Monday, September 29, 2008

ಗಾನಕೋಗಿಲೆ ಲತಾ ಮಂಗೇಶ್ಕರ್ ಜನ್ಮದಿನೋಸ್ತವ

ತಮ್ಮ ಅಪ್ರತಿಮ ಕಂಠದ ಮೂಲಕ ಆರು ದಶಕಗಳಿಂದ ಸಂಗೀತ ಪ್ರೇಮಿಗಳ ಮನಗೆಲ್ಲುತ್ತಿರುವ ಗಾನಕೋಗಿಲೆ ಲತಾ ಮಂಗೇಶ್ಕರ್ 80ನೇ ವರ್ಷಕ್ಕೆ ಅಡಿಯಿಟ್ಟರು। ಭಾನುವಾರ ಪುಣೆಯ ತಮ್ಮ ಮನೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಪುಣೆಯ ಬಾಲಗಂಗಾಧರ್ ರಂಗ ಮಂದಿರದಲ್ಲಿ ಲತಾ ಅವರ ಸಹೋದರ ಹೃದನಾಥ್ ಮಂಗೇಶ್ಕರ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ವಿಕ್ರಂ ಭಟ್ ರ ''1920'' ಎಂಬ ಬಾಲಿವುಡ್ ಚಿತ್ರದಲ್ಲಿ ಲತಾ ಅವರು ಪಂಡಿತ್ ಜಸ್ ರಾಜ್ ಹಾಗೂ ಆಶಾ ಬೋಂಸ್ಲೆ ಯೊಂದಿಗೆ ತೀರಾ ಇತ್ತೀಚೆಗಷ್ಟೆ ಹಾಡಿದ್ದರು। ತಮ್ಮ 75 ನೇ ಹುಟ್ಟುಹಬ್ಬವನ್ನು ಲತಾ ಮಂಗೇಶ್ಕರ್ ಮುಂಬೈನ ತಮ್ಮ ನಿವಾಸದಲ್ಲಿ ಆಚರಿಸಿಕೊಂಡಿದ್ದರು. ಆಗ ಅವರ ಹುಟ್ಟು ಹಬ್ಬದ ಸಮಾರಂಭಕ್ಕೆ ಶರದ್ ಪವಾರ್, ಎಲ್.ಕೆ.ಅಡ್ವಾಣಿ ಹಾಜರಾಗಿದ್ದರು. ಅವರು ತಮ್ಮ ಹುಟ್ಟುಹಬ್ಬವನ್ನು ಮುಂಬೈಯಲ್ಲಿ ಆಚರಿಸಿಕೊಂಡಿದ್ದೆ ವಿರಳ. ಅವರು ಯಾವತ್ತು ಪುಣೆ ಅಥವಾ ಕೊಲ್ಲಾಪುರದ ತಮ್ಮ ನಿವಾಸಗಳಲ್ಲಿ ಸರಳವಾಗಿ, ಖಾಸಗಿಯಾಗಿ ಹುಟ್ಟುಹಬ್ಬವನ್ನು ಆಚರಿಕೊಳ್ಳುತ್ತಿದ್ದರು.

ಖ್ಯಾತ ರಂಗಭೂಮಿ ಕಲಾವಿದ ದೀನಾನಾಥ್ ಮಂಗೇಶ್ಕರ್ ಪುತ್ರಿಯಾಗಿ ಲತಾ ಮಂಗೇಶ್ಕರ್ ಜನಿಸಿದ್ದು 1929ರಲ್ಲಿ। ತಂದೆ ಅಕಾಲಿಕ ಮರಣಕ್ಕೀಡಾದಾಗ 13ರ ಹರಯದಲ್ಲಿದ್ದ ಲತಾ ಅವರಿಗೆ ಸಂಸಾರದ ಹೊಣೆ ಹೆಗಲೇರಿತು. ಸಂಸಾರ ನೌಕೆಯನ್ನು ಸಾಗಿಸಲು ಮೊದಲು ಲತಾ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಹಾಗಾಗಿ ಅವರು ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ಹಾಡಲು ಅವಕಾಶಗಳು ದೊರೆತ ಬಳಿಕ ಗಾಯಕಿಯಾಗಿ ಬದಲಾದರು.

