿ ಅಪ್ರಸ್ತುತ. ಪ್ರಸ್ತುತ ಪೂಜಾ 'ಗಾಂಧಿ'ನಗರದಲ್ಲಿ ಬ್ಯುಸಿಯಾಗಿರುವ ನಟಿ. ಜನುಮದ ಗೆಳತಿ, ಮಹರ್ಷಿ, ಅನು ಚಿತ್ರಗಳು ತೆರೆಕಾಣಬೇಕಾಗಿವೆ। ತಮಿಳಿನಲ್ಲಿ ಅರ್ಜುನ್ ಸರ್ಜಾ ಜತೆ ಒಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇಂದು ಅವರು ಬೆಂಗಳೂರಿನ ರಮಣಶ್ರೀ ಅಂಧರ ಶಾಲೆಯ ಮಕ್ಕಳ ಜೊತೆ ರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಕನ್ನಡಕ್ಕೆ ಬಂದು ಕನ್ನಡದವರೇ ಆದ ಬಹಳಷ್ಟು ನಟಿಯರು ಇದ್ದಾರೆ। ಅವರಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಿತಾ, ಮಾಧವಿ, ಗೀತಾ, ಸುಹಾಸಿನಿ, ಮಾಲಾಶ್ರೀ ಅವರ ಹೆಸರುಗಳನ್ನು ಪ್ರಸ್ತಾಪಿಸಬಹುದು. ಆದರೆ ಇತ್ತಿತ್ತಲಾಗಿ ಹಾಗೆ ಬಂದು ಹೀಗೆ ಹೋಗುವವರು ಹೆಚ್ಚಾಗುತ್ತಿದ್ದಾರೆ. ಆದರೆ ಪೂಜಾಗಾಂಧಿ ಮಾತ್ರ ಇದಕ್ಕೆ ಅಪವಾದ. ಕನ್ನಡ ಚಿತ್ರರಂಗಕ್ಕೆ ತಮ್ಮ ಪ್ರತಿಭೆ, ಸಾಧನೆಗಳನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ನಟಿ ಎನ್ನಬಹುದು. ಅವರು ಮುಂದೆಯೂ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಾ ಅವರ ಬಾಳ ಪಯಣ ಹೀಗೇ ಸಾಗಲಿ ಎಂದು ದಟ್ಸ್ ಕನ್ನಡ ಸಿನಿ ತಂಡ ಹಾರೈಸುತ್ತದೆ.
(ಕರ್ಟೆಸೀ: ವ್ಯಾನ್ ಇಂಡಿಯಾ)

Monday, October 6, 2008

ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ


ಕಳ್ಳನಾಗಿ ಚಾಣಕ್ಷತನದಿಂದ ಟೆನ್ನಿಸ್‌ಕೃಷ್ಣರೊಂದಿಗೆ ಸೇರಿ ವಸ್ತುಗಳನ್ನು ಅಪಹರಿಸುವ ಮದಕರಿ ಒಂದೆಡೆಯಾದರೆ ಅಂಥಾ ಕಳ್ಳರನ್ನು ಮಟ್ಟಹಾಕುವ ವೀರಮದಕರಿಯೊಬ್ಬನಿದ್ದಾನೆ. ಆತ ನಿಷ್ಠಾವಂತ ಪೊಲೀಸ್ ಅಧಿಕಾರಿ.

ದುಷ್ಟರನ್ನು ಸದೆಬಡೆಯುವಲ್ಲಿ ಸದಾ ಮುಂದಿರುವ ಮದಕರಿ ಹೇಯ ಕೃತ್ಯಗಳಲ್ಲಿ ತೊಡಗಿದ್ದ ಖಳನಟ ಗೋಪಿನಾಥ್‌ಭಟ್ ಅವರನ್ನು ಥಳಿಸುತ್ತಾರೆ. ಇಬ್ಬರ ನಡುವೆ ನಡೆಯುವ ಈ ಬೀಕರ ಕಾಳಗದ ಕೆಲ ತುಣುಕುಗಳನ್ನು ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ ಎಂದು ನಿರ್ಮಾಪಕ ದಿನೇಶ್‌ಗಾಂಧಿ ತಿಳಿಸಿದ್ದಾರೆ. ೩೫೦ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಾಹಸ ನಿರ್ದೇಶನ ನೀಡಿರುವ ಥ್ರಿಲ್ಲರ್‌ಮಂಜು ಈ ಸನ್ನಿವೇಶ ಅದ್ದೂರಿಯಾಗಿ ಮೂಡಿಬರುವಲ್ಲಿ ಅಪಾರ ಶ್ರಮವಹಿಸಿದ್ದಾರೆ.

ದಿನೇಶ್‌ಗಾಂಧಿ ನಿರ್ಮಿಸಿ, ಸುದೀಪ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ವಿಜೇಂದ್ರ ಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಕೆಂಪರಾಜ್ ಸಂಕಲನ, ದಿನೇಶ್‌ಮಂಗಳೂರ್ ಕಲೆ, ಕೆ.ವಿ.ಮಂಜಯ್ಯ ನಿರ್ಮಾಣನಿರ್ವಹಣೆ, ಶ್ರೀವೆಂಕಟ್ ಅವರ ಛಾಯಾಗ್ರಹಣವಿರುವ ಚಿತ್ರದಲ್ಲಿ ಸುದೀಪ್, ರಾಗಿಣಿ, ಪವಿತ್ರ, ದಿನೇಶ್‌ಗಾಂಧಿ, ದೇವರಾಜ್, ಗೋಪಿನಾಥ್‌ಭಟ್, ಮನೋಜ್, ದೊಡ್ಡಣ್ಣ ಟೆನ್ನಿಸ್‌ಕೃಷ್ಣ ಅಭಿನಯಿಸಿದ್ದಾರೆ.