Wednesday, June 18, 2008

ರಮ್ಗೋಪಾಲ್ ವರ್ಮ ನ್ಯೂ ಹಿರೋಯಿನ್ ಅಮೃತಾ ಖಾನ್ವಿಲ್ಕರ್

ಬಾಲಿವುಡ್‌ನ ರಂಭೆ, ಮೇನಕೆ, ಊರ್ವಶಿಯರನ್ನು ಪರಿಚಯಿಸುವುದರಲ್ಲಿ ಬಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಎತ್ತಿದ್ದ ಕೈ. ಊರ್ಮಿಳಾ ಮಾತೊಂಡ್ಕರ್, ಅಂತರ ಮಾಲಿ, ನಿಶಾ ಕೊಠಾರಿ, ಜಿಯಾ ಖಾನ್‌ರ ಹೊಸ ಅನ್ವೇಷಣೆಗಳ ನಂತರ ವರ್ಮಾ ಮತ್ತೆ ಹುಡುಕಾಟದಲ್ಲಿ ನಿರತರಾದರು. ಆಡ್‌ಲ್ಯಾಬ್ಸ್‌ನ ಆಡಿಷನ್ ಗೆ ಬಂದಿದ್ದ ಅಮೃತಾ ಖಾನ್ವಿಲ್ಕರ್ ಎಂಬ ಬಳಕುವ ಬಳ್ಳಿ ಕಣ್ಣಿಗೆ ಬಿದ್ದು ಕಂಗಾಲಾದರು. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದರೆ ಇನ್ನೇನಾಗುತ್ತದೆ! ದೂರದರ್ಶನ ಜಾಹೀರಾತು ಹಾಗೂ ಸಿನಿಮಾ ಒಂದರಲ್ಲಿ ನಟಿಸಿದ ಅನುಭವವಿದೆ. ಜೊತೆಗೆ ಅಂದಚೆಂದವನ್ನು ಬೆರಳು ಮಾಡಿ ತೋರಿಸದಂತಹ ವೈಯಾರ. ವರ್ಮಾ ಸಿನಿಮಾಗೆ ಹೇಳಿ ಮಾಡಿಸಿದ ಅರ್ಹತೆ.ರಂಗೀಲಾ ಚಿತ್ರಕ್ಕಾಗಿ ಊರ್ಮಿಳಾರನ್ನು ಕರೆತಂದು ಕುಣಿಸಿದ್ದೇ ತಡ. ಊರ್ಮಿಳಾ ರಾತ್ರೋ ರಾತ್ರಿ ಪಡ್ಡೆಗಳ ಆರಾಧ್ಯ ದೈವವಾಗಿ ಬದಲಾದರು. ಹಾಗೆಯೇ ನಾಚ್ ಚಿತ್ರಕ್ಕಾಗಿ ಅಂತರಮಾಲಿ, ಜೇಮ್ಸ್ ಹಾಗೂ ಶಿವ ಚಿತ್ರಕ್ಕಾಗಿ ನಿಶಾ ಕೊಠಾರಿ, ನಿಶಬ್ದ್‌ನಲ್ಲಿ ನಟಿಸಿದ ಜಿಯಾಖಾನ್ ಯುವಕರ ಎದೆಬಡಿತವನ್ನು ಹೆಚ್ಚಿಸಿದರು. ವರ್ಮಾರ ವಿಭಿನ್ನ ಚಿತ್ರಕಥೆಗಳಿಗೆ ತಕ್ಕಂತೆ ಅಷ್ಟೇ ವಿಭಿನ್ನ ಬೆಡಗಿಯರು ಹಾಗೆ ಬಂದು ಹೀಗೆ ಮರೆಯಾದರು. ಈಗ ಅಮೃತಾ ಎಂಬ ಬಳುಕುವ ಬಳ್ಳಿ ವರ್ಮಾರ ಚಿತ್ರದಲ್ಲಿ ಅವಕಾಶಗಿಟ್ಟಿಸಿದ್ದಾರೆ.