ಆರಂಭದಲ್ಲಿ ಲತಾ ಅವರಿಗೆ ನಟಿಯಾಗಿಯೇ ಮುಂದುವರಿಯುವ ಆಲೋಚನೆ ಇತ್ತು। 1947ರಲ್ಲಿ ಬಿಡುಗಡೆಯಾದ 'ಆಪ್ ಕಿ ಸೇವಾ ಮೆ' ಚಿತ್ರದಲ್ಲಿ ಹಾಡಲು ಮೊದಲ ಅವಕಾಶ ದೊರೆಯಿತು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. ಹಲವಾರು ಭಾಷೆಗಳಲ್ಲಿ ಹಾಡಿರುವ ಲತಾ ಮಂಗೇಶ್ಕರ್ ಕನ್ನಡ ಚಿತ್ರ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಎಂದು ಹಾಡಿದ್ದರು. ನಂತರ ಈ ಗಾನಕೋಗಿಲೆ ಕನ್ನಡಲ್ಲಿ ಹಾಡಲಿಲ್ಲ.

Thursday, September 25, 2008

ಡಾ.ರಾಜ್ ಸ್ಮಾರಕ ಅಭಿವೃದ್ಧಿಗೆ ಕಟ್ಟಾ ಭರವಸೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಧವಾರ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಗಣ್ಯರಿಗೆ ಹಾಗೂ 2007ರಲ್ಲಿ ಬಿಡುಗಡೆಯಾದ ಯಶಸ್ವಿ ಚಿತ್ರಗಳ, ನಿರ್ಮಾಪಕರ, ನಿರ್ದೇಶಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿತು। ಅಭಿಮಾನಿ ಸಾಗರದ ನಡುವೆ ತಾರೆಗಳು ಬೆಳಗ್ಗೆ 10.30ಕ್ಕೆ ಸರಿಯಾಗಿ ಬಸವೇಶ್ವರ ನಗರದ ಅಭಿಮಾನಿ ಸಭಾಂಗಣದಲ್ಲಿ ಸಂಗಮವಾಗಿದ್ದರು.
ಈ ಅಪರೂಪದ ಕಲರ್ ಫುಲ್ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಸಾಕ್ಷಿಯಾಯಿತು। 70-80ರ ದಶಕದಲ್ಲಿ ಕನ್ನಡ ಬೆಳ್ಳಿತೆರೆಯನ್ನು ಬೆಳಗಿದ ಜಯಂತಿ, ಜಯಮಾಲ, ಭಾರತಿ ಸೇರಿದಂತೆ ಹಲವಾರು ಕಲಾವಿದರು ಕಾರ್ಯಕ್ರಮದ ಹೈಲೈಟ್ ಆಗಿದ್ದರು.

ಡಾ।ರಾಜ್ ಸ್ಮಾರಕ ಅಭಿವೃದ್ಧಿಗೆ ಕಟ್ಟಾ ಭರವಸೆ
ಕಾರ್ಯಕ್ರಮಕ್ಕೆ ಆಗಮಿಸಿದ್ದ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡುತ್ತಾ, ಕನ್ನಡ ಭಾಷೆ, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿರುವ ಚಿತ್ರರಂಗ ಶ್ರೇಯೋಭಿವೃದ್ಧಿಗೆ ಸರ್ಕಾರ ಮುಂದಾಗಲಿದೆ ಎಂದರು। ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಎಲ್ಲ ಕಲಾವಿದರಿಗೆ ನೆರವು ನೀಡಲು ಸಿದ್ಧವಿದೆ ಎಂದರು. ಚಿತ್ರರಂಗದ ಕಾರ್ಮಿಕ ವರ್ಗ ಕಷ್ಟಪಟ್ಟು ದುಡಿದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಅವರ ಭವಿಷ್ಯಕ್ಕಾಗಿ ವಾಣಿಜ್ಯ ಮಂಡಳಿ ಭವಿಷ್ಯ ನಿಧಿ ಸ್ಥಾಪಿಸಬೇಕು. ಸರ್ಕಾರ ಇದಕ್ಕೆ ಬೇಕಾದ ಅಗತ್ಯ ನೆರವನ್ನು ನೀಡಲಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭರವಸೆ ನೀಡಿದರು. ಶೀಘ್ರದಲ್ಲೇ ಡಾ.ರಾಜ್ ಕುಮಾರ್ ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಹಿರಿಯ ಕಲಾವಿದೆ ಬಿ।ಸರೋಜಾದೇವಿ ಮಾತನಾಡುತ್ತಾ, ಕಲಾವಿದರೆಲ್ಲಾ ಒಗ್ಗಟ್ಟಾಗಬೇಕು. ಒಡಕುಗಳನ್ನು ಬಿಟ್ಟು ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಬೇಕು. ಡಾ.ರಾಜ್ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಮಾಪಕಿ ಪಾರ್ವತಮ್ಮ ಮಾತನಾಡುತ್ತಾ, ಚಿತ್ರರಂಗದ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದು ವಾಣಿಜ್ಯ ಮಂಡಳಿ ಉತ್ತಮ ಕೆಲಸ ಮಾಡಿದೆ ಎಂದು ಕೊಂಡಾಡಿದರು. ಈ ಕಾರ್ಯಕ್ರಮದ ಸಂಪ್ರದಾಯ ಮುಂದೆಯೂ ನಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ತಾರೆ ಡಾ।ಬಿ.ಸರೋಜಾದೇವಿ, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಶ್ರೀನಾಥ್, ಹಿರಿಯ ಚಿತ್ರ ಕಲಾವಿದ ಡಾ.ಕೆ.ಎಸ್.ಅಶ್ವಥ್, ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್, ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟಿ ಉಮಾಶ್ರೀ, ಮಧು ಬಂಗಾರಪ್ಪ, ಟಿ.ಎಸ್.ನಾಗಾಭರಣ, ಶೈಲಜಾ ಶ್ರೀಕಾಂತ್, ಬಿ.ಎಸ್.ಲಿಂಗದೇವರು, ಧನರಾಜ್, 'ಕೋಟಿ ಚನ್ನಯ್ಯ' ಚಿತ್ರದ ನಿರ್ದೇಶಕ ಆನಂದ್ ಪಿ ರಾಜು ಅವರನ್ನು ಅಭಿನಂದಿಸಲಾಯಿತು.
(ದಟ್ಸ್ ಕನ್ನಡ )

Tuesday, September 23, 2008

ದುಬೈ ಬಾಬು (ಉಪೇಂದ್ರ) ಹಿರೋಯಿನ್ ನಿಕಿತ


ಉಪೇಂದ್ರ ಅಭಿನಯದ ಮುಂದಿನ ಚಿತ್ರದಲ್ಲಿ ದಕ್ಷಿಣ ಭಾರತದಲ್ಲಿ ಬೇಡಿಕೆ ನಟಿ ನಿಕಿತಾ ನಟಿಸಲಿದ್ದಾರೆ. ಚಿತ್ರಕ್ಕೆ 'ದುಬೈಬಾಬು' ಎಂದು ಹೆಸರಿಸಲಾಗಿದೆ. ತೆಲುಗಿನಲ್ಲಿ ರವಿತೇಜ ಹಾಗೂ ನಯನತಾರಾ ನಟಿಸಿದ್ದ ದುಬೈ ಸೀನು ಚಿತ್ರದ ಕನ್ನಡ ಅವತರಣಿಕೆ ಇದಾಗಲಿದೆ. ನಾಗಣ್ಣ, ಶೈಲೇಂದ್ರ ಬಾಬು ಹಾಗೂ ಉಪೇಂದ್ರ ತಂಡದಿಂದ ಮತ್ತೊಂದು ಎರವಲು ಸಂಸಾರಿಕ ಚಿತ್ರ ತಯಾರಿಯ ಹಂತದಲ್ಲಿದೆ.

ಈ ಚಿತ್ರದ ಮೂಲಕ ನಿರ್ಮಾಪಕ ಶೈಲೇಂದ್ರ ಬಾಬು, ನಿರ್ದೇಶಕ ನಾಗಣ್ಣ, ನಟ ಉಪೇಂದ್ರ ಅವರ ಯಶಸ್ವಿ ಜೋಡಿ ಮತ್ತೆ ಒಂದಾಗಿದೆ. ಕುಟುಂಬ, ಗೌರಮ್ಮ ಅಂತಹ ರಿಮೇಕ್ ಆದರೂ ಕೌಟುಂಬಿಕ ಚಿತ್ರ ಕೊಟ್ಟು ಜನ ಮನಗೆದ್ದ ಸಾಧನೆ ಇವರ ಪಾಲಿಗಿದೆ.ಈ ಚಿತ್ರಕ್ಕೆ ಶ್ರೀಧರ್ ಅವರ ಸಂಗೀತವಿದ್ದು, ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೆ ಉಪೇಂದ್ರ ಅವರಿಗೆ ಸಾಹಸ ದೃಶ್ಯಗಳ ಅಭಿನಯ ಹೇಳಿಕೊಡಲಿದ್ದಾರೆ.