ವರ್ಮಾ ನಿರ್ದೇಶನದ, ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ 'ಫೂಂಕ್ ' ಹಾಗೂ 'ಕಾಂಟ್ರಾಕ್ಟ್' ಚಿತ್ರಗಳಲ್ಲಿ ಅಮೃತಾ ನಾಯಕಿಯಾಗಿ ಈಗಾಗಲೇ ಆಯ್ಕೆಯಾಗಿ ನಟಿಸುತ್ತಿದ್ದಾರೆ. ವರ್ಮಾ ನಿರ್ದೇಶನದ ಎರಡು ಚಿತ್ರಗಳು ಹಾಗೂ ಸೂರ್ಯ ನಿರ್ದೇಶನದ, ವರ್ಮಾ ನಿರ್ಮಾಣದ '340' ಎಂಬ ಚಿತ್ರದಲ್ಲಿ ನಟಿಸಲು ಅಮೃತಾ ಅಣಿಯಾಗಿದ್ದಾರೆ. ನಟಿಯಾಗಬೇಕು ಎಂದು ಕನಸು ಕಾಣುತ್ತಿದ್ದ ಈಕೆಗೆ 'ಮುಂಬೈ ಸಾಲ್ಸಾ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಅಲ್ಲಿಂದ ಮುಂದೆ ದಾರಿ ಕಾಣದೆ ಅಮೃತಾರ ಬದುಕು ಮೂರಾಬಟ್ಟೆಯಾಗಿತ್ತು. ಈಗ ವರ್ಮಾರ ಅವಕಾಶಗಳ ಮಹಾಪೂರವನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ.ಅಭಿನಯ ಹೇಗೋ ಏನೋ ಗೊತ್ತಿಲ್ಲ. ಆದರೆ ನೃತ್ಯದಲ್ಲಿ ಅನುಭವವಿದೆ. ಹಾಸ್ಯ, ಪ್ರೀತಿ, ಪ್ರೇಮ, ಪ್ರಣಯ... ಕಥೆಗಳ ಕಡೆಗೆ ಒಲವು. ರಿತೇಶ್ ದೇಶ್‌ಮುಖ್, ಜೂಹಿ ಚಾವ್ಲಾ ಈಕೆಯ ಇಷ್ಟದ ನಟ-ನಟಿಯರಂತೆ. ಎಂಥಾ ಪಾತ್ರವಾದರೂ ಸರಿ ಕರಣ್ ಜೋಹರ್ ಚಿತ್ರದಲ್ಲಿ ನಟಿಸಲು ಸಿದ್ಧವಿರುವುದಾಗಿ ಅಮೃತಾ ಜಂಭ ಕೊಚ್ಚಿಕೊಳ್ಳುತ್ತಾರೆ.
(ಕರ್ಟೆಸಿ: ದಟ್ಸ್‌ಕನ್ನಡ)