Thursday, September 18, 2008

ಗಿರೀಶ್ ಕಾಸರವಳ್ಳಿ "ಗುಲಾಬಿ ಟಾಕಿಸ್"



ಗಿರೀಶ್ ಕಾಸರವಳ್ಳಿ ಸಿನಿಮಾ ಅಂದರೆ ಅಲ್ಲಿ ಏನೋ ವಿಶೇಷ ಇರುತ್ತದೆ. ಅದು ಕಾದಂಬರಿ ಯೊಂದನ್ನು ಆಧರಿಸಿದ ಚಿತ್ರವಾದರೂ ಅಲ್ಲಿ ಕಾಸರವಳ್ಳಿ ಘಮಲು, ಕಲಾತ್ಮಕತೆಯ ಸೊಗಡು, ಮಣ್ಣಿನ ವಾಸನೆಯಿರುತ್ತದೆ. ಕೊನೆಗೊಂದು ಸಂದೇಶದ ಜತೆಗೆ ಬಿಡಿಸಲಾಗದ ಬದುಕಿನ ಸತ್ಯ ದರ್ಶನ. ಆ ಮೂಲಕ `ಇದಕ್ಕೆ ನೀವೇ ಉತ್ತರ ಕಂಡುಕೊಳ್ಳಿ' ಎಂದು ಪರೋಕ್ಷವಾಗಿ ಸಮಾಜಕ್ಕೆ ಸವಾಲು ಹಾಕುತ್ತಾರೆ ಕಾಸರವಳ್ಳಿ. ಅವರದೇ ಆದ ನಿರೂಪಣಾ ಶೈಲಿ, ನವಿರಾದ ಚಿತ್ರಕತೆ, ಸಹಜ ಸಂಭಾಷಣೆ ಕತೆಗೊಂದು ಸುವರ್ಣ ಚೌಕಟ್ಟು ಹಾಕುತ್ತದೆ.
ಹೊಸ ಪ್ರಯೋಗ ಗುಲಾಬಿ ಟಾಕೀಸು. ಇದು ಕತೆಗಾರ್ತಿ ವೈದೇಹಿಯವರ ಸಣ್ಣಕತೆಯ ಸಿನಿಮಾ ರೂಪಾಂತರ. ಆದರೆ ಆ ಕತೆಗೂ ಈ ಚಿತ್ರಕತೆಗೂ ಅಜಗಜಾಂತರ. ಮೂಲಕತೆಯ ಎಳೆ ಇಟ್ಟುಕೊಂಡು ಕಾಸರವಳ್ಳಿ ಅದಕ್ಕೆ ಪ್ರಸ್ತುತ ಜಗತ್ತಿನ ಆಗು ಹೋಗು ಮತ್ತು ಜಾಗತೀಕರಣದ ಲೇಪ ಹಚ್ಚುತ್ತಾರೆ. ಅದು ತನ್ನ ಸುಳಿಯಲ್ಲಿ ಮಾನವ ಸಂಕುಲವನ್ನು ಹೇಗೆ ಸೆಳೆಯುತ್ತಿದೆ, ನಗರೀಕರಣದ ಶಬ್ದ ಮಾಲಿನ್ಯ.
ರೂಪ ಪಡೆದು ನರನಾಡಿಗಳನ್ನು ಹೇಗೆ ನಾಟುತ್ತಿದೆ, ಒಂದೇ ಒಂದು ಟಿವಿ ಹೆಣ್ಣೊಬ್ಬಳ ಠೀವಿಯನ್ನೇ ಹೇಗೆ ಬದಲಿಸುತ್ತದೆ, ಬದುಕಿನ ದಿಕ್ಕನ್ನು ಹೇಗೆ ತಿರುಗಿಸುತ್ತದೆ, ಹಣದಾಹಿ ಗಂಡ ಮಾಡಿದ ತಪ್ಪಿಗೆ ಏನೂ ಅರಿಯದ, ತಪ್ಪು ಮಾಡದ ಹೆಂಡತಿ ಏಕೆ ಬಲಿಯಾದಳು, ಧರ್ಮ ಕರ್ಮಗಳು ಹೇಗೆ ರಕ್ತಸಂಬಂಧಕ್ಕೆ `ದಿಗ್ಬಂದನ' ಹಾಕುತ್ತವೆ ಎನ್ನುವ ಹಲವಾರು ಪ್ರಶ್ನಾರ್ಥಕ, ಉತ್ತರಾತೀತ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಗುಲಾಬಿ ಟಾಕೀಸು.