Monday, June 16, 2008

ಗೋಲ್ಡನ್ ಸ್ಟಾರ್ "ಗಾಳಿಪಟ" ಸಿಲ್ವರ್ ಜುಬ್ಲಿ

ಅಪಾರ ನಿರೀಕ್ಷೆಗಳ ಒತ್ತಡದೊಂದಿಗೆ ಭರ್ರನೆ ಮೇಲೆ ಹಾರಿ, ನಿರೀಕ್ಷೆಯ ಮಟ್ಟಕ್ಕೇರದೇ ಸಣ್ಣಗೆ ಗಿರಿಕಿ ಹೊಡೆದು, ಚಕ್ಕಾಚಿಕ್ಕಿಗೆ ಬೇರೆ ಯಾವುದೇ ಪ್ರತಿಸ್ಪರ್ಧಿಯಿಲ್ಲದೇ ಹಾಗೆಯೇ ಆಗಸದ ಮೇಲೇರಿದ 'ಗಾಳಿಪಟ' ಸೈಲೆಂಟಾಗಿ 25 ವಾರ ಓಡಿದ ಸಾಧನೆ ಮಾಡಿದೆ.ನಿರ್ದೇಶಕ ಯೋಗರಾಜ್ ಭಟ್ ಅವರ ಮಾಂತ್ರಿಕ ಸ್ಪರ್ಷ ಕಾಣದಿದ್ದರೂ ಆತ್ಮೀಯವಾದ ಕಥೆ, ಮನಬೆಚ್ಚಗೆ ಮಾಡುವ ಕಾಯ್ಕಿಣಿ ಹಾಡುಗಳು, ಗಣೇಶ್‌ರ ಅದೇ ನಗು ಚಿತ್ರವನ್ನು ಹಿಡಿದೆತ್ತಿದೆಯೆಂದರೆ ತಪ್ಪಾಗಲಾರದು. ಗಜ ಚಿತ್ರದ ನಂತರ ಈ ವರ್ಷದ ಎರಡನೇ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ.ಈ ಕಾರಣಕ್ಕಾಗಿಯೇ ಇತ್ತೀಚೆಗೆ ಪಿವಿಆರ್ ಚಿತ್ರಮಂದಿರದಲ್ಲಿ ಸಣ್ಣ ಸಂತೋಷಕೂಟವನ್ನು ಚಿತ್ರತಂಡ ಆಚರಿಸಿಕೊಂಡಿತು. ನಿರ್ದೇಶಕ ಯೋಗರಾಜ್ ಭಟ್, ಕಾರ್ಯನಿರ್ವಾಹಕ ನಿರ್ಮಾಪಕ ದಯಾಳ್, ನಾಯಕರಾದ ಗಣೇಶ್, ದಿಗಂತ್, ನಾಯಕಿಯರಾದ ಭಾವನಾ ರಾವ್ ಮತ್ತು ನೀತೂ ಸಂತೋಷಕೂಟದಲ್ಲಿ ಭಾಗವಹಿಸಿದ್ದರು. ದೊಡ್ಡದಾದ ಕೇಕ್ ಕಟ್ ಮಾಡಿ ಸಂತಸವನ್ನು ಚಿತ್ರತಂಡ ಹಂಚಿಕೊಂಡಿತು.

Saturday, June 14, 2008

ಸೆಕ್ಸ್ ವರ್ಕರ್ ಪಾತ್ರದಲ್ಲಿ ಐಶ್ವರ್ಯ ರೈಬಚ್ಚನ್


ತಮ್ಮನ್ನು ತಾವು ವಿಭಿನ್ನ ಪಾತ್ರಗಳಿಗೆ ತೊಡಗಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದರ ಕನಸು. ಆ ಕನಸು ಎಲ್ಲ ಕಲಾವಿದರಿಗೂ ಕೈಗೂಡುವುದಿಲ್ಲ.ಆದರೆ ಮಾಜಿ ವಿಶ್ವ ಸುಂದರಿ ಹಾಲಿ ಬಾಲಿವುಡ್ ಬಿನ್ನಾಣಗಿತ್ತಿ ಐಶ್ವರ್ಯ ರೈ ಬಚ್ಚನ್ ಮಾತ್ರ ಇದಕ್ಕೆ ಅಪವಾದ. ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಪ್ರೇಕ್ಷಕರ ಪಾಲಿಗೆ ಸದಾ ಕಾಡುವ ನಟಿ. ಪ್ರಸ್ತುತ ಐಶ್ವರ್ಯ ರೈ ಹಾಲಿವುಡ್ ಚಿತ್ರವೊಂದರಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಲಿದ್ದಾರೆ. 2001ರಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಪಡೆದ ಫ್ರೆಂಚ್ ರಿಮೇಕ್ ಚಿತ್ರ ಇದಾಗಲಿದೆ. ಐಶ್ವರ್ಯ ರೈ ಅವರೊಂದಿಗೆ ಸಹ ನಟಿಯಾಗಿ ಅಮೆರಿಕಾದ ಮೆರಿಲ್ ಸ್ಟ್ರೀಪ್ ನಟಿಸಲಿದ್ದಾರೆ. 'ಜೋಧಾ ಅಕ್ಬರ್' ಹಾಗೂ 'ಗುರು' ಚಿತ್ರಗಳ ಉತ್ತಮ ಅಭಿನಯದ ನಂತರಐಶ್ ನಟಿಸುತ್ತಿರುವ ಮತ್ತೊಂದು ವಿಭಿನ್ನ ಚಿತ್ರ ಇದಾಗಲಿದೆ.ಸದ್ಯಕ್ಕೆ ರೋಬೋಟ್ ಹಾಗೂ ಮಣಿರತ್ನಂ ಸರ್ ಅವರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ. ಹಾಲಿವುಡ್‌ನ ಈ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಬಿಗಿ ಒತ್ತಡದಲ್ಲಿ ನಟಿಸಬೇಕಾಗಿದೆ ಎನ್ನುತ್ತ್ತಾರೆ ಐಶ್. ಹಾಲಿವುಡ್‌ನ ಈ ಚಿತ್ರದಲ್ಲಿ ನಟಿಸಲು ಐಶ್‌ರನ್ನು ಕಾಡುತ್ತಿರುವುದು ಸಮಯ ಹೊಂದಾಣಿಕೆ. ಮಣಿರತ್ನಂರ ಹೊಸ ಚಿತ್ರದಲ್ಲಿ ನಟಿಸಲು ಆಕೆ ಸಜ್ಜಾಗುತ್ತಿದ್ದಾರೆ. ಸಮಯಾಭಾವದ ನಡುವೆ ಐಶ್ ಹಾಲಿವುಡ್ ಚಿತ್ರದಲ್ಲಿ ಹೇಗೆ ನಟಿಸುತ್ತಾರೆ ಎನ್ನುವುದೇ ಐಶ್ ಹಾಗೂ ಅವರ ಅಭಿಮಾನಿಗಳಿಗೆ ಕಾಡುತ್ತಿರುವ ಸಮಸ್ಯೆ.'ಬ್ರೈಡ್ ಅಂಡ್ ಪ್ರೆಜ್ಯೂಡೀಸ್', 'ದಿ ಮಿಸ್ಟ್ರೆಸ್ ಆಫ್ ಸ್ಪೈಸಸ್', 'ಪ್ರೊವೊಕ್ಡ್' ಹಾಗೂ 'ದ ಲಾಸ್ಟ್ ಲೆಜಿಯನ್ ' ಚಿತ್ರಗಳ ನಂತರ ಐಶ್ ನಟಿಸುತ್ತಿರುವ ಮತ್ತೊಂದು ಆಂಗ್ಲ ಚಿತ್ರ ಇದು. ಹರಾಲ್ಡ್ ನಿರ್ದೇಶನದ ಹಾಲಿವುಡ್‌ನ ಹಾಸ್ಯ ಪ್ರಧಾನ ಚಿತ್ರ 'ದಿ ಪಿಂಕ್ ಪಾಂಥರ್ ಡೀಕ್ಸ್' ತೆರೆ ಕಾಣಬೇಕಾಗಿದೆ. ಇದೆಲ್ಲದರ ನಡುವೆ ಹಾಲಿವುಡ್‌ನ ಇನ್ನೊಂದು ಚಿತ್ರಕ್ಕಾಗಿ ಅಮಿತಾಬ್ ಸೊಸೆ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಐಶ್ ಬಾಲಿವುಡ್‌ನಿಂದ ಹಾಲಿವುಡ್‌ನತ್ತ ಮುಖ ಮಾಡಿ ಎತ್ತರೆತ್ತರಕ್ಕೆ ಏರುತ್ತಿದ್ದಾರೆ.
(ಕರ್ಟೆಸಿ: ದಟ್ಸ್ ಕನ್ನಡ)