ಮೀನುಗಾರರ ಬದುಕು-ಬವಣೆ, ನಗರೀಕರಣ ದಿಂದಾಗುವ ದಿಢೀರ್ ಬದಲಾವಣೆ ಮುಂತಾದ ವಿಷಯಗಳು ಕೆಲವೇ ಗಂಟೆಯಲ್ಲಿ ಚರ್ಚೆಯಾಗುತ್ತವೆ. ಉಮಾಶ್ರೀ ಎನ್ನುವ ದೇಸಿ ಪ್ರತಿಭೆ ಬಗ್ಗೆ ಏನು ಹೇಳುವುದು? ಅವರು ಬರೀ ಅಭಿನಯಿಸಿಲ್ಲ, ಆ ಪಾತ್ರವೇ ತಾವಾಗಿದ್ದಾರೆ. ಗುಲಾಬಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಇಲ್ಲಿವರೆಗಿನ ಅವರದೇ ಪಾತ್ರಗಳನ್ನು ಮೀರಿಸಿದ್ದಾರೆ.
ಕುಂದಗನ್ನಡದ (ಕುಂದಾಪುರ ಸುತ್ತಮುತ್ತಲಿನ ಹಳ್ಳಿಗರ ಆಡುಭಾಷೆ)ಕಂಪು ಉದ್ದಕ್ಕೂ ಪಸರಿಸುತ್ತದೆ. ಇಲ್ಲಿಯ ವರೆಗೆ ಕಾಸರವಳ್ಳಿ ಸಿನಿಮಾ ಎಂದರೆ ಇಂದು ಒಂದು ವರ್ಗದ ಜನರಿಗೆ ಏನೋ ಒಂಥರಾಥರಾ. ಆದರೆ ಇಲ್ಲಿ ಅವೆಲ್ಲಕಿಂತ ವಿಭಿನ್ನ, ವಿಶೇಷವಾದ ಅಂಶ ಇದೆ ಎಂದೆನಿಸಿದರೆ ಅದಕ್ಕೆ ಉಮಾಶ್ರೀ ಯವರ ಲವಲವಿಕೆಯ ಅಭಿನಯ ಏಕೈಕ ಕಾರಣ. ಕೆ.ಜಿ. ಕೃಷ್ಣಮೂರ್ತಿ, ಎಂ.ಡಿ. ಪಲ್ಲವಿ ಮುಂತಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಾಮಚಂದ್ರ ಎಂದಿನಂತೆ ನಿಯತ್ತಾಗಿ, ಸಕತ್ತಾಗಿ ಕ್ಯಾಮರಾ ಹಿಡಿದಿದ್ದಾರೆ. ಅವರ ನೆರಳು ಬೆಳಕಿನ ಆಟವನ್ನು ನೋಡಿಯೇ ಸವಿಯಬೇಕು. ಛಾಯಾಗ್ರಹಣವೇ ಪಾತ್ರವಾಗುವುದೆಂದರೆ ಇದೇ ಇರಬೇಕು.
ಹಾಗಂತ ಇಲ್ಲಿ ಎಲ್ಲವೂ ಸರಿ ಇದೆ ಎಂದಲ್ಲ. ದ್ವಿತೀಯಾರ್ಧದ ಗಡಸು, ಮೊದಲಾರ್ಧಕ್ಕಿಲ್ಲ. ಹಾಗೇ ಯುದ್ಧದ ಪ್ರಸ್ತಾಪ ಗೊಂದಲ ಮೂಡಿಸುತ್ತದೆ. ಅದೇನೇ ಇದ್ದರೂ ಇದು ಕಾಸರವಳ್ಳಿ ಬತ್ತಳಿಕೆಯಲ್ಲಿದ್ದ ಒಂದು ಅಸ್ತ್ರ, ಮುಲಾಜಿಲ್ಲದೆ ಪ್ರಯೋಗ ಮಾಡಿದ್ದಾರೆ. ಅದು ನಾಟಲೇ ಬೇಕಾದ ಕೆಲವು ವರ್ಗದ ಜನರನ್ನಂತೂ ತಲುಪಿದೆ, ತಲುಪುತ್ತದೆ ಕೂಡ. ಅದನ್ನು ಕಾಸರವಳ್ಳಿ ಕರಾಮತ್ತು ಎಂದರೂ ತಪ್ಪಿಲ್ಲ. ಈ ಕರಾಮತ್ತನ್ನು ನೀವು ನೋಡಲೇಬೇಕು...
ಕರ್ಟೆಸಿ: ದಟ್ಸ್ ಕನ್ನಡ