Wednesday, June 11, 2008

"ಕೇರಾಫ್ ಪುಟ್ ಪಾತ್" ಚಿತ್ರಕ್ಕೆ ಸ್ವರ್ಣಕಮಲದ ಗರಿ

54ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕನ್ನಡದ ಮೂರು ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾದ್ದು ಉತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ಮಾ.ಕಿಶನ್ ನಟಿಸಿ, ನಿರ್ದೇಶಿಸಿದ 'ಕೇರಾಫ್ ಪುಟ್ ಪಾತ್' ಚಿತ್ರಕ್ಕೆ ಸ್ವರ್ಣಕಮಲ, ಟಿ.ಎಸ್.ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರ ಅತ್ಯುತ್ತಮ ಭಾವೈಕ್ಯತೆ ಚಿತ್ರ ಹಾಗೂ ಬಿ.ಎಸ್.ಲಿಂಗದೇವರು ನಿರ್ದೇಶನದ 'ಕಾಡಬೆಳದಿಂಗಳು' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ.
ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಇದುವರೆಗೂ ಮೂರು ಸಲ ಭಾವೈಕ್ಯತೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಲ್ಲರಳಿ ಹೂವಾಗಿ ಚಿತ್ರ ಉತ್ತಮ ಅಭಿರುಚಿಯ ಚಿತ್ರವಾಗಿದೆ. ಅಪಾ ಶ್ರದ್ಧೆಯಿಂದ ಈ ಚಿತ್ರವನ್ನು ತೆರಗೆ ತರಲಾಗಿತ್ತು. ನಮ್ಮ ಪರಿಶ್ರಮ ಗುರುತಿಸಿ ಪ್ರಶಸ್ತಿ ಘೋಷಿಸಿರುವುದು ಅತೀವ ಸಂತಸವಾಗಿದೆ ಎಂದು ಹೇಳಿದರು. ಕನ್ನಡ ಚಿತ್ರರಂಗಕ್ಕೆ ಉತ್ತಮವಾದ ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರ ನೀಡಬೇಕು ಎನ್ನುವ ಆಸೆ ಅನೇಕ ದಿನಗಳಿಂದ ಮನಸ್ಸಿನಲ್ಲಿತ್ತು. ಮಧು ಬಂಗಾರಪ್ಪ ಬಂಡವಾಳ ಹೂಡಲು ಮುಂದಾದಾಗ ಕಲ್ಲರಳಿ ಹೂವಾಗಿ ಚಿತ್ರ ಸಿದ್ಧವಾಯಿತು. ತುಂಬಾ ಅಚ್ಚುಕಚ್ಚಾಗಿ ತೆರೆಗೆ ತರಲಾಗಿತ್ತು. ಚಿತ್ರ ಅಷ್ಟೇನೂ ಯಶಸ್ಸು ಕಾಣದಿದ್ದರೂ, ಒಂದು ಉತ್ತಮ ಚಿತ್ರ ಮಾಡಿರುವ ನೆಮ್ಮದಿ ಇತ್ತು ಎಂದು ನಾಗಾಭರಣ ವಿಶ್ವಾಸದಿಂದ ಹೇಳಿದರು.
ಸ್ವರ್ಣಕಮಲ ಪ್ರಶಸ್ತಿಗೆ ಪಾತ್ರನಾಗಿರುವ ಬಾಲ ಪ್ರತಿಭೆ ಮಾ. ಕಿಶನ್ ಚಿಕ್ಕ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ್ದಾರೆ. 'ಕೇರಾಫ್ ಪುಟ್ ಪಾತ್' ಮಕ್ಕಳ ವಿಭಾಗದ ಅತ್ಯುತ್ತಮ ಚಿತ್ರಕ್ಕೆ ಆಯ್ಕೆಯಾಗುವ ಮೂಲಕ ಸ್ವರ್ಣಕಮಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಕುರಿತು ಮಾತನಾಡಿದ ಕಿಶನ್, ನನಗೆ ತುಂಬಾ ಸಂತೋಷವಾಗಿದೆ. ಪ್ರಶಸ್ತಿಯನ್ನು ನಿರೀಕ್ಷಿರಲಿಲ್ಲ. ಅನಿರೀಕ್ಷಿತವಾಗಿ ಬಂದಿರುವ ಪ್ರಶಸ್ತಿಯಿಂದ ಇನ್ನೊಂದು ಚಿತ್ರ ನಿರ್ಮಿಸುವ ಕನಸಿನ ಮೊಳಕೆ ಒಡೆಯತೊಡಗಿದೆ ಎಂದು ಹೇಳಿದರು.
(ಕರ್ಟೆಸಿ: ದಟ್ಸ್ ಕನ್ನಡ)

Saturday, June 7, 2008

ಯೋಗರಾಜ ಭಟ್ಟರ ಜತೆ ಲಗೋರಿ ಆಡಲಿರುವ ಪುನೀತ್ ರಾಜ್ ಕುಮಾರ್

"ಮುಂಗಾರುಮಳೆಗೂ ಮುನ್ನ ಎರಡೂ ಮೂರು ಸ್ಕ್ರಿಪ್ಟ್ ಹಿಡಿದುಕೊಂಡು ವಜ್ರೇಶ್ವರಿ ಆಫೀಸ್, ಡಾ. ರಾಜ್ ಮನೆ ಕಡೆಗೆ ತಿರುಗಿದಷ್ಟೇ ಬಂತು. ಯಾವುದೂ ಗಿಟ್ಟಲಿಲ್ಲ. ಆದರೆ ಒಮ್ಮೆ ಅದೃಷ್ಟ ಖುಲಾಯಿಸಿದ ಮೇಲೆ ಎಲ್ಲರೂ ಕೇಳುವವರೇ" ಇದು ಕೀರ್ತಿ ಶಿಖರವೇರಿರುವ ಯೋಗರಾಜ ಭಟ್ಟರ ಹಣೆಬರಹ. ಎರಡು ಮೂರು ಚಿತ್ರ ಮಾಡಿ ವಿಮರ್ಶಕರಿಂದ ಸೈ ಎನಿಸಿಕೊಂಡರೂ ಪ್ರೇಕ್ಷಕರ ಮೆಚ್ಚುಗೆಯಿಂದ ದೂರಾಗಿದ್ದ ಭಟ್ಟರನ್ನು ಯಾರೂ ಪುರಸ್ಕರಿಸದ ಕಾಲವದು.ಆ ಕಾಲದಲ್ಲಿ ಪುನೀತ್ ಅವರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಎಂದು ಆಸೆಪಟ್ಟು ಮುಂಗಾರು ಮಳೆ, ಗಾಳಿಪಟ ಎಂದೆಲ್ಲಾ ರಾಜ್ ಪರಿವಾರದವರ ಹತ್ತಿರಹೋದರೂ ಕೂಡ ಪ್ರಯೋಜನವಾಗಿರಲಿಲ್ಲ. ಆದರೂ ಗಣೇಶ್ ಅದೃಷ್ಟ, ಭಟ್ಟರ ತಂಡದ ಪರಿಶ್ರಮ ಬಿಗ್ ಬ್ಯಾನರ್ ನೆರವಿಲ್ಲದೆ ಯಶಸ್ವಿಯಾಗಿದ್ದು ಈಗ ಇತಿಹಾಸ.ಎಲ್ಲಕ್ಕೂ ಕಾಲ ಕೂಡಿ ಬರಬೇಕಲ್ಲ. ರಾಘಣ್ಣ ಭರವಸೆ ನೀಡಿದಂತೆ, ಇಂದು ಯೋಗರಾಜ್ ಭಟ್ಟರಿಗೆ ಪುನೀತ್ ರಾಜ್ ಅವರನ್ನು ನಿರ್ದೇಶಿಸುವ ಅವಕಾಶ ದೊರೆತಿದೆ. ಅಂತೂ ಇಂತೂ ಕಾಲ ಕೂಡಿ ಬಂತು ಎಂದು ಎಂದುಕೊಂಡ ಭಟ್ಟರಿಗೆ, ಸಾಥಿಯಾಗಿ ನಿಲ್ಲಲು ಕನ್ನಡದ ಮಟ್ಟಿಗೆ ಬಿಗ್ ಬ್ಯಾನರ್ ಎನ್ನಬಹುದಾದ ರಾಕ್ ಲೈನ್ ಪ್ರೊಡಕ್ಷನ್ ಮುಂದೆ ಬಂದಿದೆ.'ಲಗೋರಿ 'ಎಂಬ ಕ್ಯಾಚಿ ಹೆಸರನ್ನು ಆಗಲೇ ರಿಜಿಸ್ಟರ್ ಮಾಡಿದ್ದಾರೆ ರಾಕ್ ಲೈನ್ ವೆಂಕಟೇಶ್, ಭಟ್ಟರ ಚಿತ್ರದಲ್ಲಿ ಪುನೀತ್ ಕುಣಿಯುವುದಂತೂ ಖಚಿತವಾಗಿದೆ. ಮುಂಗಾರುಮಳೆ, ಗಾಳಿಪಟದಲ್ಲಿ ಕೈತಪ್ಪಿದ ಅವಕಾಶ ಪುನೀತ್ ಈಗ ಲಭಿಸಿದೆ. ಪ್ರತಿಭಾವಂತ ಪುನೀತ್, ಕ್ರಿಯೇಟಿವ್ ನಿರ್ದೇಶಕ ಯೋಗರಾಜ್ ಅವರ ಸಂಗಮದಿಂದ ಉತ್ತಮ ಚಿತ್ರ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ .ಏನಂತೀರಾ?
(ಕರ್ಟೆಸಿ: ದಟ್ಸ್ ಕನ್ನಡ)