Wednesday, September 10, 2008

ಪುನೀತ್ ವಿಗ್1 ಲಕ್ಷ

ಚಿತ್ರನಟರು ತಮ್ಮ ಕೇಶವಿನ್ಯಾಸವನ್ನು ಬದಲಾಯಿಸಿಕೊಳ್ಳಲು ವಿಗ್ ಬಳಸುವುದು ಸಾಮಾನ್ಯ ಸಂಗತಿ.ಬಕ್ಕತಲೆಯ ಕಲಾವಿದರು ಹಾಗೂ ನಾಯಕ ನಟರಿಗೆ ವಿಗ್ ಅನಿವಾರ್ಯ.
ತಲೆ ತುಂಬ ಕೂದಲಿರುವವರೂ ಚಿತ್ರವಿಚಿತ್ರ ಗೆಟಪ್ ಗಾಗಿ ವಿಗ್ ಬಳಸುವುದು ಈಗ ಮಾಮೂಲು.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ತಮ್ಮ ಹೊಸ ಚಿತ್ರ 'ರಾಜ್'ಗಾಗಿ ವಿಗ್ ಬಳಸುತ್ತಿದ್ದಾರೆ.
ಮುಂಬೈ ಕೇಶ ವಿನ್ಯಾಸಕರು ರೂಪಿಸಿರುವ ಈ ವಿಶೇಷ ವಿಗ್ ನ ಬೆಲೆ 1 ಲಕ್ಷ ರು. ಗಳು. ಇದಕ್ಕೂ ಮುನ್ನ ಅವರು 'ವೀರ ಕನ್ನಡಿಗ' ಚಿತ್ರದಲ್ಲಿ ವಿಗ್ ಉಪಯೋಗಿಸಿದ್ದರು. ಅದೊಂದು ತೆಲುಗು ಗೆಟಪ್ ವಿಗ್ ಆಗಿತ್ತು. ಆದರೆ ಈಗ ಬಳಸುತ್ತಿರುವ ವಿಗ್ ಯಾವ ಗೆಟಪ್ ದು ಎಂದು ಗೊತ್ತಾಗಿಲ್ಲ. ಮತ್ತೊಂದು ಮಾಹಿತಿಯ ಪ್ರಕಾರ, 'ರಾಜ್' ಚಿತ್ರದ ಕೆಲವೊಂದು ದೃಶ್ಯಗಳಿಗಷ್ಟೇ ಈ ವಿಶೇಷ ವಿಗ್ ಬಳಕೆಯಾಗುತ್ತಿದೆ. ಇನ್ನುಳಿದಂತೆ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಪುನೀತ್ ತಮ್ಮ ಅಸಲಿ ಕೇಶವನ್ನೇ ಪ್ರದರ್ಶಿಸಲಿದ್ದಾರೆ.ಈ ಬಗ್ಗೆ ಪುನೀತ್ ಮಾತನಾಡುತ್ತಾ, ಇದೊಂದು ವಿಶೇಷವಾಗಿ ವಿನ್ಯಾಸಗೊಳಿಸಿದ ವಿಗ್.
ಇದು ನನ್ನ ತಲೆಗೆ ಸರಿಯಾಗಿ ಹೊಂದಾಣಿಕೆಯಾಗಿದೆ. ಕೆಲವೊಂದು ದೃಶ್ಯಗಳಲ್ಲಿ ಮಾತ್ರ ಇದನ್ನು ಬಳಸುತ್ತಿದ್ದೇವೆ. ಉಳಿದಂತೆ ನಾನು ಸಹಜ ಗೆಟಪ್ ನಲ್ಲಿ ನಟಿಸಿದ್ದೇನೆ ಎಂದರು. ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಸೀತಿಭೈರವೇಶ್ವರ ಪ್ರೊಡಕ್ಷನ್ಸ್ ಬ್ಯಾನರಿನಡಿ ನಿರ್ಮಿಸಲಾಗುತ್ತಿದೆ. ಈ ಬಹುಕೋಟಿ ಚಿತ್ರವನ್ನು ಸುರೇಶ್ ಗೌಡ ಮತ್ತು ಶ್ರೀನಿವಾಸ್ ಮೂರ್ತಿ ನಿರ್ಮಿಸುತ್ತಿದ್ದಾರೆ. ಸಂಗೀತ ಸಂಯೋಜನೆ ವಿ.ಹರಿಕೃಷ್ಣ, ಛಾಯಾಗ್ರಹಣ ಎಸ್.ಕೃಷ್ಣ.

(ದಟ್ಸ್ ಕನ್ನಡ)

Tuesday, September 2, 2008

ಸ್ವರ್ಣಗೌರಿ ವ್ರತದ ಕಥೆ

ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ.ಈ ಗೌರಿ ಹಬ್ಬವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಸುಂದರವಾದ ಪೌರಾಣಿಕ ಕಥೆ ಚಾಲ್ತಿಯಲ್ಲಿದೆ.ಚಂದ್ರಪ್ರಭ ಎನ್ನುವ ಅರಸನು ಭೇಟೆಯಾಡಲು ಅರಣ್ಯಕ್ಕೆ ಹೋದಾಗ ಅಲ್ಲಿ ಒಂದು ಸುಂದರವಾದ ನೈಸರ್ಗಿಕ ಸಂಪತ್ತುಳ್ಳ ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣಗೌರಿ ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿರುವುದನ್ನು ಕಾಣುತ್ತಾನೆ.ಪೂಜೆಯ ನಂತರ ಪೂಜೆಯ ಮಹತ್ವದ ಬಗ್ಗೆ ತಮಗೆ ತಿಳಿಸಬೇಕು ಎಂದು ಕೇಳುತ್ತಾನೆ. ಆ ಅಪ್ಸರೆಯರು ವ್ರತದ ಬಗ್ಗೆ ತಿಳಿಸುವರು. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಇದನ್ನು ಭಾದ್ರಪದ ಶುದ್ಧ ತದಿಗೆ ದಿನ ಆಚರಿಸಬೇಕೆಂದು ತಿಳಿಸಿ 16 ಗಂಟು ಹಾಕಿದ ದಾರವನ್ನು ಕೊಡುತ್ತಾರೆ.ರಾಜನು ಅರಮನೆಗೆ ಬಂದ ನಂತರ ತನ್ನ ಇಬ್ಬರು ಪತ್ನಿಯರಿಗೆ ಆ ದಾರವನ್ನು ಕೊಡಲು, ಮೊದಲನೆ ಪತ್ನಿ ಆ ದಾರವನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆದಳು. ಆ ಗಿಡವು ದಾರದ ಮಹಿಮೆಯಿಂದ ತಕ್ಷಣ ಚಿಗುರಿ ಬೆಳೆಯತೊಡಗಿತು. ಅದನ್ನು ಕಂಡ ಕಿರಿಯ ಪತ್ನಿಯು ಆ ದಾರವನ್ನು ಧರಿಸಿ ರಾಜನು ಹೇಳಿದ ಕ್ರಮದಲ್ಲಿ ಸ್ವರ್ಣಗೌರಿ ವ್ರತವನ್ನು ಆಚರಿಸಿದಳು.
ನಂತರ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಸತಿಪತಿಯರು ಶಿವಲೋಕವನ್ನು ಹೊಂದಿ ಮುಕ್ತಿಯನ್ನು ಪಡೆದರೆಂಬ ಪ್ರತೀತಿ ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ.ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.
ಮುತ್ತೈದೆಯರು ಸ್ವರ್ಣಗೌರಿ ವ್ರತವನ್ನು ನಿಷ್ಠೆಯಿಂದ ಆಚರಿಸಿದಲ್ಲಿ ಖಂಡಿತವಾಗಿ ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹಯೋಗ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ ಎನ್ನುವುದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ.ಈಗಿನ ಆಧುನಿಕ ಯುಗದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ವಿವಿಧ ರೂಪದಲ್ಲಿ ತಯಾರಿಸಿದರೂ ಬಣ್ಣ ರಹಿತವಾದ ಮೂರ್ತಿಗಳು ಪೂಜೆಗೆ ಶ್ರೇಷ್ಠ ಎನ್ನುವುದು ನಂಬಿಕೆ. ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಜಪಿಸಿದಲ್ಲಿ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.

"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".